ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲಿ ಬಿಹಾರ ವಿದ್ಯಾರ್ಥಿಗಳಿಗೆ ಕನ್ನಡ ಪಾಠ: ಕನ್ನಡ ಕಲಿತು ನಾಡ ಗೀತೆ ಹಾಡುವ ಮಕ್ಕಳಿಗೆ ಬೇಕಿದೆ ನೆರವು

ಬೋಳಾರದ ಸರಕಾರಿ ಪ್ರಾಥಮಿಕ ಶಾಲೆಯ ಹೆಡ್​​ ಮಾಸ್ಟರ್ ಗೀತಾ, ಬಿಹಾರದಿಂದ ಬಂದು ಕನ್ನಡದ ಜೊತೆ ಹಿಂದಿಯಲ್ಲಿ ಪಾಠ ಮಾಡುತ್ತಿದ್ದಾರೆ. ಈ ಬಗ್ಗೆ ನಮ್ಮ ವರದಿಗಾರ ವಿನೋದ್​ ಪುದು ನೀಡಿರುವ ವಿಶೇಷ ವರದಿ ಇಲ್ಲಿದೆ.

ಮಂಗಳೂರಿನಲ್ಲಿ ಬಿಹಾರ ವಿದ್ಯಾರ್ಥಿಗಳಿಗೆ ಕನ್ನಡ ಪಾಠ
ಮಂಗಳೂರಿನಲ್ಲಿ ಬಿಹಾರ ವಿದ್ಯಾರ್ಥಿಗಳಿಗೆ ಕನ್ನಡ ಪಾಠ (ETV Bharat)

By ETV Bharat Karnataka Team

Published : Oct 31, 2024, 9:53 AM IST

Updated : Oct 31, 2024, 12:46 PM IST

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆ ಶೈಕ್ಷಣಿಕ ಕ್ರಾಂತಿಯ ಹೆಸರಿನಲ್ಲಿ ಪ್ರಖ್ಯಾತಿ ಹೊಂದಿದ್ದು, ಈ ಯಶಸ್ಸಿನ ಹಿಂದೆ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಸೈನಿಕರಂತೆ ಶ್ರಮಿಸುವ ಶಿಕ್ಷಕರ ಪಾತ್ರ ಅಸಾಮಾನ್ಯವಾಗಿದೆ. ಇದೇ ರೀತಿ ಮಂಗಳೂರಿನ ಬೋಳಾರದ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಗೀತಾ ಸಲ್ದಾನಾ ವಿಶೇಷ ಪ್ರಯತ್ನ ಮಾಡಿದ್ದಾರೆ. ಬಿಹಾರ ಮೂಲದ ವಿದ್ಯಾರ್ಥಿಗಳಿಗೆ ಕನ್ನಡ ಪಾಠ ಕಲಿಸುವ ಮೂಲಕ ಅವರು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

2024ರ ಆಗಸ್ಟ್‌ನಲ್ಲಿ ಬೋಳಾರದ ಸರಕಾರಿ ಪ್ರಾಥಮಿಕ ಶಾಲೆಗೆ ಹೆಡ್​​ ಮಾಸ್ಟರ್​​ ಆಗಿ ಗೀತಾ ಅವರು ಬಂದಾಗ ವಿದ್ಯಾರ್ಥಿಗಳ ಅಲ್ಪ ಸಂಖ್ಯೆಯನ್ನು ನೋಡಿ ಬೇಸರಗೊಂಡಿದ್ದರು. ಒಟ್ಟು 9 ವಿದ್ಯಾರ್ಥಿಗಳಲ್ಲಿ ಕೇವಲ ಐದು ಮಕ್ಕಳು ಮಾತ್ರ ನಿರಂತರವಾಗಿ ಹಾಜರಾಗುತ್ತಿದ್ದರು. ಶಾಲೆ ಮುಚ್ಚುವ ಸ್ಥಿತಿಗೆ ತಲುಪಿದಾಗ, ಗೀತಾ ಈ ಪರಿಸ್ಥಿತಿಯನ್ನು ಬದಲಿಸುವ ಪ್ರಯತ್ನ ಮಾಡಿದ್ದಾರೆ. ಬೋಳಾರ ಸಮೀಪದ ಮೀನುಗಾರ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಕಲಿಸುವುದೆಂಬ ಗುರಿಯೊಂದಿಗೆ ಅವರು ಸ್ಥಳೀಯ ಸ್ಲಂ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿಯ ಮಕ್ಕಳ ಮನೆಮನೆಗೆ ತೆರಳಿ ಅವರಿಗೆ ಶಿಕ್ಷಣ ಕೊಡುವ ಬಗ್ಗೆ ಪ್ರೇರೆಪಿಸಿದರು.

