ಕರ್ನಾಟಕ

karnataka

ETV Bharat / state

ಮೈಸೂರಿನಲ್ಲಿ ಜೆಡಿಎಸ್​ ಪ್ರತಿಭಟನೆ; ಪೆನ್​ಡ್ರೈವ್ ಪ್ರಕರಣದ ತನಿಖೆಯನ್ನ ಸಿಬಿಐಗೆ ವಹಿಸುವಂತೆ ಶಾಸಕ ಜಿ. ಟಿ. ದೇವೇಗೌಡ ಆಗ್ರಹ - JDS Protest

ಪೆನ್​ಡ್ರೈವ್ ಪ್ರಕರಣದ ತನಿಖೆಯನ್ನ ಸಿಬಿಐಗೆ ವಹಿಸುವಂತೆ ಆಗ್ರಹಿಸಿ ನಗರದಲ್ಲಿ ಇಂದು ಜೆಡಿಎಸ್​ ಕಾರ್ಯಕರ್ತರು ಪ್ರತಿಭಟನೆ ಕೈಗೊಂಡರು.

INVESTIGATION OF PEN DRIVE CASE  HASSAN PEN DRIVE CASE  MYSURU
ಶಾಸಕ ಜಿ.ಟಿ.ದೇವೇಗೌಡ (ETV Bharat)

By ETV Bharat Karnataka Team

Published : May 8, 2024, 3:05 PM IST

ಶಾಸಕ ಜಿ.ಟಿ.ದೇವೇಗೌಡ ಹೇಳಿಕೆ (ETV Bharat)

ಮೈಸೂರು:ಪೆನ್​ಡ್ರೈವ್ ಪ್ರಕರಣವನ್ನ SIT ಸರಿಯಾಗಿ ತನಿಖೆ ನಡೆಸುತ್ತಿಲ್ಲ. ಈ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಬೇಕು ಎಂದು ಮೈಸೂರಿನಲ್ಲಿ ಜೆಡಿಎಸ್ ಮೌನ ಪ್ರತಿಭಟನೆ ನಡೆಸಿತು. ಈ ಸಂದರ್ಭದಲ್ಲಿ ಶಾಸಕ ಜಿ.ಟಿ. ದೇವೇಗೌಡ ಈ ಪ್ರಕರಣವನ್ನ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಇಂದು ಮೈಸೂರು ಜಿಲ್ಲಾ ಜೆಡಿಎಸ್ ಕಾರ್ಯಕರ್ತರು ನಗರದ ಸಿದ್ದಾರ್ಥ ನಗರ ಬಳಿಯ ಹಳೆ ಡೈರಿಯಿಂದ ಹೊಸ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೌನ ಪ್ರತಿಭಟನೆ ಹಾಗೂ ಕಪ್ಪುಪಟ್ಟಿ ಧರಿಸಿ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಬಳಿ ತೆರಳಿ ಪ್ರತಿಭಟನೆ ನಡೆಸಿದರು.

ಡಿಕೆ ವಿರುದ್ಧ ಧಿಕ್ಕಾರ: ಈ ಪ್ರತಿಭಟನೆಯ ಸಂದರ್ಭದಲ್ಲಿ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ''ಈ ಪ್ರಕರಣದಲ್ಲಿ ಪೆನ್​ಡ್ರೈವ್ ಹಂಚಿಕೆ ಹಾಗೂ ವಿಡಿಯೋಗಳನ್ನ ಜಾಲತಾಣದಲ್ಲಿ ಹರಿಬಿಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕು. ಪೆನ್​ಡ್ರೈವ್ ಪ್ರಕರಣದ ರೂವಾರಿ ಡಿ.ಕೆ. ಶಿವಕುಮಾರ್ ಅವರನ್ನ ಸಂಪುಟದಿಂದ ಹೊರಹಾಕಬೇಕು'' ಎಂದು ಪ್ರತಿಭಟನಾಕಾರರು ಡಿ.ಕೆ. ಶಿವಕುಮಾರ್ ಹಾಗೂ ಮಂಡ್ಯದ ಮಾಜಿ ಸಂಸದ ಶಿವರಾಮೇಗೌಡ ವಿರುದ್ಧ ಧಿಕ್ಕಾರ ಕೂಗಿದರು.

ಸಿಬಿಐ ತನಿಖೆ ವಹಿಸಿ: ''ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅಶ್ಲೀಲ ವಿಡಿಯೋಗಳು ಇರುವ ಪೆನ್​ಡ್ರೈವ್​ಗಳನ್ನ ಹಂಚಿಕೆ ಮಾಡಿರುವ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಸಿಗುವಂತಾಗಬೇಕು. ಪೆನ್​ಡ್ರೈವ್ ಹಂಚಿಕೆಯಾಗಿರುವುದರ ಹಿಂದೆ ಸಿಎಂ ಹಾಗೂ ಡಿಸಿಎಂ ಕೈವಾಡ ಇದೆ. ಜೊತೆಗೆ ಈ ಮೂಲಕ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಅವರ ಕುಟುಂಬಕ್ಕೆ ಕಳಂಕ ತರುವ ರೀತಿಯಲ್ಲಿ ಷಡ್ಯಂತ್ರ ಮಾಡಲಾಗಿದೆ. ಕೂಡಲೇ ಡಿ.ಕೆ. ಶಿವಕುಮಾರ್ ಅವರನ್ನ ಸಂಪುಟದಿಂದ ತೆಗೆದು ಹಾಕಿ, ಇಡೀ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಬೇಕು. ಪೆನ್​ಡ್ರೈವ್​ಗಳನ್ನ ತಯಾರಿಕೆ ಮಾಡುವುದರಲ್ಲಿ ಡಿ.ಕೆ. ಶಿವಕುಮಾರ್ ಪಾತ್ರ ಇದೆ'' ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಹಾಗೂ ಶಾಸಕ ಜಿ. ಟಿ. ದೇವೇಗೌಡ ಆರೋಪಿಸಿದರು.

ಹುಬ್ಬಳ್ಳಿ ಹಾಗೂ ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನೆ:ಹುಬ್ಬಳ್ಳಿ ಹಾಗೂ ದೊಡ್ಡಬಳ್ಳಾಪುರದಲ್ಲಿಯೂ ಕೂಡ ಜೆಡಿಎಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಪೆನ್ ಡ್ರೈವ್ ಪ್ರಕರಣದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಕೈವಾಡ ಇದೆ ಎಂದು ಆರೋಪಿಸಿದರು. ಎಸ್​ಐಟಿ ತನಿಖೆಯಲ್ಲಿ ನಮಗೆ ನ್ಯಾಯ ಸಿಗುವುದಿಲ್ಲ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಓದಿ:ರೇವಣ್ಣರನ್ನು ಆಸ್ಪತ್ರೆಗೆ ಕರೆದೊಯ್ದಿದ್ದ ಎಸ್ಐಟಿ, ಇಂದು ಪೊಲೀಸ್​ ಕಸ್ಟಡಿ ಅಂತ್ಯ - Woman Kidnap Case

ABOUT THE AUTHOR

...view details