ಬೆಳಗಾವಿ:ಕಾರ್ಗಿಲ್ ವಿಜಯೋತ್ಸವಕ್ಕೆ ಇಂದು 25 ವರ್ಷ. ಈ ಸಂದರ್ಭದಲ್ಲಿ ಬೆಳಗಾವಿಯ ವೀರಯೋಧರ ಕಾಣಿಕೆ ಸುತ್ತ್ಯಾರ್ಹ. ಶತ್ರುಗಳ ಗುಂಡಿಗೆ ಕೆಚ್ಚೆದೆ ಕೊಟ್ಟು ನೂರಾರು ಯೋಧರು ಹುತಾತ್ಮರಾಗಿದ್ದರೆ, ಅದೆಷ್ಟೋ ಸೈನಿಕರು ವೈರಿಗಳ ವಿರುದ್ಧ ಕಾದಾಡಿ, ಅವರನ್ನು ಬೇಟೆಯಾಡಿದ್ದಾರೆ. ಅಂಥವರ ಪೈಕಿ ಒಬ್ಬರ ಕಥೆ ಇಲ್ಲಿದೆ. ಇವರು ತಮ್ಮ ತಂದೆಯ ಅನಾರೋಗ್ಯವನ್ನೂ ಲೆಕ್ಕಿಸದೇ ಯುದ್ಧದಲ್ಲಿ ಹೋರಾಡಿದ್ದರೆಂಬುದು ವಿಶೇಷ.
ಹೌದು, ಇವರ ಹೆಸರು ಸಂಜು ವೆಂಕಪ್ಪ ಗಾವಡಾ. ಖಾನಾಪುರ ತಾಲ್ಲೂಕಿನ ಭಾಟೆವಾಡಿ ಗ್ರಾಮದವರು. ಹಿಂಡಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಜಯ ನಗರದಲ್ಲಿ ವಾಸಿಸುತ್ತಿರುವ ಸಂಜು, ಭಾರತೀಯ ಸೇನೆಯಲ್ಲಿ 16 ವರ್ಷ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು, ಇದೀಗ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಪಾಕಿಸ್ತಾನದ ವಿರುದ್ಧ ಯುದ್ಧ ಪ್ರಾರಂಭವಾಗುವ ಮುನ್ನ ರಜೆಯ ಮೇಲೆ ಸಂಜು ಗಾವಡಾ ಊರಿಗೆ ಬಂದಿದ್ದರು. ಇದೇ ಸಮಯಕ್ಕೆ ಸಂಜು ಅವರ ತಂದೆ ಅನಾರೋಗ್ಯದಿಂದ ಘಟಪ್ರಭಾದ ಕೆಎಚ್ಐ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ತಕ್ಷಣವೇ ಕರ್ತವ್ಯಕ್ಕೆ ಮರಳುವಂತೆ ಸೇನಾಧಿಕಾರಿಗಳಿಂದ ಪತ್ರ ಬಂದಿತ್ತು. ಒಂದು ಕ್ಷಣವೂ ಹಿಂದೆ ಮುಂದೆ ನೋಡದ ಸಂಜು, ರಜೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ, ತಂದೆಯನ್ನು ವೈದ್ಯರು ನೋಡಿಕೊಳ್ಳುತ್ತಾರೆ ಎಂದು ಯುದ್ಧಕ್ಕೆ ಹೊರಟುನಿಂತರು. ಬೋಫೋರ್ಸ್ ಯೂನಿಟ್ನಲ್ಲಿ ಇವರು ರೆಡಿಯೋ ಆಪರೇಟರ್ ಆಗಿದ್ದರು.
'ಈಟಿವಿ ಭಾರತ'ದ ಜೊತೆಗೆ ಈ ಕುರಿತು ಮಾತನಾಡಿದ ಸಂಜು ಗಾವಡಾ, "114 ಮೀಡಿಯಮ್ ರೆಜಿಮೆಂಟ್ ಬೋಫೋರ್ಸ್ ಯೂನಿಟ್ನಲ್ಲಿ ರೆಡಿಯೋ ಆಪರೇಟರ್ ಆಗಿದ್ದೆ. ಬೋಫೋರ್ಸ್ ಯೂನಿಟ್ ಕಾರ್ಗಿಲ್ ಹೀರೋ. ಸಂಪರ್ಕ ಯುದ್ಧದ ಕೀಲಿಕೈ (ಕಮ್ಯುನಿಲೇಶನ್ ಇಸ್ ದಿ ಕೀ ಆಫ್ ವಾರ್) ಎಂದು ಕರೆಯುತ್ತಾರೆ. ನಮ್ಮ ಸೇನೆಯ ಇನ್‌ಫ್ಯಾಂಟರಿ ಯೂನಿಟ್ ಯುದ್ಧ ಮಾಡುತ್ತಿರುತ್ತದೆ. ಅದರಲ್ಲಿ ನಮ್ಮ ಬೋಫೋರ್ಟ್ ಅಧಿಕಾರಿಗಳು ಇರುತ್ತಾರೆ. ಸೈನಿಕರಿಗೆ ಯುದ್ಧಕ್ಕೆ ಏನು ಫೈರ್ ಸಪೋರ್ಟ್ ಬೇಕು, ಯುದ್ಧ ಸಾಮಗ್ರಿ, ಊಟ, ನೀರು ಸೇರಿದಂತೆ ಅವರಿಗೆೇನು ಅವಶ್ಯಕತೆ ಇದೆಯೋ ಆ ಕುರಿತು ನಮಗೆ ಕೋಡ್ ಮೂಲಕ ತಿಳಿಸುತ್ತಾರೆ. ಅದನ್ನು ನಾವು ಡಿಕೋಡ್ ಮಾಡಿ, ಮೇಲಧಿಕಾರಿಗಳಿಗೆ ತಿಳಿಸುತ್ತೇವೆ. ಅವರು ಸೈನಿಕರಿಗೆ ಏನು ಅವಶ್ಯಕತೆ ಇವೆಯೋ ಅವುಗಳನ್ನು ತಕ್ಷಣವೇ ಪೂರೈಸುತ್ತಿದ್ದರು" ಎಂದು ವಿವರಿಸಿದರು.