ಕರ್ನಾಟಕ

karnataka

By ETV Bharat Karnataka Team

Published : Jul 19, 2024, 7:41 AM IST

ETV Bharat / state

ಬೆಂಗಳೂರು ಕಂಬಳದಲ್ಲಿ ಬಹುಮಾನ ಗೆದ್ದ 'ಲಕ್ಕಿ' ಕೋಣ ಸಾವು - Kambala Buffalo

ಉದರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕಂಬಳ ಕೋಣ ಲಕ್ಕಿ ಬುಧವಾರ ಸಾವನ್ನಪ್ಪಿದೆ.

ಕಂಬಳ ಕೋಣ ಲಕ್ಕಿ
ಕಂಬಳ ಕೋಣ ಲಕ್ಕಿ (ETV Bharat)

ಮಂಗಳೂರು:ಕಂಬಳ ಕ್ಷೇತ್ರಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದ 'ಲಕ್ಕಿ' ಎಂಬ ಕೋಣ ಬುಧವಾರ ಕೊನೆಯುಸಿರೆಳೆದಿದೆ. ಕಂಬಳ ಅಭಿಮಾನಿಗಳು ದುಃಖ ವ್ಯಕ್ತಪಡಿಸಿದ್ದು, ಹಲವರು ಆಗಮಿಸಿ ಕಳೇಬರದ ಅಂತಿಮ ದರ್ಶನ ಪಡೆದರು.

ವರಪಾಡಿ ಬಡಗುಮನೆ ದಿವಾಕರ ಚೌಟರ ಹಟ್ಟಿಯಲ್ಲಿದ್ದ ಆರು ವರ್ಷ ಪ್ರಾಯದ ಲಕ್ಕಿ ಕಳೆದ ಕೆಲವು ದಿನಗಳಿಂದ ಉದರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿತ್ತು.

ಲಕ್ಕಿ ಜೂನಿಯರ್ ವಿಭಾಗದಲ್ಲಿ ಮೊದಲು ತನ್ನನ್ನು ಪರಿಚಯಿಸಿಕೊಂಡು ಸೀನಿಯರ್ ಆದೊಡನೆ ತನ್ನ ಸಾಧನೆ ಆರಂಭಿಸಿತ್ತು. 2023-24ರ ಸೀಸನ್​ನಲ್ಲಿ ದೊಡ್ಡ ಹೆಸರು ಮಾಡಿ ಪದಕ ಮಾಲೆಗೆ ಕೊರಳೊಡ್ಡಿದ್ದ ಈ ಕೋಣ, ಭವಿಷ್ಯದ ದೊಡ್ಡ ಸ್ಟಾರ್ ಆಗುವ ಸೂಚನೆ ನೀಡಿತ್ತು. ಆದರೆ ಕಂಬಳ ಕರೆಯಲ್ಲಿ ಚಿಗರೆಯಂತೆ ಓಡುತ್ತಿದ್ದ ಲಕ್ಕಿ ಬದುಕಿನ ಓಟವನ್ನು ಬೇಗನೆ ಮುಗಿಸಿದೆ.

ಕಳೆದ ಕಂಬಳ ಸೀಸನ್​​ನಲ್ಲಿ 5 ಮೆಡಲ್​​ಗಳನ್ನು ಲಕ್ಕಿ ಗೆದ್ದುಕೊಂಡಿತ್ತು. ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಬಾರಿ ನಡೆದ ಕಂಬಳದಲ್ಲಿ ನೇಗಿಲು ಹಿರಿಯ ವಿಭಾಗದಲ್ಲಿ 2ನೇ ಬಹುಮಾನ ಮತ್ತು ಕಕ್ಯಪದವು, ನರಿಂಗಾನ, ಐಕಳ ಮತ್ತು ಜಪ್ಪು ಕಂಬಳಗಳಲ್ಲಿ ಮೆಡಲ್ ಪಡೆದಿತ್ತು.

ಕಳೆದ ಮೂರು ವರ್ಷಗಳಿಂದ ಜೋಡುಕರೆ ಕಂಬಳದಲ್ಲಿ ಭಾಗವಹಿಸುತ್ತಿದ್ದ ಲಕ್ಕಿ ಸುಮಾರು 12 ಪದಕಗಳನ್ನು ಗೆದ್ದುಕೊಂಡಿದೆ. ಎರಡು ವರ್ಷದ ಸಾಂಪ್ರದಾಯಿಕ ಕಂಬಳಗಳಲ್ಲಿ ಓಡಿದ್ದ ಲಕ್ಕಿ ಹಲವು ಪ್ರಶಸ್ತಿ ಗೆದ್ದುಕೊಂಡಿತ್ತು. 2021-22ರ ಮೂಡಬಿದಿರೆಯ ಕೋಟಿ ಚೆನ್ನಯ ಕಂಬಳದಲ್ಲಿ ತೆಗ್ಗರ್ಸೆ ಪಾಂಡೂ ಜೊತೆಗೂಡಿದ ಲಕ್ಕಿ ಮೊದಲ ಬಾರಿಗೆ ಜೋಡುಕರೆ ಕಂಬಳದ ಪ್ರಶಸ್ತಿ ಗೆದ್ದುಕೊಂಡಿತ್ತು. ಆ ಸೀಸನ್​​ನಲ್ಲಿ ಬಳಿಕ ಅದೇ ಜೋಡಿ ಮಿಯ್ಯಾರು ಮತ್ತು ಬಾರಾಡಿ ಕಂಬಳದಲ್ಲಿ ಪ್ರಶಸ್ತಿ ಬಾಚಿತ್ತು. 2022-23ರಲ್ಲಿ ಭಟ್ಕಳ ಪವನ್ ಜೊತೆಯಾಗಿ ಎರಡು ಮತ್ತು ನಾವುಂದ ಪುಟ್ಟ ಜೊತೆಯಾಗಿ ಎರಡು ಮೆಡಲ್ ಗೆದ್ದುಕೊಂಡಿತ್ತು. ಇದೇ ಸೀಸನ್ ಕೊನೆಗೆ ವರಪಾಡಿ ಬಡಗುಮನೆ ದಿವಾಕರ ಚೌಟರು ಲಕ್ಕಿಯನ್ನು ಖರೀದಿಸಿದ್ದರು.

ಇದನ್ನೂ ಓದಿ: ಕುಮಟಾದಲ್ಲಿ ತೆರವು ಕಾರ್ಯಾಚರಣೆ ವೇಳೆಯೇ ಕುಸಿದ ಗುಡ್ಡ; ಭಯಾನಕ ವಿಡಿಯೋ - Landslide In Kumta

ABOUT THE AUTHOR

...view details