ಮಂಗಳೂರಿನಲ್ಲಿ ಬಿಹಾರ ವಿದ್ಯಾರ್ಥಿಗಳಿಗೆ ಕನ್ನಡ ಪಾಠ (ETV Bharat)

9 ಮಕ್ಕಳಿಂದ 55ಕ್ಕೆ ಹೆಚ್ಚಳ:ಮೂರು ತಿಂಗಳೊಳಗೆ, ಗೀತಾ ಅವರು ವಿದ್ಯಾರ್ಥಿಗಳ ಸಂಖ್ಯೆಯನ್ನು 9ರಿಂದ 55ಕ್ಕೆ ಹೆಚ್ಚಿಸುವಲ್ಲಿ ಯಶಸ್ವಿಯಾದರು. ಈ ವಿದ್ಯಾರ್ಥಿಗಳು ಬಿಹಾರ ಮೂಲದವರು, ಮತ್ತು ಅವರ ಪೋಷಕರು ಮೀನುಗಾರಿಕೆಯಲ್ಲಿ ಮತ್ತು ದಿನಗೂಲಿ ಕಾರ್ಮಿಕರಾಗಿ ಉದ್ಯೋಗದಲ್ಲಿದ್ದಾರೆ. ಹೀಗೆ, ಶಿಕ್ಷಣದ ಅಗತ್ಯತೆಯನ್ನು ಪೋಷಕರಿಗೆ ಮನವರಿಕೆ ಮಾಡಿಸಿದ ಬಳಿಕ, ಅವರು ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪಿಕೊಂಡರು.

ಮಂಗಳೂರಿನಲ್ಲಿ ಬಿಹಾರ ವಿದ್ಯಾರ್ಥಿಗಳಿಗೆ ಕನ್ನಡ ಪಾಠ (ETV Bharat)

ಗೀತಾ ಟೀಚರ್​ ಹೇಳುವುದಿಷ್ಟು:ಈ ಬಗ್ಗೆ ಮಾತನಾಡಿದ ಗೀತಾ ಸಲ್ದಾನಾ ಅವರು "ನಾನು ಮಂಗಳೂರಿನ ಬೋಳಾರದ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ. ಈ ಶಾಲೆಯ ಹೆಸರು ಹಿಂದೆ ಉರ್ದು ಶಾಲೆ ಎಂದು ಕರೆಯಲಾಗುತ್ತಿತ್ತು, ಆದರೆ ಈಗ ಇದು ಸರಕಾರಿ ಕನ್ನಡ ಶಾಲೆಯಾಗಿದೆ. 2019ರ ನಂತರ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ, ವಿಶೇಷವಾಗಿ ಕೊರೊನಾ ಸಂದರ್ಭದಲ್ಲಿ ಮಕ್ಕಳು ಬರಲೇ ಇಲ್ಲ. ಕಳೆದ 2-3 ವರ್ಷಗಳಿಂದ ಹೀಗೆಯೇ ಇದ್ದು, ಅತಿ ಕಡಿಮೆ ಮಕ್ಕಳು ಶಾಲೆಗೆ ಬರುವುದನ್ನು ಗಮನಿಸಿದ್ದೇನೆ. ನಾನು ಈ ಶಾಲೆಗೆ ಬಂದಾಗ ಕೇವಲ 9 ಮಕ್ಕಳು ಮಾತ್ರ ಇದ್ದರು, ಅವರಲ್ಲಿ ಐದು ಮಂದಿ ಮಾತ್ರ ನಿರಂತರವಾಗಿ ಹಾಜರಾಗುತ್ತಿದ್ದರು".

