'ರಕ್ತದಾನಿಗಳ ಗ್ರಾಮ'ವೆಂದೇ ಪ್ರಸಿದ್ಧಿ ಪಡೆದ ಹಾವೇರಿಯ ಜಲ್ಲಾಪುರ (ETV Bharat) ಹಾವೇರಿ: ಇಂದ ವಿಶ್ವ ರಕ್ತದಾನ ದಿನದ ಸಂದರ್ಭದಲ್ಲಿ 'ರಕ್ತದಾನಿಗಳ ಗ್ರಾಮ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜಿಲ್ಲೆಯ ಸವಣೂರು ತಾಲೂಕಿನ ಜಲ್ಲಾಪುರ ಗ್ರಾಮದ ಕುರಿತ ವಿಶೇಷ ಸ್ಟೋರಿಯನ್ನು ತಿಳಿಯೋಣ. ಇಲ್ಲಿರುವ 520 ಮನೆಗಳಲ್ಲೂ ಕನಿಷ್ಠ ಒಬ್ಬರು ರಕ್ತದಾನಿಗಳಿರುವುದು ಇಲ್ಲಿನ ವಿಶೇಷ.
ಯುವಕರಿಂದ ರಕ್ತದಾನದ ಸಂಕಲ್ಪ ಇಲ್ಲಿಯ ಯುವಕರು ಜೀವದಾನಿ ಬಳಗ ರಚಿಸಿಕೊಂಡು ನಿರಂತರ ರಕ್ತದಾನ ಮಾಡುತ್ತಿದ್ದಾರೆ. ಈ ಹಿಂದೆ ಕೊರೊನಾ ಸಮಯದಲ್ಲಿ ಗರ್ಭಿಣಿಯರು ಸೇರಿದಂತೆ ಇತರೆ ಕಾಯಿಲೆಯಿಂದ ಬಳಲುತ್ತಿದ್ದ ಹಲವರು ಸಕಾಲಕ್ಕೆ ರಕ್ತ ಸಿಗದೆ ಸಾವನ್ನಪ್ಪಿದ್ದರು. ಇದನ್ನು ಮನಗಂಡ ಜಲ್ಲಾಪುರ ಗ್ರಾಮಸ್ಥರು ಅಂದಿನಿಂದ ರಕ್ತದಾನ ಮಾಡುವ ಸಂಕಲ್ಪ ತೆಗೆದುಕೊಂಡಿದ್ದಾರೆ. ಗ್ರಾಮದಲ್ಲಿ ಜೀವದಾನಿಗಳ ಬಳಗ ರಚಿಸಿಕೊಂಡು ಪ್ರತಿವರ್ಷ ರಕ್ತದಾನ ಶಿಬಿರ ಏರ್ಪಡಿಸುತ್ತಿದ್ದಾರೆ.
ರಕ್ತದಾನಿಗಳ ಗ್ರಾಮ (ETV Bharat) ಗ್ರಾಮದ ಪ್ರಮುಖ ವೃತ್ತಗಳಲ್ಲಿ ರಕ್ತದಾನದ ಮಹತ್ವ ಸಾರುವ ಬರಹಗಳು ಕಾಣಿಸುತ್ತವೆ. ಜಲ್ಲಾಪುರ ಗ್ರಾಮದ ಬಸ್ ನಿಲ್ದಾಣ ರಕ್ತದಾನದ ಪ್ರತಿಯೊಂದು ಅಂಶವನ್ನೂ ತಿಳಿಸುತ್ತದೆ. ಈ ಕುರಿತು ಇರುವ ಮೂಢನಂಬಿಕೆಗಳನ್ನು ದೂರ ಮಾಡುತ್ತಿದೆ. ರಕ್ತದಾನ, ನೇತ್ರದಾನ ಮತ್ತು ಅಂಗಾಂಗ ದಾನದ ಮಹತ್ವವನ್ನು ಇಲ್ಲಿಯ ಬರಹಗಳು ಸಾರುತ್ತಿವೆ. ರಕ್ತದಾನ ಯಾಕೆ ಮಹತ್ವದ್ದಾಗಿದೆ?, ಯಾರು ಮಾಡಬಹುದು?, ವರ್ಷಕ್ಕೆಷ್ಟು ಬಾರಿ ಮಾಡಬೇಕು?, ಇದರಿಂದ ಏನೆಲ್ಲಾ ಪ್ರಯೋಜನೆಗಳಿವೆ?, ಯಾರಿಗೆಲ್ಲಾ ಉಪಯೋಗವಾಗುತ್ತದೆ? ಎಂಬ ಬರಹಗಳು ಇಲ್ಲಿವೆ.
ರಕ್ತದಾನದ ಸಂದೇಶ ಸಾರುತ್ತಿರುವ ಗ್ರಾಮಸ್ಥರು (ETV Bharat) ಹೆಚ್ಚುತ್ತಲೇ ಇದೆ ರಕ್ತದಾನಿಗಳ ಸಂಖ್ಯೆ; ಆರಂಭದಲ್ಲಿ ಬೆರಳೆಣಿಕೆಯಷ್ಟಿದ್ದ ರಕ್ತದಾನಿಗಳ ಸಂಖ್ಯೆ ಇದೀಗ 520 ದಾಟಿದೆ. 10ಕ್ಕಿಂತ ಹೆಚ್ಚು ಬಾರಿ ರಕ್ತದಾನ ಮಾಡಿದ ಯುವಕರ ಸಂಖ್ಯೆ ಹೆಚ್ಚುತ್ತಿದೆ. ಹಾವೇರಿ ಜಿಲ್ಲಾಸ್ಪತ್ರೆಗೆ ಅತಿಹೆಚ್ಚು ರಕ್ತ ನೀಡಿದ ಖ್ಯಾತಿಯೂ ಸಹ ಈ ಗ್ರಾಮಕ್ಕಿದೆ. ರಕ್ತದಾನದ ಜೊತೆಗೆ ವಿಶೇಷವಾಗಿ ಪ್ಲಾಸ್ಮಾ, ಪ್ಲೇಟ್‌ಲೆಟ್ ದಾನವನ್ನೂ ಯುವಕರು ಮಾಡುತ್ತಿದ್ದಾರೆ.
ಜೀವ ಇರುವವರೆಗೆ ರಕ್ತದಾನ, ಜೀವ ಹೋದ ಮೇಲೆ ನೇತ್ರದಾನ, ಅಂಗಾಂಗ ದಾನ ಎನ್ನುವ ಸಂದೇಶವನ್ನು ಇಲ್ಲಿನ ಜನರು ಸಾರುತ್ತಿದ್ದಾರೆ. ರಕ್ತದಾನ ಶಿಬಿರ ಏರ್ಪಡಿಸುವುದರ ಜೊತೆಗೆ ಅದರ ಮಹತ್ವದ ಬಗ್ಗೆ ಉಪನ್ಯಾಸ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತಿದೆ.
ರಕ್ತದಾನದ ಸಂದೇಶ (ETV Bharat) ಯುವಕ ಸತೀಶ ಗವಳಿ ಮಾತನಾಡಿ, "ಕೊರೊನಾ ಸಮಯದಲ್ಲಿ ಹೆರಿಗೆ ವೇಳೆ ರಕ್ತ ಸಿಗದೆ ಅನೇಕ ಗರ್ಭಿಣಿಯರು ಸಾವನ್ನಪ್ಪಿದ್ದನ್ನು ನಾವು ಕೇಳಿದ್ದೇವು. ಅಂದೇ ರಕ್ತದಾನ ