ಬೆಂಗಳೂರು: ಮಾಜಿ ಸಿಎಂ ಎಂ. ವೀರಪ್ಪ ಮೊಯ್ಲಿ, ಮಾಜಿ ಸಚಿವೆ ಬಿ. ಟಿ. ಲಲಿತಾನಾಯಕ್, ಹಿರಿಯ ನಟಿ ಹೇಮಾ ಚೌದರಿ, ಎಂ.ಎಸ್. ನರಸಿಂಹಮೂರ್ತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 69 ಮಂದಿ ಗಣ್ಯ ವ್ಯಕ್ತಿಗಳಿಗೆ 2024ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ.
ವಿಕಾಸಸೌಧದಲ್ಲಿ ಇಂದು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಹೆಸರುಗಳ ಪಟ್ಟಿ ಪ್ರಕಟಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ, ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗಾಗಿ ಒಟ್ಟು 1,575 ಭೌತಿಕ ಅರ್ಜಿಗಳು ಬಂದಿದ್ದವು. ಇದಲ್ಲದೇ ಸೇವಾ ಸಿಂಧು ಮೂಲಕ 1,309 ಜನರಿಗಾಗಿ 7,438 ನಾಮನಿರ್ದೇಶನಗಳು ಸಲ್ಲಿಕೆಯಾಗಿದ್ದವು. ಎಲ್ಲವನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿ ಈ ಬಾರಿ 69 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರತಿಯೊಂದು ಜಿಲ್ಲೆಗೂ ಪ್ರಾತಿನಿಧ್ಯ ನೀಡಲಾಗಿದೆ ಹಾಗೂ ಸಾಮಾಜಿಕ ನ್ಯಾಯವನ್ನು ಕಾಪಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಬಾರಿ ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವ ವರ್ಷ ಆಗಿರುವುದರಿಂದ ಇದನ್ನು ವಿಶೇಷ ಸಂದರ್ಭ ಎಂದು ಪರಿಗಣಿಸಿ ಸುವರ್ಣ ಸಂಭ್ರಮ-50ರ ಸುವರ್ಣ ಮಹೋತ್ಸವ ಎಂಬ ವಿಶೇಷ ಪ್ರಶಸ್ತಿಯನ್ನು 50 ಸಾಧಕ ಮಹಿಳೆಯರಿಗೆ ಮತ್ತು 50 ಸಾಧಕ ಪುರುಷರಿಗೆ ನೀಡಲಾಗುತ್ತಿದೆ. ಇದರಿಂದ 69 + 100 ಒಟ್ಟು 169 ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ಅರ್ಜಿಯನ್ನು ಹಾಕದ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸಿರುವ 20ಕ್ಕೂ ಹೆಚ್ಚು ಮಂದಿಯನ್ನು ಸಹ ಗುರುತಿಸಿ, ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
ಬಯಲಾಟ ಕ್ಷೇತ್ರದಲ್ಲಿ ಹೆಸರು ಮಾಡಿರುವ ವಿಜಯನಗರ ಜಿಲ್ಲೆಯ 92 ವರ್ಷದ ನಾರಾಯಣಪ್ಪ ಶಿಳ್ಳೇಕ್ಯಾತ ಅವರ ಹೆಸರನ್ನು ಸಹ ಪರಿಗಣಿಸಲಾಗಿದೆ. ಜಾನಪದ ಕ್ಷೇತ್ರದಲ್ಲಿ ಬೀದರ್ ಜಿಲ್ಲೆಯ ಅಂಧಕಲಾವಿದರಾದ ನರಸಿಂಹಲು ಅವರನ್ನು ಸಹ ಪರಿಗಣಿಸಲಾಗಿದೆ. ಇದರಲ್ಲಿ 13 ಮಹಿಳೆಯರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ. ನವೆಂಬರ್ 1 ಕನ್ನಡ ರಾಜ್ಯೋತ್ಸವ ದಿನದಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗಣ್ಯರಿಗೆ ಸಿಎಂ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ರಾಜ್ಯೋತ್ಸವ ಪ್ರಶಸ್ತಿಯ ಮೊತ್ತ 5 ಲಕ್ಷ ಹಾಗೂ 25 ಗ್ರಾಂ ಚಿನ್ನದ ಪದಕ, ಸುವರ್ಣ ಸಂಭ್ರಮ ಪ್ರಶಸ್ತಿಯ ಮೊತ್ತ ₹ 50,000 ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ.
