ಹಾಸನ:ಹಾಸನ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಜೆಡಿಎಸ್ ಪಾಲಾಗಿದ್ದು, ಶಾಸಕ ಹೆಚ್.ಪಿ. ಸ್ವರೂಪ್ ತಮ್ಮ ಆಪ್ತರಿಗೆ ಸ್ಥಾನ ಕೊಡಿಸುವ ಮೂಲಕ ತಮ್ಮ ನಾಯಕತ್ವದ ಹಿಡಿತವನ್ನು ಸಾಬೀತು ಪಡಿಸಿದರು.
9ನೇ ವಾರ್ಡ್ ಜೆಡಿಎಸ್ ಸದಸ್ಯ ಎಂ. ಚಂದ್ರೇಗೌಡ ಅಧ್ಯಕ್ಷರಾಗಿ ಹಾಗೂ ಬಿಜೆಪಿಯಿಂದ ಆಯ್ಕೆಯಾದರೂ ಜೆಡಿಎಸ್ ಬೆಂಬಲಿಸಿದ್ದ 35ನೇ ವಾರ್ಡ್ ಸದಸ್ಯೆ ಲತಾದೇವಿ ಸುರೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಒಟ್ಟು 35 ಸಂಖ್ಯಾಬಲದ ಹಾಸನ ನಗರಸಭೆಯಲ್ಲಿ ಜೆಡಿಎಸ್ 17, ಕಾಂಗ್ರೆಸ್ 2 ಬಿಜೆಪಿ 14 ಸದಸ್ಯರ ಬಲ ಹೊಂದಿದ್ದರೆ, ಇಬ್ಬರು ಪಕ್ಷೇತರರಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು ಒಟ್ಟು 19 ಮತಗಳ ಅಗತ್ಯವಿತ್ತು. ಇಬ್ಬರು ಕಾಂಗ್ರೆಸ್ ಸದಸ್ಯರನ್ನು ಹೊರತುಪಡಿಸಿ ಉಳಿದ ಎಲ್ಲ 34 ಸದಸ್ಯರು ಚಂದ್ರೇಗೌಡ ಪರ ಕೈ ಎತ್ತಿ ಮತ ಚಲಾಯಿಸುವ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದರು. ಕಣದಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಕೇವಲ 2 ಮತ ಪಡೆದರು.
ಬಿಜೆಪಿಗೆ ಕೈಕೊಟ್ಟ ಮೈತ್ರಿ:ನಗರಸಭೆ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದು ಜೆಡಿಎಸ್ ಜೊತೆ ಗುರುತಿಸಿಕೊಂಡಿದ್ದ ಲತಾದೇವಿ 21 ಮತಗಳನ್ನು ಪಡೆದು ಆಯ್ಕೆಯಾದರು. ಅವರ ಪ್ರತಿಸ್ಪರ್ಧಿ ಬಿಜೆಪಿಯ ಶಿಲ್ಪಾ ವಿಕ್ರಂ 14 ಮತಗಳನ್ನು ಗಳಿಸಿ ಪರಾಭವಗೊಂಡರು. ಎನ್.ಡಿ.ಎ. ಮೈತ್ರಿಯಂತೆ ಉಪಾಧ್ಯಕ್ಷ ಸ್ಥಾನದ ಬೇಡಿಕೆ ಇಟ್ಟಿದ್ದ ಬಿಜೆಪಿ ಶಿಲ್ಪಾ ವಿಕ್ರಂ ಅವರನ್ನು ಕಣಕ್ಕಿಳಿಸಿತ್ತು. ವಿಪ್ ಜಾರಿ ಹಿನ್ನೆಲೆಯಲ್ಲಿ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಲತಾದೇವಿ ಶಿಲ್ಪಾ ವಿಕ್ರಂ ಪರ ಮತಹಾಕಿದ್ದು ವಿಶೇಷವಾಗಿತ್ತು. ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾದ ಶಾಸಕ ಹೆಚ್.ಪಿ. ಸ್ವರೂಪ್ ಸಹ ಮತ ಚಲಾಯಿಸಿದರು.