ಕರ್ನಾಟಕ

karnataka

ETV Bharat / state

ಹನುಮಧ್ವಜ ವಿವಾದ: ನಾಳೆ ಎಲ್ಲ ಜಿಲ್ಲೆಗಳಲ್ಲಿ ಬಿಜೆಪಿ ಪ್ರತಿಭಟನೆ

ಮಂಡ್ಯ ಜಿಲ್ಲೆ ಕೆರೆಗೋಡಿನಲ್ಲಿ ಹನುಮಧ್ವಜವನ್ನು ಕೆಳಕ್ಕಿಳಿಸಿದ್ದನ್ನು ಮತ್ತು ರಾಷ್ಟ್ರಧ್ವಜವನ್ನು ಮಧ್ಯಾಹ್ನ 3 ಗಂಟೆಗೆ ಹಾರಿಸುವ ಮೂಲಕ ಅವಮಾನ ಮಾಡಿದ್ದನ್ನು ಖಂಡಿಸಿ ಭಾನುವಾರ ಪ್ರತಿಭಟನೆಗೆ ಬಿಜೆಪಿ ಕರೆ ನೀಡಿದೆ.

karnataka-bjp-calls-for-protest-in-all-districts-on-january-29
ಹನುಮಧ್ವಜಕ್ಕೆ ಅಪಮಾನ: ನಾಳೆ ಎಲ್ಲ ಜಿಲ್ಲೆಗಳಲ್ಲಿ ಬಿಜೆಪಿ ಪ್ರತಿಭಟನೆ

By ETV Bharat Karnataka Team

Published : Jan 28, 2024, 7:57 PM IST

Updated : Jan 29, 2024, 2:40 PM IST

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿ ಮತ್ತು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದೆ ಎಂದು ಆರೋಪಿಸಿರುವ ಬಿಜೆಪಿ ಈ ಘಟನೆಯನ್ನು ಖಂಡಿಸಿ ನಾಳೆ (ಜ.29ರಂದು) ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಕರೆ ನೀಡಿದ್ದಾರೆ. ಸೋಮವಾರ ಬೆಳಗ್ಗೆ 10 ಗಂಟೆಗೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಲಿದೆ.

ಮಂಡ್ಯ ಜಿಲ್ಲೆ ಕೆರೆಗೋಡಿನಲ್ಲಿ ಹನುಮಧ್ವಜವನ್ನು ಕೆಳಕ್ಕಿಳಿಸಿ ಹರಿದಿರುವುದನ್ನು ಖಂಡಿಸಲಾಗುವುದು. ರಾಷ್ಟ್ರಧ್ವಜವನ್ನು ಮಧ್ಯಾಹ್ನ 3 ಗಂಟೆಗೆ ಹಾರಿಸುವ ಮೂಲಕ ಅವಮಾನ ಮಾಡಲಾಗಿದೆ. ರಾಷ್ಟ್ರಧ್ವಜವನ್ನು ಬೆಳಗ್ಗೆ 9 ಗಂಟೆಗೆ ಹಾರಿಸಿ ಸಂಜೆ ವೇಳೆಗೆ ಅದನ್ನು ಅವರೋಹಣ ನಿಯಮವನ್ನು ಉಲ್ಲಂಘಿಸಿ ಅವಮಾನ ಮಾಡಿದ್ದನ್ನು ಖಂಡಿಸಲಾಗುತ್ತದೆ ಎಂದು ವಿಜಯೇಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಧ್ವಜ ಹಾರಿಸಲು ಅವಕಾಶ ಕೊಡಿ - ರವಿಕುಮಾರ್:ರಾಜ್ಯ ಸರ್ಕಾರ ಕೂಡಲೇ ಮಂಡ್ಯ ಜಿಲ್ಲೆ ಕೆರೆಗೋಡಿನಲ್ಲಿ ಧ್ವಜ ಇಳಿಸಿದ ಸ್ಥಳದಲ್ಲಿ ಮತ್ತೆ ಧ್ವಜ ಹಾರಿಸಲು ಅವಕಾಶ ಕೊಡಬೇಕು. ಇಲ್ಲವಾದರೆ ಬಿಜೆಪಿ ಕೆರೆಗೋಡಿನಲ್ಲಿ ಧ್ವಜ ಹಾರಿಸಲು ನಮ್ಮೆಲ್ಲ ಕಾರ್ಯಕರ್ತರಿಗೆ ಆ ಜಿಲ್ಲೆಯಲ್ಲಿ ಕರೆ ಕೊಡಬೇಕಾಗುತ್ತದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್ ಹೇಳಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಕೆರೆಗೋಡಿನಲ್ಲಿ ನಿನ್ನೆ 108 ಅಡಿ ಕೇಸರಿ ಹನುಮಧ್ವಜವನ್ನು ಹಿಂದೂ ತರುಣ, ತರುಣಿಯರು ಗ್ರಾಮ ಪಂಚಾಯತ್ ಅನುಮತಿ ಪಡೆದು ಹಾರಿಸಿದ್ದರು. ಗ್ರಾಮ ಪಂಚಾಯತ್‍ನ 22 ಸದಸ್ಯರ ಪೈಕಿ 20 ಸದಸ್ಯರು ಈ ಹನುಮಧ್ವಜ ಹಾರಿಸಿದ್ದನ್ನು ಬೆಂಬಲಿಸಿದ್ದರು. ಸರ್ಕಾರ ಅದನ್ನು ಏಕಾಏಕಿ ಇಳಿಸಲು ಕ್ರಮ ಕೈಗೊಂಡಾಗ, ಅದನ್ನು ವಿರೋಧಿಸಿದ್ದು, ಲಾಠಿ ಚಾರ್ಜ್ ಆಗಿದೆ. 144ನೇ ಸೆಕ್ಷನ್ ಹಾಕಿದ್ದಾರೆ ಎಂದರು.