ಜಾನಪದ ಕ್ಷೇತ್ರ:ಇಮಾಮಸಾಬ ಎಂ. ವಲ್ಲೆಪನವರ - ಧಾರವಾಡ, ಅಶ್ವರಾಮಣ್ಣ- ಬಳ್ಳಾರಿ, ಕುಮಾರಯ್ಯ- ಹಾಸನ, ವೀರಭದ್ರಯ್ಯ- ಚಿಕ್ಕಬಳ್ಳಾಪುರ, ನರಸಿಂಹಲು (ಅಂಧ ಕಲಾವಿದ)- ಬೀದರ್, ಬಸವರಾಜ ಸಂಗಪ್ಪ ಹಾರಿವಾಳ-ವಿಜಯಪುರ, ಎಸ್.ಜಿ. ಲಕ್ಷ್ಮೀದೇವಮ್ಮ- ಚಿಕ್ಕಮಗಳೂರು, ಪಿಚ್ಚಳ್ಳಿ ಶ್ರೀನಿವಾಸ- ಕೋಲಾರ, ಲೋಕಯ್ಯ ಶೇರ (ಭೂತಾರಾಧನೆ)- ದಕ್ಷಿಣ ಕನ್ನಡ.
ಚಲನಚಿತ್ರ /ಕಿರುತೆರೆ ಕ್ಷೇತ್ರ:ಹಿರಿಯ ನಟಿ ಹೇಮಾ ಚೌದರಿ - ಬೆಂಗಳೂರು ನಗರ, ಎಂ.ಎಸ್. ನರಸಿಂಹಮೂರ್ತಿ - ಬೆಂಗಳೂರು ನಗರ
ಸಂಗೀತ ಕ್ಷೇತ್ರ:ಪಿ. ರಾಜಗೋಪಾಲ- ಮಂಡ್ಯ, ಎ.ಎನ್. ಸದಾಶಿವಪ್ಪ- ರಾಯಚೂರು
ನೃತ್ಯ ಕ್ಷೇತ್ರ: ಶ್ರೀಮತಿ ವಿದುಷಿ ಲಲಿತಾ ರಾವ್ - ಮೈಸೂರು
ಆಡಳಿತ ಕ್ಷೇತ್ರ:ಎಸ್. ವಿ. ರಂಗನಾಥ್ ಭಾ.ಆ.ಸೇ (ನಿ) - ಬೆಂಗಳೂರು ನಗರ
ವೈದ್ಯಕೀಯ ಕ್ಷೇತ್ರ: ಡಾ. ಜಿ. ಬಿ. ಬಿಡಿನಹಾಳ - ಗದಗ, ಡಾ. ಮೈಸೂರು ಸತ್ಯನಾರಾಯಣ - ಮೈಸೂರು, ಡಾ ಲಕ್ಷ್ಮಣ್ ಹನುಮಪ್ಪ ಬಿದರಿ - ವಿಜಯಪುರ
ಶಿಕ್ಷಣ ಕ್ಷೇತ್ರ: ಡಾ. ವಿ.ಕಮಲಮ್ಮ- ಬೆಂಗಳೂರು ನಗರ, ಪ್ರೊ. ರಾಜೇಂದ್ರ ಶೆಟ್ಟಿ - ದಕ್ಷಿಣ ಕನ್ನಡ, ಡಾ. ಪದ್ಮಾಶೇಖರ್ - ಕೊಡಗು
ಕ್ರೀಡಾ ಕ್ಷೇತ್ರ: ಜೂಡ್ ಫೆಲಿಕ್ಸ್ ಸೆಬಾಸ್ಟೀಯನ್ (ಹಾಕಿ)- ಬೆಂಗಳೂರು ನಗರ, ಗೌತಮ್ ವರ್ಮ- ರಾಮನಗರ, ಆರ್. ಉಮಾದೇವಿ (ಬಿಲಿಯಾರ್ಡ್ಸ್)- ಬೆಂಗಳೂರು ನಗರ
ನ್ಯಾಯಾಂಗ ಕ್ಷೇತ್ರ: ಬಾಲನ್- ಕೋಲಾರ
ಶಿಲ್ಪಕಲೆ ಕ್ಷೇತ್ರ:ಬಸವರಾಜ್ ಬಡಿಗೇರ- ಬೆಂಗಳೂರು ನಗರ, ಅರುಣ್ ಯೋಗಿರಾಜ್- ಮೈಸೂರು