ಮೈಸೂರು:ನಗರದಲ್ಲಿ ಭಾನುವಾರ ಮುಕ್ತಾಯವಾದ ಐಟಿಎಫ್ ಮೈಸೂರು ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಅಮೆರಿಕದ ಎರಡನೇ ಶ್ರೀಲಂಕಾದ ಆಟಗಾರ್ತಿ ಜೆಸ್ಸಿ ಆನಿ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಮೈಸೂರಿನ ಚಾಮರಾಜಪುರಂನಲ್ಲಿರುವ ಮೈಸೂರು ಟೆನ್ನಿಸ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಜೆಸ್ಸಿ ಆನಿ 3-6, 6-3, 7-6 (8-6) ಸೆಟ್ಗಳಿಂದ, ಭಾರತದ ಅಗ್ರ ಶ್ರೇಯಾಂಕಿತ ಆಟಗಾರ್ತಿ ಶ್ರೀವಲ್ಲಿ ರಶ್ಮಿಕಾ ಭಾಮಿದಿಪಾಟಿ ವಿರುದ್ಧ ಗೆಲುವು ಸಾಧಿಸಿದರು. ಇದರೊಂದಿಗೆ 15,000 ಡಾಲರ್ಗಳ ಮೊತ್ತದ ಪ್ರಶಸ್ತಿಯನ್ನು ಜಯಿಸಿದರು.
ಫೈನಲ್ ಪಂದ್ಯದಲ್ಲಿ ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಮೊದಲ ಸೆಟ್ನಲ್ಲಿ ಶ್ರೀವಲ್ಲಿ ರಶ್ಮಿಕಾ ಭಾಮಿದಿಪಾಟಿ (6-3) ಜಯ ಸಾಧಿಸಿದ್ದರು. ಆದರೆ, ಹಿನ್ನಡೆ ಬಳಿಕ ಪುಟಿದೆದ್ದ ಆನಿ, 2ನೇ ಸೆಟ್ನಲ್ಲಿ 6-3 ಅಂಕಗಳಿಂದ ಮೇಲುಗೈ ಸಾಧಿಸಿದರು. ಈ ನಡುವೆ ಸುಮಾರು 20 ನಿಮಿಷಗಳ ಕಾಲ ಮಳೆ ಅಡ್ಡಿಪಡಿಸಿತು. ತದನಂತರ, ಆನಿ ಆಕ್ರಮಕಾರಿ ಆಟ ಪ್ರದರ್ಶಿಸಿ, ಭಾರತೀಯ ಆಟಗಾರ್ತಿಯನ್ನು ಮಣಿಸಿದರು.