ಬೆಂಗಳೂರು:''ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಔಪಚಾರಿಕವಾಗಿ ಮಾತನಾಡಲು ನನ್ನನ್ನು ದೆಹಲಿಗೆ ಕರೆದಿದ್ದರು. ಇದರಿಂದ ನಿನ್ನೆ (ಗುರುವಾರ) ದೆಹಲಿಗೆ ತೆರಳಿದ್ದೆ. ಅಮಿತ್ ಶಾ ಅವರನ್ನು ಭೇಟಿ ಮಾಡಿದ ನಂತರ ಇಂದು (ಶುಕ್ರವಾರ) ಮರಳಿದ್ದೇನೆ. ಅಮಿತ್ ಶಾ ಜೊತೆಗೆ ಯಾವೆಲ್ಲ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ ಎಂಬುದನ್ನು ಎರಡರಿಂದ ಮೂರು ದಿನಗಳ ನಂತರ ಬಹಿರಂಗ ಮಾಡುತ್ತೇನೆ'' ಎಂದು ಶಾಸಕ ಜೆ. ಜನಾರ್ದನ ರೆಡ್ಡಿ ಹೇಳಿದರು.
ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನನ್ನ ಪತ್ನಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎನ್ನುವುದನ್ನು ಹಿಂದೆ ಕೂಡ ತಿಳಿಸಿದ್ದೆ, ಈಗಲೂ ಕೂಡ ಅದನ್ನೇ ಹೇಳುತ್ತೇನೆ'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಮಿತ್ ಶಾ ಜನಾರ್ದನ ರೆಡ್ಡಿ ಭೇಟಿ:ಬಿಜೆಪಿಯ 2ನೇ ಪಟ್ಟಿಯಲ್ಲಿ ಬಿಜೆಪಿಯ ಕರಡಿ ಸಂಗಣ್ಣ ಅವರಿಗೆ ಟಿಕೆಟ್ ಕೈತಪ್ಪಿದ್ದು, ಅದರ ಬೆನ್ನಲ್ಲೇ ಇದೀಗ ಶಾಸಕ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ ಜನಾರ್ದನ ರೆಡ್ಡಿ ದೆಹಲಿಗೆ ತೆರಳಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿಯ ಹಾಲಿ ಸಂಸದ ಕರಡಿ ಸಂಗಣ್ಣ ಅವರಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿದೆ. ಇದೇ ಸಂದರ್ಭದಲ್ಲಿ ದೆಹಲಿಯಲ್ಲಿ ಶಾಸಕ ರೆಡ್ಡಿ, ಅಮಿತ್ ಶಾ ಅವರನ್ನು ಭೇಟಿಯಾಗಿರುವ ವಿಚಾರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.