ಬೆಂಗಳೂರು:ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಚುನಾವಣೆಗೆ ಸಕಲ ಸಿದ್ಧತೆ ನಡೆಸಿದ್ದು, ಇಂದಿನಿಂದ ಕಟ್ಟುನಿಟ್ಟಿನ ನೀತಿ ಸಂಹಿತೆ ಜಾರಿಯಾಗಿದೆ.
ರಾಜ್ಯದಲ್ಲಿ ಏಪ್ರಿಲ್ 26 ಮತ್ತು ಮೇ 7ರಂದು ತಲಾ 14 ಲೋಕಸಭೆ ಕ್ಷೇತ್ರಗಳಂತೆ 28 ಕ್ಷೇತ್ರಗಳಲ್ಲಿ ಚುನಾವಣೆಗೆ ವೇದಿಕೆ ಸಜ್ಜಾಗಿದೆ. ಏಪ್ರಿಲ್ 26 ರಂದು ರಾಜ್ಯದಲ್ಲಿ ನಡೆಯಲಿರುವ 14 ಲೋಕಸಭೆ ಕ್ಷೇತ್ರಗಳ ಚುನಾವಣೆಗೆ ಮಾ.28 ರಂದು ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಏ.4 ಆಗಿದ್ದು, ಹಿಂಪಡೆಯಲು ಏ.8 ಅಂತಿಮ ದಿನವಾಗಿದೆ.
ಮೊದಲ ಹಂತದಲ್ಲಿ ಉಡುಪಿ - ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ (ಎಸ್‌ಸಿ), ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ (ಎಸ್‌ಸಿ), ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಹಾಗೂ ಕೋಲಾರ (ಎಸ್‌ಸಿ) ಸೇರಿ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಮೇ 7ರಂದು ನಡೆಯಲಿರುವ ಎರಡನೇ ಹಂತದ ಚುನಾವಣಾ ಪ್ರಕ್ರಿಯೆಗೆ ಅಧಿಸೂಚನೆ ಏಪ್ರಿಲ್ 12ರಂದು ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆಗೆ ಏ.19 ಕೊನೆಯ ದಿನವಾಗಿದ್ದು, ಏ.20 ರಂದು ನಾಮಪತ್ರ ಪರಿಶೀಲನೆ ನಡೆದರೆ, ನಾಮಪತ್ರ ವಾಪಸ್ ತೆಗೆದುಕೊಳ್ಳಲು ಏ.22 ಅಂತಿಮ ಅವಕಾಶವಾಗಿದೆ. ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ (ಎಸ್‌ಸಿ), ಗುಲ್ಬರ್ಗಾ (ಎಸ್‌ಸಿ), ರಾಯಚೂರು (ಎಸ್‌ಟಿ), ಬೀದರ್, ಕೊಪ್ಪಳ, ಬಳ್ಳಾರಿ (ಎಸ್‌ಟಿ), ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಹಾಗೂ ಶಿವಮೊಗ್ಗ ಸೇರಿ 14 ಕ್ಷೇತ್ರಗಳಲ್ಲಿ ಎರಡನೇ ಹಂತದಲ್ಲಿ ಚುನಾವಣೆ ಇರಲಿದೆ.
5,42,54,500 ಮತದಾರರು:ಬೆಂಗಳೂರಿನಲ್ಲಿ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಒಟ್ಟು 5,42,54,500 ಮತದಾರರಿದ್ದಾರೆ. 2,71,66,220 ಪುರುಷರು ಹಾಗೂ 2,70,81,748 ಮಂದಿ ಮಹಿಳಾ ಮತದಾರರಿದ್ದಾರೆ. 11,24,622 ಯುವ ಮತದಾರರಿದ್ದು, 6,12,154 ದಿವ್ಯಾಂಗ ಮತದಾರರು, 85 + ವಯಸ್ಸಿನವರು 5,70,168 ಜನ, 100+ ವಯಸ್ಸಾದ 11,000 ಮಂದಿ ಹಾಗೂ 38,794 ಬುಡಗಟ್ಟು ಜನಾಂಗದವರಿದ್ದಾರೆ. 31,74,098 ಮತದಾರರೊಂದಿಗೆ ಬೆಂಗಳೂರು ಉತ್ತರವು ಅತಿ ಹೆಚ್ಚು ಮತದಾರರ ಇರುವ ಕ್ಷೇತ್ರವಾಗಿದ್ದರೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಅತಿ ಕಡಿಮೆ 15,72,958 ಮತದಾರರಿದ್ದಾರೆ.
