ಶಿವಮೊಗ್ಗ: ಬಿಜೆಪಿ ಪಕ್ಷದ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪನವರ ವಿರುದ್ಧ ಸಿಡಿದೆದ್ದಿರುವ ಮಾಜಿ ಉಪಮುಖ್ಯಮಂತ್ರಿ ಕೆ ಎಸ್. ಈಶ್ವರಪ್ಪ ಅವರ ಮನವೊಲಿಕೆ ಯತ್ನವನ್ನು ಬಿಜೆಪಿಯ ನಾಯಕರು ಮುಂದುವರೆಸಿದ್ದಾರೆ.
ಬೆಳಗ್ಗೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಎಂ ಎಲ್ಸಿ ಎನ್ ರವಿಕುಮಾರ್ ಹಾಗೂ ಡಿ ಎಸ್ ಅರುಣ್ ಅವರು ಆಗಮಿಸಿ ಈಶ್ವರಪ್ಪನವರ ಮನೆಗೆ ಬಂದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸದೇ ಪಕ್ಷದ ಕೆಲಸದಲ್ಲಿ ತೂಡಗಿಸಿಕೊಳ್ಳುವಂತೆ ಕೇಳಿಕೊಂಡರು. ಆದರೆ ಇದನ್ನು ತಿರಸ್ಕರಿಸಿದ ಕೆ ಎಸ್ ಈಶ್ವರಪ್ಪ ತಾನು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಹೇಳಿದರು. ಇದರಿಂದ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮೂವರು ನಾಯಕರು ವಾಪಸ್ ತೆರಳಿದರು.
ಅದೇ ರೀತಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಚುನಾವಣಾ ಉಸ್ತುವಾರಿ ಹೊತ್ತಿರುವ ರಾಧಾ ಮೋಹನ್ ಅಗರವಾಲ್ ಹಾಗೂ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್ ಅವರು ಈಶ್ವರಪ್ಪನವರ ಮಲ್ಲೇಶ್ಬರ ನಗರದ ಮನೆಗೆ ಆಗಮಿಸಿದ್ದರು. ಈ ವೇಳೆ ಮನೆಯಲ್ಲಿದ್ದ ಈಶ್ವರಪ್ಪ ಮನೆಗೆ ಬಂದವರಿಗೆ ಕಾಫಿ ಕೊಟ್ಟು ಅವರನ್ನು ಮನೆಯಲ್ಲಿಯೇ ಕೂರಿಸಿ ತಮ್ಮ ಕಾರ್ಯಕ್ರಮಕ್ಕೆ ತೆರಳಿದರು.
ಈಶ್ವರಪ್ಪ ಅವರು ತೆರಳಿ ಒಂದು ಗಂಟೆಯಾದರೂ ಮನೆಗೆ ಬಾರದ ಕಾರಣ ಅಗರವಾಲ್ ಹಾಗೂ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್ ಅವರು ವಾಪಸ್ ಆಗಿದ್ದಾರೆ. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಲು ನಿರಾಕರಿಸಿದ ಅಗರವಾಲ್ ಅವರು, ಈಶ್ವರಪ್ಪ ಸಂಧಾನದ ಬಗ್ಗೆ ನಾನೇನು ಹೇಳಲ್ಲ. ಈಶ್ವರಪ್ಪ ಮನೆಯಲ್ಲಿರುವ ಮಕ್ಕಳ ಜೊತೆ ನಾನು ಮಾತನಾಡಿಲ್ಲ. ಇದು ಪರಿವಾರದ ಸಭೆಯಾಗಿದೆ. ಈಶ್ವರಪ್ಪ ಜೊತೆ ಮಾತನಾಡಿದ್ದು, ನಿಮ್ಮ ಮುಂದೆ ಚರ್ಚೆ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಯಡಿಯೂರಪ್ಪ, ವಿಜಯೇಂದ್ರ ಕಪಿ ಮುಷ್ಟಿಯಲ್ಲಿ ರಾಜ್ಯ ಬಿಜೆಪಿ: ಕೆ.ಎಸ್.ಈಶ್ವರಪ್ಪ