ಮಂಗಳೂರಿನಲ್ಲಿ ಬಿಹಾರ ವಿದ್ಯಾರ್ಥಿಗಳಿಗೆ ಕನ್ನಡ ಪಾಠ (ETV Bharat)

’ಸರ್ವೆ ಮಾಡಿ ಸತ್ಯ ಅರಿತುಕೊಂಡೆ’:"ನಾನು ಶಾಲೆಯ ಸುತ್ತಮುತ್ತಲಿನ ಎಲ್ಲ ಪ್ರದೇಶಗಳಲ್ಲಿ ಸರ್ವೇ ಮಾಡಿ, ಶಾಲೆಗೆ ಬರುತ್ತಿರಲಿಲ್ಲವೆಂಬ ಕಾರಣಕ್ಕಾಗಿ ಬಾಲಕಾರ್ಮಿಕರಾಗಿ ಕೆಲಸ ಮಾಡುವ 6ರಿಂದ 14 ವರ್ಷ ವಯಸ್ಸಿನ ಮಕ್ಕಳು ಹೆಚ್ಚಾಗಿ ಇದ್ದಾರೆ ಎಂಬುದನ್ನು ಕಂಡೆ. ಅವರೆಲ್ಲ ಬಿಹಾರ ಮೂಲದವರು, ಮತ್ತು ಇವರ ಪೋಷಕರು ಮೀನುಗಾರಿಕೆ ಮತ್ತು ದಿನಗೂಲಿ ಕಾರ್ಮಿಕರಾಗಿದ್ದಾರೆ. ಹೀಗಾಗಿ, ಪೋಷಕರಿಗೆ ಮತ್ತು ಮಕ್ಕಳಿಗೆ ಸಮರ್ಪಕ ಮಾರ್ಗದರ್ಶನ ನೀಡಿ, ನನ್ನ ಕಡೆಯಿಂದ ಪ್ರಾಮಾಣಿಕವಾಗಿ ಈ ಮಕ್ಕಳನ್ನು ಶಾಲೆಗೆ ಸೇರಿಸಲು ಪ್ರಯತ್ನಿಸಿದೆ".

ಬಿಹಾರ ಮೂಲದ ವಿದ್ಯಾರ್ಥಿ ಅನಂತ್ (ETV Bharat)

