ಕರ್ನಾಟಕ

karnataka

ETV Bharat / state

ಅಂಬಾವಿಲಾಸ ಅರಮನೆ ದರ್ಬಾರ್‌ ಹಿನ್ನೆಲೆ ಏನು?: ರತ್ನ ಖಚಿತ ಸಿಂಹಾಸನ ಜೋಡಣೆ ಹೇಗೆ, ಇತಿಹಾಸ ತಿಳಿಯಿರಿ - Jeweled throne assembling - JEWELED THRONE ASSEMBLING

ಇಂದು ಮೈಸೂರು ಅಂಬಾವಿಲಾಸ ಅರಮನೆಯ ದರ್ಬಾರ್​ ಹಾಲ್​​ನಲ್ಲಿ ಸಾಂಪ್ರದಾಯಿಕ, ಧಾರ್ಮಿಕ ಕಾರ್ಯಗಳ ನಂತರ ಶುಭ ಲಗ್ನದಲ್ಲಿ ರತ್ನ ಖಚಿತ ಸಿಂಹಾಸನ ಜೋಡಣೆ ಮಾಡಲಾಗಿದೆ.

jeweled-throne
ರತ್ನಖಚಿತ ಸಿಂಹಾಸನ (ETV Bharat)

By ETV Bharat Karnataka Team

Published : Sep 27, 2024, 4:05 PM IST

Updated : Sep 27, 2024, 5:53 PM IST

ಮೈಸೂರು : ವರ್ಷದಲ್ಲಿ ಶರನ್ನವರಾತ್ರಿಯ ದಿನಗಳಲ್ಲಿ ಮಾತ್ರ ಪೂಜಿಸಲ್ಪಡುವ ರತ್ನ ಖಚಿತ ಸಿಂಹಾಸನವನ್ನ ಅಂಬಾವಿಲಾಸ ಅರಮನೆಯ ದರ್ಬಾರ್‌ ಹಾಲ್​ನಲ್ಲಿ ಸಾಂಪ್ರದಾಯಿಕ, ಧಾರ್ಮಿಕ ಕಾರ್ಯಗಳ ನಂತರ ಶುಭ ಲಗ್ನದಲ್ಲಿ ನುರಿತ ಸಿಬ್ಬಂದಿಯಿಂದ ರತ್ನ ಖಚಿತ ಸಿಂಹಾಸನ ಜೋಡಣೆ ಮಾಡಲಾಯಿತು.

ಇಂದಿಗೂ ದೇಶದಲ್ಲಿ ರಾಜ ಪರಂಪರೆಯಲ್ಲಿ ಶರನ್ನವರಾತ್ರಿ ಪೂಜೆ ನಡೆಯುವುದು ಮೈಸೂರಿನ ರಾಜವಂಶಸ್ಥರಲ್ಲಿ ಮಾತ್ರ. ಇದಕ್ಕೆ ಪೂರಕವೆಂಬಂತೆ ಸರ್ಕಾರ ಅರಮನೆಯ ಹೊರಗೆ ನಾಡಹಬ್ಬ ದಸರಾ ನಡೆಸಿದರೆ, ಅರಮನೆಯ ಒಳಗೆ ಸಂಪ್ರದಾಯದ ರೀತಿ ರಾಜವಂಶಸ್ಥರು ಶರನ್ನವರಾತ್ರಿಯನ್ನ 10 ದಿನಗಳ ಕಾಲ ಸಾಂಪ್ರದಾಯಕವಾಗಿ ನಡೆಸಿಕೊಂಡು ಬರುತ್ತಾರೆ.