ಈ ಸರ್ಕಾರ ಹಿಂದೂಗಳ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಬಿಡುವುದಿಲ್ಲ. ಗಣಪತಿ ಉತ್ಸವಕ್ಕೆ ಅನುಮತಿ ಕೊಡುವುದಿಲ್ಲ. ಒಟ್ಟು ಈ ಸರ್ಕಾರದ ಧೋರಣೆ ನೋಡಿದರೆ, ವಿನಾಶಕಾಲೇ ವಿಪರೀತ ಬುದ್ಧಿ ಎಂಬ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ಹಿಂದೂಗಳನ್ನು ಕಂಡರೆ ಈ ಸರ್ಕಾರಕ್ಕೆ ಆಗುವುದಿಲ್ಲ. ಟಿಪ್ಪು ಜಯಂತಿ ವಿಜೃಂಭಣೆಯಿಂದ ಆಚರಿಸಲು ಹೇಳುತ್ತಾರೆ. ರಾಜ್ಯದ ಮುಖ್ಯಮಂತ್ರಿಗಳಿಗೆ ತಿಲಕ, ಕುಂಕುಮ, ವಿಭೂತಿ ಹಚ್ಚಿಕೊಂಡು ಬಂದರೆ ಆಗುವುದಿಲ್ಲ. ರಾಮನ ದೇವಸ್ಥಾನಕ್ಕೆ ಯಾಕೆ ಹೋಗಬೇಕೆಂದು ಈ ಸರ್ಕಾರ ಕೇಳುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 10 ಸಾವಿರ ಕೋಟಿ ಹಣವನ್ನು ಪ್ರಕಟಿಸುತ್ತದೆ. ಹಿಂದೂಗಳು ಯಾವುದೇ ಹಬ್ಬ ಹರಿದಿನಗಳನ್ನು ವಿಜೃಂಭಣೆಯಿಂದ ಆಚರಿಸಲು ಯಾವುದೇ ಅನುಮತಿಯನ್ನು ನೀಡುತ್ತಿಲ್ಲ. ಶ್ರೀರಾಮ ದೇಗುಲ ಉದ್ಘಾಟನೆ ಸಂದರ್ಭದಲ್ಲಿ ಅನೇಕ ಕಡೆ ಮೆರವಣಿಗೆ ನಡೆಸಲು ಅನುಮತಿ ಕೊಟ್ಟಿಲ್ಲ ಎಂದು ದೂರಿದರು.

ಇದನ್ನೂ ಓದಿ:ಒಂದು ಹನುಮಧ್ವಜ ಇಳಿಸಿದರೆ ಸಾವಿರಾರು ಧ್ವಜ ಹಾರಿಸಬೇಕಾಗುತ್ತದೆ: ಸರ್ಕಾರಕ್ಕೆ ಸುನೀಲ್‍ಕುಮಾರ್ ಎಚ್ಚರಿಕೆ

Last Updated : Jan 29, 2024, 2:40 PM IST

ABOUT THE AUTHOR

...view details