ಬೆಂಗಳೂರು:ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ, ತಮಿಳುನಾಡಿನ ಡಿಎಂಕೆ ಸರ್ಕಾರ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಸಮಾಜಘಾತುಕ ಶಕ್ತಿಗಳನ್ನು ಪೋಷಿಸುವುದು ಈ ಪಕ್ಷಗಳ ಕಾರ್ಯಸೂಚಿ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ವಾಗ್ದಾಳಿ ನಡೆಸಿದ್ದಾರೆ.
ಅಣ್ಣಾಮಲೈ ಅವರಿಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಜಯನಗರ, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್ ಶೋ ನಡೆಸಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಈ ಬಾರಿ ಹೊಸ ಅಲೆ ಸೃಷ್ಟಿಯಾಗಿದೆ. ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ನನ್ನ ಸಹೋದರ ತೇಜಸ್ವಿ ಸೂರ್ಯರನ್ನು ಗೆಲ್ಲಿಸಿ':ಅಭ್ಯರ್ಥಿ ತೇಜಸ್ವಿ ಸೂರ್ಯ ಚಿಕ್ಕ ವಯಸ್ಸಿನಲ್ಲೇ ಸಂಸದರಾಗಿ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿಯೂ ಯುವಶಕ್ತಿಗೆ ಸ್ಫೂರ್ತಿ ತುಂಬುತ್ತಿದ್ದಾರೆ. ಸೂರ್ಯ ಅವರ ಕಾರ್ಯವೈಖರಿಯಿಂದ ಅತ್ಯುತ್ತಮ ಯುವ ಸಂಸದ ಗೌರವ ಸಿಕ್ಕಿದೆ. ಇಂತಹವರು ಲೋಕಸಭೆಯಲ್ಲಿ ಬೆಂಗಳೂರು ದಕ್ಷಿಣವನ್ನು ಪ್ರತಿನಿಧಿಸಿರುವುದರಿಂದ ಬೆಂಗಳೂರಿಗೆ ಅನೇಕ ಯೋಜನೆಗಳು ಬರಲು ಸಾಧ್ಯವಾಗಿದೆ. ಬೆಂಗಳೂರಿನ ಅಭಿವೃದ್ಧಿ ಬಗ್ಗೆ ತೇಜಸ್ವಿ ಸೂರ್ಯಗೆ ಅನೇಕ ಕನಸುಗಳಿವೆ. ನನ್ನ ಸಹೋದರ ತೇಜಸ್ವಿಯನ್ನು ಅಧಿಕ ಮತಗಳ ಅಂತರದಿಂದ ಮತ್ತೊಮ್ಮೆ ಗೆಲ್ಲಿಸಿ, ಆಶೀರ್ವದಿಸಿ ಎಂದು ಅವರು ಮನವಿ ಮಾಡಿದರು.