ಸಚಿವ ಎಚ್.ಕೆ.ಪಾಟೀಲ್ (ETV Bharat) ಬೆಂಗಳೂರು:ರಾಜ್ಯಪಾಲರ ಮುಂದೆ ಪ್ರಾಸಿಕ್ಯೂಷನ್‌ಗೆ ಬಾಕಿ ಇರುವ ಪ್ರಕರಣಗಳ ಬಗ್ಗೆ ಶೀಘ್ರ ತೀರ್ಮಾನ ತೆಗೆದುಕೊಳ್ಳುವಂತೆ ರಾಜ್ಯಪಾಲರಿಗೆ ಸಲಹೆ ನೀಡುವ ನಿರ್ಧಾರವನ್ನು ಇಂದಿನ ಸಚಿವ ಸಂಪುಟ ಸಭೆ ಕೈಗೊಂಡಿತು.
ವಿಧಾನಸೌಧದಲ್ಲಿ ಇಂದು ಏಕಕಾಲಕ್ಕೆ ಎರಡು ಸಚಿವ ಸಂಪುಟ ಸಭೆ ನಡೆದಿದ್ದು, ವಿಶೇಷ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಒಂದು ಸಂಪುಟ ಸಭೆ ನಡೆದರೆ, ಮತ್ತೊಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಭೆಯ ನಂತರ ವಿವರಣೆ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್, ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿರುವ ಪ್ರಕರಣಗಳ ಬಗ್ಗೆ ರಾಜ್ಯಪಾಲರು ನಿರ್ಧಾರ ಕೈಗೊಳ್ಳಬೇಕು ಎಂಬ ಸಲಹೆ ನೀಡುವ ತೀರ್ಮಾನ ಕೈಗೊಳ್ಳಲಾಯಿತು ಎಂದು ಹೇಳಿದರು.
ಸಿಎಂ ಅಧ್ಯಕ್ಷತೆಯಲ್ಲಿ 35 ವಿಷಯಗಳ ಕುರಿತು ಚರ್ಚೆ ನಡೆಸಿದ್ದೇವೆ. ರಾಜ್ಯಪಾಲರ ಬಳಿ ಪ್ರಾಸಿಕ್ಯೂಷನ್‌ಗೆ ಬಾಕಿಯಿರುವ ಹಲವು ಪ್ರಕರಣಗಳ ಕುರಿತು ಚರ್ಚಿಸಿದ್ದು, ಇನ್ನು ಕೆಲವು ಪ್ರಕರಣಗಳು ಲೋಕಾಯುಕ್ತದಿಂದ ರಾಜ್ಯಪಾಲರಿಗೆ ಹೋಗಿವೆ. ಕೆಲವು ತನಿಖಾ ಸಂಸ್ಥೆಗಳ ವರದಿ ರಾಜ್ಯಪಾಲರಿಗೆ ಸಲ್ಲಿಕೆಯಾಗಿದೆ. ಹಲವು ಅನುಮೋದನೆ ಅರ್ಜಿಗಳು ರಾಜ್ಯಪಾಲರ ಸಮಕ್ಷಮದಲ್ಲಿ ಬಾಕಿ ಇವೆ. ಈ ಅರ್ಜಿಗಳಲ್ಲಿ ಕೆಲವು ಚಾರ್ಜ್‌ಶೀಟ್ ಸಲ್ಲಿಕೆಗೆ ಒಪ್ಪಿಗೆ ಬಾಕಿ ಇದೆ ಎಂದರು.
