ಕರ್ನಾಟಕ

karnataka

ETV Bharat / state

SSLC ಫೇಲ್, IAS ಪಾಸ್: ಕಷ್ಟದ ದಿನಗಳನ್ನು ಮೆಟ್ಟಿ ನಿಂತು ಗೆದ್ದ ಹಠವಾದಿ ಕೆ.ಶಿವರಾಮ್ - ಹೃದಯಾಘಾತ

ಚಿಕ್ಕವಯಸ್ಸಿನಲ್ಲಿಯೇ ಕಷ್ಟದ ದಿನಗಳನ್ನು ಕಂಡುಂಡು, ಅವುಗಳನ್ನು ದಿಟ್ಟತನದಿಂದ ಎದುರಿಸಿ ಉನ್ನತ ಸ್ಥಾನಕ್ಕೇರಿದ್ದ ಹಠವಾದಿ ಕೆ.ಶಿವರಾಮ್, ಹೃದಯಾಘಾತದಿಂದ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಕೆ.ಶಿವರಾಮ್
ಕೆ.ಶಿವರಾಮ್

By ETV Bharat Karnataka Team

Published : Feb 29, 2024, 6:47 PM IST

Updated : Feb 29, 2024, 7:48 PM IST

ಚಾಮರಾಜನಗರ/ಬೆಂಗಳೂರು: ಕನ್ನಡದಲ್ಲೇ ಯುಪಿಎಸ್‌ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾಗಿ ತಮ್ಮದೇ ರೀತಿಯ ಛಾಪು ಮೂಡಿಸಿದ್ದ ಕೆ.ಶಿವರಾಮ್​ ಅವರು ಅನಾರೋಗ್ಯ ಕಾರಣದಿಂದ ಇಂದು ನಿಧನರಾಗಿದ್ದಾರೆ. ಆದರೆ, ಅವರ ಬದುಕು ಯುವಕರಿಗೆ ಸ್ಫೂರ್ತಿ ಸೆಲೆಯಾಗಿದೆ.

ರಾಮನಗರ ಜಿಲ್ಲೆಯ ಬಿಡದಿ ಬಳಿಯ ಊರುಗಹಳ್ಳಿಯಲ್ಲಿ ಜನಿಸಿದ ಶಿವರಾಮ್,​ ಆರಂಭಿಕ ಬದುಕು ಬಡತನದಿಂದಲೇ ಕೂಡಿತ್ತು. ಊರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಹೈಸ್ಕೂಲಿಗೆ ಬೆಂಗಳೂರಿಗೆ ಬಂದು ಹಾಸ್ಟೆಲ್‌ನಲ್ಲಿದ್ದು ಓದು ಸಾಗಿಸುತ್ತಿದ್ದರು. ಆದರೆ, SSLCಯಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣಗೊಂಡಿದ್ದರು. ತಾನು ಹಿಂದುಳಿದ ವಿಷಯದಲ್ಲಿ ಪಾಸಾಗಲೇಬೇಕೆಂದು ಛಲ ತೊಟ್ಟು ಪೂರಕ ಪರೀಕ್ಷೆ ಬರೆದು ತೇರ್ಗಡೆ ಹೊಂದಿದರು. ಅದೇ ಆತ್ಮವಿಶ್ವಾಸ ಅವರನ್ನು ಮುಂದೆ ಉನ್ನತ ಹುದ್ದೆಯಲ್ಲಿ ತಂದು ನಿಲ್ಲಿಸಿತು. 'SSLCಯಲ್ಲಿ ಫೇಲ್​ ಆದರೂ ಸಹ ಕಷ್ಟಪಟ್ಟು ಓದಿ IAS ಪಾಸ್ ಮಾಡಿದೆ' ಎಂದು ಚಾಮರಾಜನಗರದಲ್ಲಿ ಈ ಹಿಂದೆ ಅವರೇ ಹೇಳಿಕೊಂಡಿದ್ದರು.

