ಬೆಂಗಳೂರು:''ಕೆಲವು ಮುಖಂಡರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಕಳಂಕ ತರುವ ಕೆಲಸ ಮಾಡಿದ್ದಾರೆ. ಅದರಲ್ಲೂ ರಾಜ್ಯ ಸರ್ಕಾರ ತುಂಬಾ ಕೀಳಾಗಿ ನಡೆದುಕೊಳ್ಳುತ್ತಿದೆ. ಈ ಬಗ್ಗೆ ಇಂದಿನಿಂದ (ಮಂಗಳವಾರ) ನಾವು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತೇವೆ'' ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದ್ದಾರೆ.
ಪದ್ಮನಾಭನಗರದಲ್ಲಿ ನಿನ್ನೆ (ಸೋಮವಾರ) ರಾತ್ರಿ ದೇವೇಗೌಡರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮಗಳ ಜೊತೆಗೆ ಅವರು ಮಾತನಾಡಿದರು.
''ನಮ್ಮ ಪಕ್ಷದ ವತಿಯಿಂದ ನಡೆಸುತ್ತಿರುವ ಪ್ರತಿಭಟನೆಗೆ ಮೈತ್ರಿ ಪಕ್ಷ ಬೆಂಬಲ ಕೊಡಬಹುದು'' ಎಂದರು. ಮುಂದುವರೆದು ಮಾತನಾಡಿ, "ರಾಜ್ಯದಲ್ಲಿ ಹಲವು ಬೆಳವಣಿಗೆಗಳು ನಡೆದಿವೆ. ಇವತ್ತು ನಮ್ಮ ನಾಯಕ ದೇವೇಗೌಡರನ್ನು ಭೇಟಿಯಾಗಿದ್ದೇನೆ. ಆರೋಗ್ಯ ವಿಚಾರಿಸಿದ್ದೇನೆ. ಕೆಲವರು ಮಾಡಿದ ತಪ್ಪಿನಿಂದ ಇಡೀ ರಾಜ್ಯವೇ ತಲೆ ತಗ್ಗಿಸುವ ಕೆಲಸ ಅಂತ ಹೇಳಿದ್ದಾರೆ'' ಎಂದು ತಿಳಿಸಿದರು.
ಸಿಬಿಐ ತನಿಖೆಗೆ ಒತ್ತಾಯ: ''ಪ್ರಜ್ವಲ್ ವಿಚಾರದಲ್ಲಿ ಎಸ್ಐಟಿ ತನಿಖೆ ನಡೆಯುತ್ತಿದೆ. ರಾಜ್ಯ ಸರ್ಕಾರ ಏನೇನೋ ಮಾಡ್ತಿದೆ. ಎಸ್ಐಟಿ ಮೇಲೆ ನಮಗೆ ನಂಬಿಕೆ ಇಲ್ಲ. ಸಿಬಿಐ ತನಿಖೆ ಆಗಬೇಕು'' ಎಂದು ಇದೇ ವೇಳೆ ಅವರು ಒತ್ತಾಯಿಸಿದರು.