ಭ್ರಷ್ಟಾಚಾರ ತಡೆ ಕಾಯಿದೆ ಸೆಕ್ಷನ್ 19ರಡಿ ಅನುಮೋದನೆಗೆ ಬಾಕಿ ಇದೆ. ಸೆಕ್ಷನ್ 17ಎ ಅಡಿಯಲ್ಲೂ ರಾಜ್ಯಪಾಲರ ಪೂರ್ವಾನುಮತಿಗೆ ಬಾಕಿ ಇದೆ. ಹಾಗಾಗಿ, ಈ ಎಲ್ಲಾ ಪ್ರಕರಣಗಳ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳುವಂತೆ ಸಂವಿಧಾನದ 163ನೇ ವಿಧಿ ಅನ್ವಯ ರಾಜ್ಯಪಾಲರಿಗೆ ಸಲಹೆ ನೀಡಲು ಸಂಪುಟ ನಿರ್ಣಯ ತೆಗೆದುಕೊಂಡಿದೆ ಎಂದು ಅವರು ವಿವರಿಸಿದರು.
ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಎಸ್‌ಐಟಿ ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದೆ. ಅದೇ ರೀತಿ ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಹಾಗೂ ಜನಾರ್ದನ ರೆಡ್ಡಿ ವಿರುದ್ಧದ ಪ್ರಕರಣಗಳಿಗೂ ಸಂಬಂಧಪಟ್ಟಂತೆ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿಯನ್ನು ತನಿಖಾ ಸಂಸ್ಥೆಗಳು ಕೋರಿವೆ. ರಾಜ್ಯಪಾಲರ ಮುಂದೆ ಭ್ರಷ್ಟಾಚಾರ ತಡೆ ಕಾಯ್ದೆ 1988ರ ಅಡಿಯಲ್ಲಿ ತನಿಖಾ ಸಂಸ್ಥೆಗಳು ಸಲ್ಲಿಸಿದ್ದ ಪ್ರಾಸಿಕ್ಯೂಷನ್ ಅನುಮತಿ ಅರ್ಜಿ ಬಾಕಿ ಇದೆ ಎಂದರು.
ಕುಮಾರಸ್ವಾಮಿ ಅವರ ವಿರುದ್ಧ 2023ರ ನವೆಂಬರ್ 21ರಂದು ರಾಜ್ಯಪಾಲರಿಗೆ ಅರ್ಜಿ ಸಲ್ಲಿಕೆಯಾಗಿದೆ. ಮಾಜಿ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ 2021ರ ಡಿಸೆಂಬರ್ 9ರಂದು ರಾಜ್ಯಪಾಲರಿಗೆ ಅರ್ಜಿ ಸಲ್ಲಿಕೆಯಾಗಿದೆ. ಅದೇ ರೀತಿ ಮಾಜಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ 2024ರ ಫೆ.26ರಂದು ಅರ್ಜಿ ಸಲ್ಲಿಕೆಯಾಗಿದೆ.
ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಅನುಮತಿ ಕೋರಲಾಗಿತ್ತು. ಕುಮಾರಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಲೋಕಾಯುಕ್ತ ಎಸ್ಐಟಿಗೆ ಸ್ಪಷ್ಟೀಕರಣ ಕೋರಿದ್ದರು. ಇದಕ್ಕೆ ಅಗತ್ಯವಿರುವ ಸ್ಪಷ್ಟೀಕರಣವನ್ನು ಪತ್ರದ ಮೂಲಕ ಎಸ್ಐಟಿ ನೀಡಿದೆ. ಇದೀಗ ಸಂಪುಟದಲ್ಲಿ ಈ ಕುರಿತಾಗಿ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಪ್ರಾಸಿಕ್ಯೂಷನ್ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳಲು ರಾಜ್ಯಪಾಲರಿಗೆ ಸಂವಿಧಾನದ 163ನೇ ವಿಧಿ ಅನ್ವಯ ನೆರವು ಹಾಗೂ ಸಲಹೆ ನೀಡುವ ಸಂಪುಟ ಅಧಿಕಾರವನ್ನು ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬಾಕಿ ಇರುವ ಪ್ರಕರಣದಲ್ಲಿ ಅನುಮೋದನೆ ಕೊಡಬೇಕು, ಪೂರ್ವಾನುಮತಿ ಕೊಡಬೇಕು ಎಂಬುದು ನಮ್ಮ ಒತ್ತಾಯ. ನಮ್ಮ ಪ್ರಕಾರ ನಾವು ನೀಡಿರುವ ಸಲಹೆ ಒಪ್ಪಬೇಕಾಗುತ್ತದೆ. ಅವರ ವಿವೇಚನಾಧಿಕಾರ ಸೀಮಿತ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಪ್ರಕರಣದಲ್ಲಿ ಖಾಸಗಿ ವ್ಯಕ್ತಿ ದೂರು ಸಲ್ಲಿಸಿದ್ದು, ಈ ಬಗ್ಗೆ ತರಾತುರಿಯಲ್ಲಿ ರಾಜ್ಯಪಾಲರು ಶೋಕಾಸ್ ನೋಟಿಸ್ ನೀಡಿದ್ದರು. ಆದರೆ ಈ ನಾಲ್ಕು ಪ್ರಕರಣದಲ್ಲಿ ತನಿಖೆ ಆಗಿದೆ ಹಾಗೂ ಎರಡು ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಕೆ ಆಗಿದೆ.
ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದರೂ ಏನೂ ಕ್ರಮ ಆಗಿಲ್ಲ. ಹಾಗಾಗಿ, ಸಂಪುಟ ಸಭೆ ಈ ಸಲಹೆ ಕೊಡುವುದು ಸೂಕ್ತ. ಜನ ಸಂಘಟನೆಗಳು ಕೂಡಾ ಈ ಆಗ್ರಹ ಮಾಡುತ್ತಿವೆ. ಈ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಇದರಲ್ಲಿ ಯಾವುದೇ ದ್ವೇಷದ ರಾಜಕಾರಣ ಇಲ್ಲ ಎಂದು ಹೆಚ್.ಕೆ.ಪಾಟೀಲ್ ಸ್ಪಷ್ಟಪಡಿಸಿದರು.
ಆಗಸ್ಟ್ 1 ರಂದು ಸಚಿವ ಸಂಪುಟ ಸಭೆ ನಡೆದಿತ್ತು. ಮುಖ್ಯಮಂತ್ರಿಗಳು ಅಂದು ಸಭೆ ನಡೆಸಲು ಉಪ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ್ದರು. 163ರ ವಿಧಿಯನ್ವಯ ಏಡ್ ಆ್ಯಂಡ್ ಅಡ್ವೈಸ್ ರಾಜ್ಯಪಾಲರಿಗೆ ನೀಡಿದ್ದೆವು. ಆ ಸಭೆ ಆದ ನಂತರ ಸಚಿವ ಸಂಪುಟ ನಿರ್ಣಯವನ್ನು ದೃಢೀಕರಿಸಲು ಇಂದು ಕ್ಯಾಬಿನೆಟ್ ಸಭೆ ನಡೆಯಿತು. ದೃಢೀಕರಣ ಸಂದರ್ಭದಲ್ಲಿ ತಾವಿರುವುದು ಸೂಕ್ತವಲ್ಲವೆಂದು ಸಿಎಂ ಸಿದ್ದರಾಮಯ್ಯ ಅವರು ಸಭೆಯಿಂದ ಹೊರಗೆ ಇದ್ದರು. ಈ ಸಭೆ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಯಿತು. ಆಗಸ್ಟ್ 1ರ 90 ಪುಟಗಳ ನಿರ್ಣಯವನ್ನು ಇಂದು ದೃಢೀಕರಿಸಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ:ಪ್ರಾಸಿಕ್ಯೂಷನ್ ಅನುಮತಿ: ಎಚ್ಚರಿಕೆ ನಡೆ ಅನುಸರಿಸಿದ ರಾಜ್ಯಪಾಲರು, ಬುಲೆಟ್ ಪ್ರೂಫ್ ಕಾರು ಬಳಕೆ - Z Security to Governor