ಕೆ ಶಿವರಾಮ್​

ಸ್ಟೆನೊದಲ್ಲಿ ರ‍್ಯಾಂಕ್​-ಸೆಂಟ್ರಲ್ ಜೈಲಲ್ಲಿ ಕೆಲಸ:ಎಸ್ಎಸ್ಎಲ್​ಸಿ ಪಾಸಾದ ಬಳಿಕ ಟೈಪರೇಟಿಂಗ್ ಹಾಗೂ ಸ್ಟೆನೋಗ್ರಫಿ ತರಬೇತಿ ಪಡೆದು ಕನ್ನಡ ಶೀಘ್ರಲಿಪಿಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದ ಅವರಿಗೆ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಶೀಘ್ರಲಿಪಿಕಾರನ ಹುದ್ದೆ ಸಿಕ್ಕಿತ್ತು. ಈ ಹುದ್ದೆಗೂ ಮುನ್ನ ಅವರು ಕಬ್ಬಿಣ ಬಡಿಯುವ ಕೆಲಸ, ಮಗ್ಗದ ಕೆಲಸವನ್ನೂ ಮಾಡಿದ್ದರು. ಸೆಂಟ್ರಲ್ ಜೈಲಿನಲ್ಲಿ ನೌಕರಿ ಮಾಡುತ್ತಿರುವಾಗಲೇ ಐಎಎಸ್, ಐಪಿಎಸ್ ಪರೀಕ್ಷೆಗಳ ಬಗ್ಗೆ ಸ್ನೇಹಿತನಿಂದ ತಿಳಿದುಕೊಂಡಿದ್ದರು. ಹಗಲಿನಲ್ಲಿ ನೌಕರಿ ಮಾಡುತ್ತಾ, ಸಂಜೆ ಹೊತ್ತು ಕಾಲೇಜು ಶಿಕ್ಷಣ ಮುಗಿಸಿ ಕೆಪಿಎಸ್‌ಸಿ ಪರೀಕ್ಷೆ ಬರೆದರು. ಡಿವೈಎಸ್ಪಿ ಹುದ್ದೆಯನ್ನೂ ಪಡೆದರು. ಈ ನಡುವೆ ಕನ್ನಡದಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯೂ ಆದ ಶಿವರಾಮ್​ ಅವರಿಗೆ ಕರ್ನಾಟಕದಲ್ಲೇ ಕೆಲಸ‌ ಮಾಡುವ ಅದೃಷ್ಟವೂ ದೊರೆತಿತ್ತು.

ಸಂಸದನಾಗುವ ಕನಸು:2019 ಹಾಗೂ ಈಗಿನ ಚುನಾವಣೆಯಲ್ಲೂ ಚಾಮರಾಜನಗರದ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದರು. 2019ರಲ್ಲಿ ಕ್ಷೇತ್ರದಲ್ಲಿ ನಿರಂತರ ಓಡಾಟ ನಡೆಸಿ ಚಾಮರಾಜನಗರದಲ್ಲಿ ಮನೆ ಮಾಡಿ ಟಿಕೆಟ್ ಪಡೆಯಲು ಸಾಕಷ್ಟು ಕಸರತ್ತು ನಡೆಸಿದ್ದರು. ಆದರೆ, ಕೊನೆ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿತ್ತು. ಈಗಿನ ಚುನಾವಣೆಯಲ್ಲೂ ಟಿಕೆಟ್​ ಪಡೆಯುವ ಪ್ರಬಲ ಆಕಾಂಕ್ಷಿಯಾಗಿ ಗುರುತಿಸಿಕೊಂಡು ಓಡಾಟ ನಡೆಸಿದ್ದರು‌. ಈ ನಡುವೆ ಆರೋಗ್ಯ ಹದಗೆಟ್ಟಿದ್ದರೂ ಮುಖಂಡರ ಜೊತೆ ನಿರಂತರ ಫೋನ್ ಸಂಪರ್ಕ ಇಟ್ಟುಕೊಂಡಿದ್ದರು. ಐಎಎಸ್ ಅಧಿಕಾರಿಯಾಗುವ ಕನಸು, ಸಿನಿಮಾ ಹೀರೋ ಆಗುವ ಕನಸು ಈಡೇರಿದರೂ ಸಂಸದನಾಗುವ ಕನಸು ಮಾತ್ರ ಹಾಗೇ ಉಳಿಯಿತು. ಚಾಮರಾಜನಗರ ಜಿಲ್ಲೆಯಲ್ಲೂ ಅಪಾರ ಅಭಿಮಾನಿ ಬಳಗ ಹೊಂದಿದ್ದ ಶಿವರಾಮ್​, ದಲಿತರನ್ನು ಸಂಘಟಿಸುವ ಮೂಲಕ ಗಮನ ಸೆಳೆದಿದ್ದರು.