ಒಟ್ಟೂ 58,834 ಮತಗಟ್ಟೆಗಳು ಇರಲಿದ್ದು, 1,10,946 ಮತಯಂತ್ರಗಳು ಬ್ಯಾಲೆಟ್ ಯುನಿಟ್, 76,667 ಕಂಟ್ರೋಲ್ ಯುನಿಟ್ ಹಾಗೂ 82,575 ವಿವಿಪ್ಯಾಟ್ಗಳಿವೆ ಎಂದು ಮುಖ್ಯ ಚುನಾವಣಾಧಿಕಾರಿ ವಿವರಿಸಿದರು.
ವಿಚಕ್ಷಣಾ ದಳಗಳ ಕಣ್ಗಾವಲು:ಇಂದಿನಿಂದ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಹೀಗಾಗಿ, ಚುನಾವಣಾ ಆಯೋಗವು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳ ಮೇಲೆ ಹದ್ದಿನ ಕಣ್ಣಿಡಲಿದೆ. ಅದಕ್ಕಾಗಿ 2,357 ಕ್ಷಿಪ್ರ ಪಡೆ, 2,669 ಸ್ಥಿರ ಕಣ್ಗಾವಲು ತಂಡ, 647 ವಿಡಿಯೋ ಕಣ್ಗಾವಲು ತಂಡ, 258 ಲೆಕ್ಕಪರಿಶೋಧಕ ಟೀಂಗಳು ಹಾಗೂ 257 ವಿಡಿಯೋ ವೀಕ್ಷಣೆ ತಂಡಗಳನ್ನು ನಿಯೋಜಿಸಲಾಗಿದೆ. ಅಂತಾರಾಜ್ಯ ಗಡಿ ಚೆಕ್ಪೋಸ್ಟ್ ಹಾಗೂ ಇತರ ಚೆಕ್ಪೋಸ್ಟ್ಗಳನ್ನು ರಚಿಸಲಾಗಿದೆ. 172 ಪೊಲೀಸ್ ಇಲಾಖೆಯ ಚೆಕ್ಪೋಸ್ಟ್ ಹಾಗೂ 40 ಅಬಕಾರಿ ಚೆಕ್ಪೋಸ್ಟ್ ಇರಲಿವೆ ಎಂದು ತಿಳಿಸಿದರು.
537.51 ಕೋಟಿ ರೂ. ಮೌಲ್ಯದ ನಗದು, ಮದ್ಯ, ಉಡುಗೊರೆ ಜಪ್ತಿ:2023ರ ಆ.1ರಿಂದ 2024ರ ಮಾರ್ಚ್ 14ರವರೆಗೆ ಇಡಿ, ಐಟಿ ಹಾಗೂ ಪೊಲೀಸ್ ಇಲಾಖೆಗಳು ಸುಮಾರು 537.51 ಕೋಟಿ ರೂ. ನಗದು, ಮದ್ಯ ಮತ್ತು ಉಡುಗೋರೆಗಳನ್ನು ಜಪ್ತಿ ಮಾಡಿವೆ. ಇದರಲ್ಲಿ 151 ಕೋಟಿ ರೂ. ಅಕ್ರಮ ನಗದು, 42.14 ಕೋಟಿ ಮೌಲ್ಯದ 8,09,321 ಲೀಟರ್ ಮದ್ಯ, 126.47 ಕೋಟಿ ಮೊತ್ತದ ಡ್ರಗ್ಸ್ ಹಾಗೂ 482.67 ಕೋಟಿ ಮೊತ್ತದ 482 ಕೆ.ಜಿ. ಚಿನ್ನ ಮತ್ತು 93 ಲಕ್ಷ ರೂ. ಮೊತ್ತದ 660 ಕೆಜಿ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ 4,710 ಎಫ್ಐಆರ್ ದಾಖಲಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಮಾಹಿತಿ ನೀಡಿದರು.
ಇದನ್ನೂ ಓದಿ:7 ಹಂತಗಳಲ್ಲಿ ಲೋಕಸಭಾ ಚುನಾವಣೆ: ಜೂನ್ 4ಕ್ಕೆ ಫಲಿತಾಂಶ