ಕನ್ನಡದ ಯಾವ ಶಬ್ದವೂ ಗೊತ್ತಿಲ್ಲದವರೂ ಕನ್ನಡ ಕಲಿತಿದ್ದಾರೆ; "ಇಂದು ನನ್ನ ಶಾಲೆಯಲ್ಲಿ 55 ಮಕ್ಕಳಿದ್ದಾರೆ. ಅವರ ಪೈಕಿ ಬಹುತೇಕರು ಕನ್ನಡದ ಯಾವ ಶಬ್ದಗಳೂ ಗೊತ್ತಿಲ್ಲದ ಮಕ್ಕಳಾಗಿದ್ದರು. ಆದರೆ ಎರಡು ತಿಂಗಳಲ್ಲಿ ಈ ಮಕ್ಕಳು ಕನ್ನಡ ಓದುವದು, ಬರೆಯುವುದನ್ನು ಕಲಿಯುತ್ತಿದ್ದಾರೆ. ನಾನು ಮತ್ತು ನನ್ನ ಜೊತೆಯಲ್ಲಿ ಇರುವ ಶಿಕ್ಷಕಿ, ಶಾಲಾ ಇಲಾಖೆಯಿಂದ ಬಂದಿರುವ ಅತಿಥಿ ಶಿಕ್ಷಕರ ಸಹಾಯದಿಂದ, ಎಲ್ಲಾ ಮಕ್ಕಳಿಗೆ ಕನ್ನಡ ಮತ್ತು ಹಿಂದಿಯಲ್ಲಿ ಪಾಠ ಕಲಿಸುತ್ತಿದ್ದೇವೆ. ನಮ್ಮ ರಾಜ್ಯದಲ್ಲಿ ಯಾರೊಬ್ಬರೂ ವಿದ್ಯೆಯಿಂದ ವಂಚಿತರಾಗಬಾರದು ಎನ್ನುವುದು ನನ್ನ ಆಶಯ. ಇವತ್ತು, ಈ ಮಕ್ಕಳು "ಜೈ ಭಾರತ" ಎಂಬ ಹಾಡನ್ನು ಕನ್ನಡದಲ್ಲಿ ಹಾಡುತ್ತಿದ್ದಾರೆ, ಶಾಲೆಗೆ ಬರುತ್ತಿದ್ದಾರೆ, ಮತ್ತು ಕನ್ನಡದಲ್ಲಿ‌ ಅವರು ಮಾತನಾಡುವಾಗ ನನಗೆ ತುಂಬಾ ಸಂತೋಷವಾಗುತ್ತದೆ".

ಮಂಗಳೂರಿನಲ್ಲಿ ಬಿಹಾರ ವಿದ್ಯಾರ್ಥಿಗಳಿಗೆ ಕನ್ನಡ ಪಾಠ (ETV Bharat)

"ಈ ಮಕ್ಕಳಿಗೆ ಕನ್ನಡದ ಅರಿವು ಬರಲಾರಂಭಿಸಿದ ಕ್ಷಣದಿಂದ, ಕನ್ನಡ ಭಾಷೆಯಲ್ಲಿ ಹಾಡು ಹಾಡಲು ಮತ್ತು ಕನ್ನಡದ ಶ್ಲೋಕಗಳನ್ನು ಓದಲು ಅವರು ತಹತಹಿಸುತ್ತಿದ್ದಾರೆ. "ಮೊದಲಿಗೆ ಕನ್ನಡದ ಒಂದು ಶಬ್ದವೇ ಗೊತ್ತಿರಲಿಲ್ಲ, ಆದರೆ ಈಗ ಎರಡು ತಿಂಗಳಲ್ಲಿ ಕನ್ನಡದಲ್ಲಿ ಓದು - ಬರಹ ತಿಳಿದುಕೊಳ್ಳುತ್ತಿದ್ದಾರೆ," ಎಂದು ಶಿಕ್ಷಕಿ ಗೀತಾ ಹೇಳಿದ್ದಾರೆ.

ಬೋಳಾರ ಸರಕಾರಿ ಪ್ರಾಥಮಿಕ ಶಾಲೆಗೆ ಹೆಡ್​​ ಮಾಸ್ಟರ್​​ ಗೀತಾ. (ETV Bharat)

ಬಿಹಾರ ಮೂಲದ ವಿದ್ಯಾರ್ಥಿ ಅನಂತ್ ಮಾತನಾಡಿ, "ನಾನು ಬಿಹಾರದಿಂದ ಬಂದಿದ್ದೇನೆ. ನನ್ನ ಶಾಲಾ ಶಿಕ್ಷಕಿ ನನಗೆ ಕನ್ನಡದಲ್ಲಿ ಓದುವದನ್ನು, ಬರೆಯುವದನ್ನು ಕಲಿಸುತ್ತಿದ್ದಾರೆ. ನಾವು ಇವುಗಳನ್ನು ಕಲಿಯುತ್ತಿರುವುದು ನನಗೆ ಬಹಳ ಸಂತೋಷವನ್ನು ನೀಡುತ್ತದೆ. ಇವತ್ತಿಗೆ ನಾನು ಸ್ವಲ್ಪ ಕನ್ನಡ ಮಾತನಾಡಬಹುದು," ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