ಇದರ ಬಹುಮುಖ್ಯ ಸಾಂಪ್ರದಾಯಿಕ ಪೂಜೆ ಎಂದರೆ ರಾಜವಂಶಸ್ಥರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಸಿಂಹಾಸನದಲ್ಲಿ ಕುಳಿತು ರಾಜ ಪರಂಪರೆಯಂತೆ ಖಾಸಗಿ ದರ್ಬಾರ್‌ ನಡೆಸುವುದಾಗಿದೆ. ಅದರ ಅಂಗವಾಗಿ ಇಂದು ಅಂಬಾ ವಿಲಾಸ ಅರಮನೆಯ ದರ್ಬಾರ್‌ ಹಾಲ್​ನಲ್ಲಿ ಬಿಡಿ ಭಾಗದಲ್ಲಿದ್ದ ಸಿಂಹಾಸನದ ಭಾಗಗಳನ್ನು ಒಟ್ಟಾಗಿ ಜೋಡಿಸುವುದೇ ಸಿಂಹಾಸನ ಜೋಡಣೆ ಆಗಿದೆ. ಆ ಜೋಡಣೆ ಕಾರ್ಯ ಇಂದು ಸಂಪನ್ನವಾಯಿತು.

ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ (ETV Bharat)

ಸಿಂಹಾಸನ ಜೋಡಣೆಗೂ ಮುನ್ನ ನಡೆದ ಧಾರ್ಮಿಕ ಕಾರ್ಯಗಳು : ಇಂದು ಬೆಳಗ್ಗೆ 9.55 ರಿಂದ 10.25 ರ ಶುಭ ಲಗ್ನದಲ್ಲಿ ದರ್ಬಾರ್‌ ಹಾಲ್​ನಲ್ಲಿ ಸಿಂಹಾಸನ ಜೋಡಣಾ ಕಾರ್ಯ ಆರಂಭವಾಯಿತು. ಅದಕ್ಕೂ ಮುನ್ನ ಅರಮನೆಯ ಪಂಚಾಂಗದಂತೆ ಬೆಳಗ್ಗೆ 7.30ಕ್ಕೆ ನವಗ್ರಹ ಪೂಜೆ, ಗಣಪತಿ ಹೋಮ, ಚಾಮುಂಡೇಶ್ವರಿ ಪೂಜೆ, ಶಾಂತಿ ಹೋಮ ನಡೆಸಲಾಯಿತು. ಬಳಿಕ ಸಿಂಹಾಸನ ಜೋಡಣೆ ಪ್ರಕ್ರಿಯೆ ನಡೆಯುವಾಗ ಗೋ ಶಾಲೆಗೆ, ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಪೂಜೆಯೂ ಸಹ ನಡೆಯಿತು.

ಸಿಂಹಾಸನ ಜೋಡಣೆ ಪ್ರಕ್ರಿಯೆ ಹೇಗೆ ನಡೆಯುತ್ತದೆ: ಅರಮನೆಯ ನೆಲ ಮಳಿಗೆಯ ಭದ್ರತಾ ಕೊಠಡಿಯಲ್ಲಿ ಬಿಡಿ ಭಾಗಗಳಲ್ಲಿ ಸಿಂಹಾಸನವನ್ನು ಭದ್ರವಾಗಿ ಇಡಲಾಗುತ್ತದೆ. ಇಂದು ಅರಮನೆಯ ಆಡಳಿತ ಮಂಡಳಿ ಹಾಗೂ ರಾಜವಂಶಸ್ಥರ ಬಳಿ ಇರುವ ಒಂದೊಂದು ಕೀಗಳನ್ನ ತರಿಸಿ ಇಬ್ಬರ ಸಮ್ಮುಖದಲ್ಲಿ ಸಿಂಹಾಸನದ ಭದ್ರತಾ ಕೊಠಡಿಯ ಬೀಗ ತೆಗೆದು ಸಿಂಹಾಸನದ ಮೂರು ಭಾಗಗಳಾದ ಆಸನ, ಮೆಟ್ಟಿಲು, ಬಂಗಾರದ ಛತ್ರಿ ಸೇರಿದಂತೆ 13 ವಿಭಾಗಗಳಲ್ಲಿ ಇರುವ ಸಿಂಹಾಸನದ ಬಿಡಿ ಭಾಗಗಳನ್ನ ದರ್ಬಾರ್‌ ಹಾಲ್​ಗೆ ತಂದು ನುರಿತ ಸಿಬ್ಬಂದಿಯಿಂದ ರಾಜಮಾತಾ ಪ್ರಮೋದಾ ದೇವಿ ಒಡೆಯರ್‌ ಹಾಗೂ ಅರಮನೆ ಆಡಳಿತ ಮಂಡಳಿಯ ಅಧಿಕಾರಿಗಳ ನೇತೃತ್ವದಲ್ಲಿ ಜೋಡಣೆ ನಡೆಯಲಿದೆ.

