ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಎನ್. ಮಂಜುಶ್ರೀ ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಘೋಷಿಸಿದರು.
ಈ ಬಾರಿ ಶೇಕಡಾ 81.15 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯು (ಶೇ.97.37) ಪ್ರಥಮ ಸ್ಥಾನ, ಉಡುಪಿ (96.8%) ಎರಡನೇ ಹಾಗೂ ವಿಜಯಪುರ (94.89%) ಮೂರನೇ ಸ್ಥಾನ, ಉತ್ತರ ಕನ್ನಡ ನಾಲ್ಕನೇ ಹಾಗೂ ಕೊಡಗು ಜಿಲ್ಲೆಯು ಐದನೇ ಸ್ಥಾನ ಪಡೆದಿವೆ. ಗದಗ ಜಿಲ್ಲೆಯು ಕೊನೆಯ ಸ್ಥಾನದಲ್ಲಿದೆ.
ಕಲಾ ವಿಭಾಗದಲ್ಲಿ ಶೇಕಡಾ 68.36, ವಾಣಿಜ್ಯ ವಿಭಾಗದಲ್ಲಿ ಶೇ. 80.94 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ. 89.96 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಹೊಸದಾಗಿ ಪರೀಕ್ಷೆ ಬರೆದ ಶೇ. 84.5ರಷ್ಟು ವಿದ್ಯಾರ್ಥಿಗಳಲ್ಲಿ ಶೇ. 76.98 ಬಾಲಕರು, ಶೇ.84.87 ಬಾಲಕಿಯರು ಪಾಸ್ ಆಗಿದ್ದಾರೆ. ನಗರ ಪ್ರದೇಶದಲ್ಲಿ ಶೇ. 81.10 ಮತ್ತು ಗ್ರಾಮಾಂತರ ಭಾಗದಲ್ಲಿ ಶೇ. 81.31 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಶೇ. 70.41 ಮತ್ತು ಆಂಗ್ಲ ಭಾಷೆಯಲ್ಲಿ ಶೇ. 87.40 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. 1,53,370 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, ಪ್ರಥಮ ದರ್ಜೆಯಲ್ಲಿ 2,89,733, ದ್ವಿತೀಯ ದರ್ಜೆಯಲ್ಲಿ 72,098 ಹಾಗೂ ತೃತೀಯ ದರ್ಜೆಯಲ್ಲಿ 37,489 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಎಂದು ಮಾಹಿತಿ ನೀಡಿದರು.
ಮೂವರು ವಿದ್ಯಾರ್ಥಿಗಳು ಟಾಪರ್: ಕಲಾ ವಿಭಾಗದಲ್ಲಿ ಮೂವರು ವಿದ್ಯಾರ್ಥಿಗಳು ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಬೆಂಗಳೂರಿನ ಜಯನಗರದ ಎನ್.ಎಂ.ಕೆ.ಆರ್.ವಿ ಪಿಯು ಕಾಲೇಜು ವಿದ್ಯಾರ್ಥಿನಿ ಮೇಧಾ ಡಿ., ವಿಜಯಪುರದ ಎಸ್ಎಸ್ ಪಿಯು ಕಾಲೇಜು ವಿದ್ಯಾರ್ಥಿ ವೇದಾಂತ್ ನಾವಿ ಹಾಗೂ ಬಳ್ಳಾರಿಯ ಕೊತ್ತೂರಿನ ಇಂಡು ಇಂಡ್ ಪಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಕವಿತಾ ಬಿ.ವಿ. ಜಂಟಿಯಾಗಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇವರೆಲ್ಲರೂ 600ಕ್ಕೆ ತಲಾ 596 ಅಂಕಗಳನ್ನು ಪಡೆದಿದ್ದಾರೆ.