ನವದೆಹಲಿ/ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ನಿಲಯ್ ವಿ.ಅಂಜಾರಿಯಾ ಅವರನ್ನು ಶುಕ್ರವಾರ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವಾಲಯ ತಿಳಿಸಿದೆ. ಪ್ರಸ್ತುತ ಗುಜರಾತ್ ಹೈಕೋರ್ಟ್ ನ್ಯಾಯಾಧೀಶರಾಗಿರುವ ಇವರ ಹೆಸರನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಈ ತಿಂಗಳ ಆರಂಭದಲ್ಲಿ ಶಿಫಾರಸು ಮಾಡಿತ್ತು.
ಪ್ರಸ್ತುತ ಇರುವ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರು ಫೆಬ್ರವರಿ 24ರಂದು ನಿವೃತ್ತಿಯಾಗಲಿದ್ದಾರೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಬುಧವಾರ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರನ್ನು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಶಿಫಾರಸು ಮಾಡಿತ್ತು.
ನ್ಯಾ.ಸಂಜೀವ್ ಖನ್ನಾ ಮತ್ತು ನ್ಯಾ.ಬಿ.ಆರ್.ಗವಾಯಿ ಅವರನ್ನೂ ಕೊಲಿಜಿಯಂನಲ್ಲಿ ಸೇರಿಸಲಾಗಿತ್ತು. ಹಾಲಿ ಮುಖ್ಯ ನ್ಯಾಯಮೂರ್ತಿ ನಿವೃತ್ತಿಯಾಗುವ ದಿನಾಂಕದಿಂದ ಜಾರಿಗೆ ಬರುವಂತೆ ನ್ಯಾಯಮೂರ್ತಿ ಅಂಜಾರಿಯಾ ಅವರನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲು ಕೊಲಿಜಿಯಂ ಪ್ರಸ್ತಾಪಿಸಿತ್ತು.
ನ್ಯಾ.ಅಂಜಾರಿಯಾ ನವೆಂಬರ್ 2011ರಲ್ಲಿ ಗುಜರಾತ್ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡರು. ಅಂದಿನಿಂದ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನ್ಯಾಯಾಧೀಶರಾಗಿ ಪದೋನ್ನತಿಯಾಗುವ ಮೊದಲು ಗುಜರಾತ್ ಹೈಕೋರ್ಟ್‌ನಲ್ಲಿ ಸಿವಿಲ್, ಸಾಂವಿಧಾನಿಕ, ಕಂಪೆನಿ ಕಾನೂನು, ಕಾರ್ಮಿಕ ಮತ್ತು ಸೇವಾ ವಿಷಯಗಳಲ್ಲಿ ಅಭ್ಯಾಸ ಮಾಡಿದ್ದರು.
ಇದನ್ನೂ ಓದಿ:ತಂತ್ರಜ್ಞಾನ ಬಳಕೆಯಲ್ಲಿ ಕರ್ನಾಟಕ ಹೈಕೋರ್ಟ್ ಮುಂಚೂಣಿ: ಮುಖ್ಯ ನ್ಯಾ.ದಿನೇಶ್ ಕುಮಾರ್