ಬಿಜೆಪಿ ಸೇರ್ಪಡೆಯಾದ ಸಮಯ

ಬಾಲ್ಯದ ಕನಸು ನನಸು: ನಟನೆಯ ಜೊತೆಗೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಕನ್ನಡಿಗರ ಮನಗೆದ್ದಿದ್ದ ಶಿವರಾಮ್, ಚಿಕ್ಕವಯಸ್ಸಿನಲ್ಲೇ ಕಷ್ಟದ ದಿನಗಳನ್ನು ಎದುರಿಸಿ ಉನ್ನತ ಸ್ಥಾನಕ್ಕೇರಿದ ಹಠವಾದಿ. ಬಣ್ಣದ ಪ್ರಪಂಚದ ಬಗ್ಗೆ ಗೊತ್ತಿಲ್ಲದ ಅವರು, ಚಿತ್ರರಂಗಕ್ಕೆ ಬಂದಿದ್ದು ಮಾತ್ರ ಇಂಟ್ರಸ್ಟ್ರಿಂಗ್. "ಬಾಲ್ಯದಲ್ಲಿ ನಾಟಕಗಳನ್ನು ಮಾಡುತ್ತಿದ್ದೆ. ಈ ನಾಟಕದಿಂದಲೇ ಸಿನಿಮಾಗೆ ಬರಲು ಸ್ಫೂರ್ತಿ" ಎಂದು ಸ್ವತಃ ಅವರೇ ಹೇಳಿಕೊಂಡಿದ್ದನ್ನು ನೆನಪು ಮಾಡಿಕೊಳ್ಳಬಹುದು.

1993ರಲ್ಲಿ ತೆರೆಗೆ ಬಂದ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಬಾ ನಲ್ಲೆ ಮಧುಚಂದ್ರಕೆ' ಇವರ ಮೊದಲ ಚಿತ್ರ. ರಾಹುಕಾಲದಲ್ಲಿ ಶುರುಮಾಡಿದ 'ಬಾ ನಲ್ಲೆ ಮಧುಚಂದ್ರಕೆ' ಸಿನಿಮಾ ಸೂಪರ್ ಹಿಟ್ ಆಗುವ ಮೂಲಕ ದೊಡ್ಡ ಹೆಸರು ತಂದುಕೊಟ್ಟಿತು. ಚಾಕ್ಲೇಟ್ ಹೀರೋಗಳ ಜಮಾನಾದಲ್ಲಿ ಸ್ಯಾಂಡಲ್​ವುಡ್​ನಲ್ಲಿ ಇವರನ್ನು ನೋಡಿದ್ದ ಅನೇಕರು ಹೀಯಾಳಿಸಿ ಮಾತನಾಡಿಕೊಂಡಿದ್ದರು. ಆದರೆ, ಅವರಿಗೆಲ್ಲ ಮೊದಲ ಚಿತ್ರದ ಅತ್ಯದ್ಭುತ ಗೆಲುವು ಉತ್ತರವನ್ನೂ ಕೊಟ್ಟಿತ್ತು. ಅಲ್ಲಿಂದಾಚೆ 'ವಸಂತಕಾವ್ಯ', 'ಖಳನಾಯಕ', 'ಯಾರಿಗೆ ಬೇಡ ದುಡ್ಡು', 'ಗೇಮ್ ಫಾರ್ ಲವ್', 'ನಾಗ', 'ಓ ಪ್ರೇಮ ದೇವತೆ' ಎಂಬ ಚಿತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡರು.

ಕೆ ಶಿವರಾಮ್

ಐಎಎಸ್ ವೃತ್ತಿ ಜೀವನದಲ್ಲಿ ವಿಜಯಪುರ, ಬೆಂಗಳೂರು, ಮೈಸೂರು, ಕೊಪ್ಪಳ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಯಲ್ಲಿ ಕೆ.ಶಿವರಾಮ್​ ಸೇವೆ ಸಲ್ಲಿಸಿದ್ದರು. ಸಮೂಹ ಶಿಕ್ಷಣ ಆಯುಕ್ತರಾಗಿ, ಆಹಾರ ಆಯುಕ್ತರಾಗಿ ಮತ್ತು MSILನ MD ಆಗಿಯೂ ಸೇವೆ ಸಲ್ಲಿಸಿದ್ದರು. 2013ರಲ್ಲಿ ನಿವೃತ್ತಿಯ ನಂತರ ರಾಜಕೀಯದತ್ತ ಮುಖ ಮಾಡಿದ್ದರು.

ಇದನ್ನೂ ಓದಿ: ನಟ, ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್‌ ಅವರಿ​ಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

Last Updated : Feb 29, 2024, 7:48 PM IST

ABOUT THE AUTHOR

...view details