ಬೆಂಗಳೂರು: ಸಂಬಂಧಿಕರೊಂದಿಗೆ ಕಾರ್ಯಕ್ರಮ ಮುಗಿಸಿಕೊಂಡು ರೈಲಿನಲ್ಲಿ ವಾಪಸ್ ಬರುವಾಗ ಸೋದರಿಯೇ ಅಕ್ಕನ ಬ್ಯಾಗ್ನಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದು, ಈ ಸಂಬಂಧ ಕಂಟ್ಮೋನೆಂಟ್ ರೈಲ್ವೆ ಪೊಲೀಸರು ಆಕೆಯ ತಂಗಿಯನ್ನು ಬಂಧಿಸಿದ್ದಾರೆ.
ನಾಗವಾರಪಾಳ್ಯ ನಿವಾಸಿಯಾಗಿರುವ ಲಲಿತ ಎಂಬಾಕೆ ನೀಡಿದ ದೂರಿನ ಮೇರೆಗೆ ಸೋದರ ಸಂಬಂಧಿತೆ ಚಂದ್ರಾ ಶರ್ಮಾ ಎಂಬುವರನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತೆಯಿಂದ 8.51 ಲಕ್ಷ ಮೌಲ್ಯದ 94 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ. ಗೃಹಿಣಿಯಾಗಿರುವ ಲಲಿತಾ ಕಳೆದ ತಿಂಗಳು 25 ರಂದು ಕೇರಳದ ಪಾಲಕ್ಕಾಡ್ ನಲ್ಲಿರುವ ಸಂಬಂಧಿಕರ ಗೃಹ ಪ್ರವೇಶ ಕಾರ್ಯಕ್ರಮಕ್ಕಾಗಿ ಎಂಟು ಜನರೊಂದಿಗೆ ತೆರಳಿದ್ದರು. ಬಳಿಕ ಕಾರ್ಯಕ್ರಮ ಮುಗಿಸಿ ಕೊಚುವೇಲಿ - ಮೈಸೂರು ಎಕ್ಸ್ಪ್ರೆಸ್ ರೈಲಿನಲ್ಲಿ ನಗರಕ್ಕೆ ವಾಪಸ್ ಆಗಿದ್ದರು.
ಗೃಹಿಣಿ ಲಲಿತಾ ಕೆ.ಆರ್.ಪುರಂ ರೈಲು ನಿಲ್ದಾಣದಲ್ಲಿ ಇಳಿದು ಹೋದರೆ ಆರೋಪಿತೆ ಚಂದ್ರಾ ಶರ್ಮಾ ಕಂಟ್ಮೋನೆಂಟ್ ಬಳಿ ಇಳಿದು ಮನೆಗೆ ತೆರಳಿದ್ದಳು. ಬಳಿಕ ಲಲಿತಾ ಮನೆಗೆ ಹೋದಾಗ ಬ್ಯಾಗ್ನಲ್ಲಿದ್ದ 94 ಗ್ರಾಂ ಮೌಲ್ಯದ ಎರಡು ಚಿನ್ನದ ಸರ ಕಾಣೆಯಾಗಿರುವುದು ಗೊತ್ತಾಗಿದೆ. ಅಪರಿಚಿತರು ಒಡವೆ ಕಳ್ಳತನ ಮಾಡಿದ್ದಾರೆ ಎಂದು ಕಂಟ್ಮೋನೆಂಟ್ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲಲಿತಾ ಜೊತೆ ಪ್ರಯಾಣ ಬೆಳೆಸಿದ್ದ ಎಲ್ಲರನ್ನೂ ಪ್ರಶ್ನಿಸಿದ್ದರು.