ಮಂಗಳೂರಿನಲ್ಲಿ ಬಿಹಾರ ವಿದ್ಯಾರ್ಥಿಗಳಿಗೆ ಕನ್ನಡ ಪಾಠ (ETV Bharat)

ಶಾಲೆಯಲ್ಲಿ ಮೂಲ ಸೌಲಭ್ಯಗಳ ಕೊರತೆ:ಬೋಳಾರದ ಈ ಸರಕಾರಿ ಶಾಲೆಯ ಮಕ್ಕಳು ಕನ್ನಡವನ್ನು ಕಲಿಯುತ್ತಿರುವುದರಿಂದ ಗೀತಾ ಸಲ್ದಾನಾ ಅವರ ಪ್ರಯತ್ನಗಳು ಮಹತ್ವ ಹೊಂದಿದರೂ, ಶಾಲೆಯಲ್ಲಿರುವ ಮೂಲ ಸೌಕರ್ಯಗಳಲ್ಲಿ ಸಾಕಷ್ಟು ಕೊರತೆ ಇದೆ. ಈಗಿರುವ ಮಕ್ಕಳಿಗೆ ಯೂನಿಫಾರಂ, ಬಟ್ಟೆ, ಪುಸ್ತಕಗಳು, ಬ್ಯಾಗುಗಳು, ಚಪ್ಪಲಿ ಸೇರಿದಂತೆ ಅನೇಕ ಅಗತ್ಯ ವಸ್ತುಗಳ ಕೊರತೆಯಿದೆ. ಈ ಮಕ್ಕಳ ಶಿಕ್ಷಣಕ್ಕಾಗಿ ದಾನಿಗಳ ಸಹಾಯ ಅತ್ಯಂತ ಅಗತ್ಯವಾಗಿದೆ.

ಮಂಗಳೂರಿನಲ್ಲಿ ಬಿಹಾರ ವಿದ್ಯಾರ್ಥಿಗಳಿಗೆ ಕನ್ನಡ ಪಾಠ (ETV Bharat)

ಬೇಕಾಗಿದೆ ದಾನಿಗಳ ಸಹಕಾರ:ಈ ಮಕ್ಕಳಲ್ಲಿ ಒಬ್ಬೊಬ್ಬರು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಿ ರೂಪಗೊಳ್ಳುವ ಮೂಲಕ ಸಮಾಜದ ಒಳಿತಿಗೆ ಸೇವೆ ಸಲ್ಲಿಸಬೇಕೆಂಬ ಗೀತಾ ಅವರ ಸಂಕಲ್ಪಕ್ಕೆ ದಾನಿಗಳು ಸಹಕಾರ ನೀಡಬಹುದು. ದಾನಿಗಳು ಗೀತಾ ಸಲ್ದಾನಾ (9845901136) ಅವರನ್ನು ಸಂಪರ್ಕಿಸಿ ತಮ್ಮ ಬೆಂಬಲವನ್ನು ನೀಡಬಹುದು.

ಇದನ್ನೂ ಓದಿ:ಮಾತೃಭಾಷೆ ಮರಾಠಿ, ನಿಷ್ಠೆ ಕನ್ನಡಕ್ಕೆ: ಗಡಿಯಲ್ಲಿ ಕನ್ನಡ ನಾಡು, ನುಡಿ ಸೇವೆಗೆ ಪಣ ತೊಟ್ಟ ಬೆಳಗಾವಿಯ ವೀರಕನ್ನಡಿಗ

Last Updated : Oct 31, 2024, 12:46 PM IST

ABOUT THE AUTHOR

...view details