ಸಿಂಹಾಸನ ಜೋಡಣೆಗೆ ಅಂದಾಜು ಒಂದು ಗಂಟೆಯಿಂದ ಒಂದು ಗಂಟೆ ಮೂವತ್ತು ನಿಮಿಷ ಅಂದರೆ (90 minutes ) ತೊಂಬತ್ತು ನಿಮಿಷಗಳು ಬೇಕಾಗುತ್ತದೆ. ಆ ನಂತರ ಸಿಂಹಾಸನದ ಭದ್ರತೆಗೆ ಅಂಜೂರ ಮರದಿಂದ ತಯಾರಿಸಿರುವ ರಾಜ ಗದ್ದಿಗೆಗೆ ಆನೆ ದಂತದ ಹತ್ತಿಯನ್ನ ಅಳವಡಿಸಲಾಗಿದ್ದು, ಅದು ಮುಖ್ಯ ಆಸನದ ಬಳಿ ಇರುತ್ತದೆ. ಈ ಸಿಂಹಾಸನಕ್ಕೆ ಸಿಂಹವನ್ನು ನವರಾತ್ರಿಯ ಮೊದಲ ದಿನ ಖಾಸಗಿ ದರ್ಬಾರ್​ಗಿಂತ ಮುಂಚಿತವಾಗಿ ಜೋಡಣೆ ಮಾಡಲಾಗುತ್ತದೆ . ಈಗ ಆಸನವಾಗಿರುವ ಸಿಂಹಾಸನ ಅಂದು ಸಿಂಹಾಸನ ಆಗುತ್ತದೆ.

ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ (ETV Bharat)

ಪೂಜಾ ವಿಧಾನಗಳು ಹೇಗೆ..? :ಶರನ್ನವರಾತ್ರಿಯ ಮೊದಲ ದಿನ ಅಂದರೆ ಅಕ್ಟೋಬರ್‌ 3 ರಂದು ಚಾಮುಂಡಿ ಬೆಟ್ಟದಲ್ಲಿ ನಾಡಹಬ್ಬ ದಸರಾ ಚಾಲನೆಯಾಗುವ ಶುಭ ಮುಹೂರ್ತದಲ್ಲಿ ಅರಮನೆಯ ಒಳಗೆ ರಾಜವಂಶಸ್ಥರು ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ರತ್ನ ಖಚಿತ ಸಿಂಹ ಜೋಡಣೆ ಮಾಡುತ್ತಾರೆ.

ಆ ನಂತರ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ನವರಾತ್ರಿಯ ಒಂಭತ್ತು ದಿನ ಬೆಳಗ್ಗೆ ಮತ್ತು ಸಂಜೆ ಸಿಂಹಾಸನಕ್ಕೆ ರಾಜ ಪರಂಪರೆಯಂತೆ ಪೂಜೆ ಸಲ್ಲಿಸಿ, ಪ್ರತಿನಿತ್ಯ ಸಂಜೆ ರಾಜವಂಶಸ್ಥ ಯದುವೀರ್‌ ಒಡೆಯರ್‌ ಖಾಸಗಿ ದರ್ಬಾರ್‌ ನಡೆಸಲಿದ್ದಾರೆ. ಆ ನಂತರ ವಿಜಯದಶಮಿ ಆದ ಬಳಿಕ ಸಿಂಹಾಸನವನ್ನು ಪರದೆಯಿಂದ ಮುಚ್ಚಲಾಗುತ್ತದೆ. ಬಳಿಕ ಅಕ್ಟೋಬರ್‌ 27 ರಂದು ಸಿಂಹಾಸನಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ನಿಮಜ್ಜನ ಮಾಡಲಾಗುತ್ತದೆ.

