ಚಾಮರಾಜನಗರ:ಈಗಲೂ ಅರಳು ಹುರಿದಂತೆ ಸಾಂಬಾರು ಸೊಪ್ಪಿನ ಹೆಸರುಗಳನ್ನು ಹೇಳುವ ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಗ್ರಾಮದ ಪುಟ್ಟೀರಮ್ಮ (92) ಎಂಬ ದೇಸಿ ತಜ್ಞೆಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.
ಈ ದೇಸಿ ತಜ್ಞೆ ಬರೋಬ್ಬರಿ 60ಕ್ಕೂ ಹೆಚ್ಚು ಬೆರಕೆ ಸೊಪ್ಪುಗಳನ್ನು ಗುರುತಿಸುತ್ತಾರೆ. ರಸ್ತೆಬದಿ, ಜಮೀನಿನಲ್ಲಿ ಕಳೆಗಿಡವಾಗಿ ಪ್ರಕೃತಿದತ್ತವಾಗಿ ಇರುವ ಇವುಗಳನ್ನು ಪುಟ್ಟೀರಮ್ಮ ಗುರುತಿಸಿ ಬೇರೆಯವರಿಗೂ ತಮ್ಮ ಆಹಾರ ಜ್ಞಾನ ಹರಡುತ್ತಿದ್ದಾರೆ. ನುಗ್ಗೆ ಸೊಪ್ಪು, ಅಗಸೆ ಸೊಪ್ಪು, ಕಿರಕೀಲೆ ಸೊಪ್ಪು, ದಂಟು ಸೊಪ್ಪು, ಬೋದಗೀರ ಸೊಪ್ಪು, ಗಣಿಕೆಸೊಪ್ಪು, ಪಸರೆಸೊಪ್ಪು, ಗುಳ್ಸುಂಡೆ ಸೊಪ್ಪು, ಮಳ್ಳಿ ಸೊಪ್ಪು, ಹಾಲೆ ಸೊಪ್ಪು, ಜವಣ ಸೊಪ್ಪು, ಅಣ್ಣೆ ಸೊಪ್ಪು, ಗುರುಜೆ ಸೊಪ್ಪು, ಕಲ್ಲು ಗುರುಜೆ ಸೊಪ್ಪು ಸೇರಿದಂತೆ ಹಲವಾರು ಸೊಪ್ಪುಗಳ ಹೆಸರುಗಳನ್ನು ಲೀಲಾಜಾಲವಾಗಿ ಇವರು ಹೇಳುತ್ತಾರೆ.
ಸೊಪ್ಪುಗಳ ಹೆಸರು ಹೇಳುವುದು ಮಾತ್ರವಲ್ಲದೆ ಆ ಸೊಪ್ಪುಗಳ ಬಗ್ಗೆ ಪುಟ್ಟೀರಮ್ಮ ಜಾನಪದ ಹಾಡುಗಳನ್ನೂ ಕಟ್ಟಿ ಹಾಡುತ್ತಾರೆ. ಸಾಮಾನ್ಯ ಕಾಯಿಲೆಗಳಿಗೆ ಸೊಪ್ಪಿನ ಸಾರಲ್ಲೇ ಮದ್ದನ್ನು ಕಂಡುಕೊಂಡಿದ್ದಾರೆ ಇವರು. ಈ ನೆಲದ ಅಮೂಲ್ಯ ಕೃಷಿಜ್ಞಾನವನ್ನು ಶತಮಾನಗಳಿಂದ ಸಂರಕ್ಷಿಸಿ ಜಾನಪದ ಹಾಡುಗಳಲ್ಲಿ, ಗಾದೆ ಮಾತುಗಳಲ್ಲಿ, ಸಾಂಸ್ಕೃತಿಕ ಪದ್ಧತಿಗಳಲ್ಲಿ ಅಳವಡಿಸಿ, ಯಾವ ಅಕ್ಷರಜ್ಞಾನದ ಹಂಗೂ ಇಲ್ಲದೇ ಮಹಾನ್ ಜ್ಞಾನ ಪರಂಪರೆಯನ್ನು ಮುಂದಿನ ಜನಾಂಗಗಳಿಗೆ ದಾಟಿಸುತ್ತಾ ಬಂದಿರುವ ಪುಟ್ಟೀರಮ್ಮನ ಬಗ್ಗೆ ಇಕ್ರಾ ಎಂಬ ಸಂಸ್ಥೆಯು "ಪುಟ್ಟೀರಮ್ಮನ ಪುರಾಣ" ಎಂಬ ಪುಸ್ತಕವನ್ನು ಹೊರತಂದಿದೆ.