ಸಿಂಹಾಸನದ ಇತಿಹಾಸ : ರತ್ನ ಖಚಿತ ಸಿಂಹಾಸನದ ತೂಕ ಖಚಿತವಾಗಿ ಇನ್ನೂ ಸಹ ತಿಳಿದಿಲ್ಲ. ಆದರೂ ರತ್ನ ಖಚಿತ ಸಿಂಹಾಸನ ಮೈಸೂರು ಸಾಮ್ರಾಜ್ಯಕ್ಕೆ ಹೇಗೆ ಬಂತು ಎಂಬುದಕ್ಕೆ ಒಂದು ಪೌರಾಣಿಕ ಹಿನ್ನೆಲೆ ಇದೆ. ಈ ರತ್ನ ಖಚಿತ ಸಿಂಹಾಸನ ಪಾಂಡವರ ಕಾಲದ್ದು ಎಂದು ಹೇಳಲಾಗುತ್ತದೆ. ಕಂಪುಲ ರಾಜನೂ ಇದನ್ನ ಪೆನುಗೊಂಡದಲ್ಲಿ ಹೂತಿಟ್ಟಾಗ ವಿದ್ಯಾರಣ್ಯರ ಗಮನಕ್ಕೆ ಈ ಸಿಂಹಾಸನ ಗೋಚರವಾಗುತ್ತದೆ.

ಈ ವಿಚಾರ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ ಹರಿಹರನಿಗೆ ಗೊತ್ತಾದಾಗ ಮಣ್ಣಿನಲ್ಲಿ ಹೂತಿಟ್ಟಿದ್ದ ಈ ಸಿಂಹಾಸನವನ್ನ ಹೊರತೆಗೆದು ಬಳಿಕ ಈ ಸಿಂಹಾಸನವನ್ನ ತಮ್ಮ ವಿಜಯನಗರ ಸಾಮ್ರಾಜ್ಯದಲ್ಲಿ ತಂದಿಟ್ಟಿದ್ದಾರೆ. ಆ ನಂತರ ವಿಜಯನಗರ ಸಾಮ್ರಾಜ್ಯ ಪತನವಾದ ನಂತರ ರತ್ನ ಖಚಿತ ಸಿಂಹಾಸನ ಮೈಸೂರಿನ ರಾಜ ಒಡೆಯರ್‌ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಆಗ ಮೈಸೂರಿನ ಸಾಮ್ರಾಜ್ಯದ ರಾಜಧಾನಿ ಶ್ರೀರಂಗಪಟ್ಟಣವಾಗಿತ್ತು. ಮೈಸೂರಿನಲ್ಲಿ ಅರಮನೆಯಾದ ನಂತರ ಸಿಂಹಾಸನವನ್ನ ಅರಮನೆಗೆ ತರಲಾಯಿತು ಎಂಬ ಉಲ್ಲೇಖ ಇದೆ . ಈ ಸಿಂಹಾಸನದ ಖಚಿತವಾದ ತೂಕ ಸದ್ಯ ಇಲ್ಲಿಯವರೆಗೆ ದಾಖಲಾಗಿಲ್ಲ.

ಇದನ್ನೂ ಓದಿ :ಅಂಬಾ ವಿಲಾಸ ಅರಮನೆಯ ದರ್ಬಾರ್‌ ಹಾಲ್​ನಲ್ಲಿ ನಾಳೆ ರತ್ನ ಖಚಿತ ಸಿಂಹಾಸನ ಜೋಡಣೆ - Jewelled throne Assembling

Last Updated : Sep 27, 2024, 5:53 PM IST

ABOUT THE AUTHOR

...view details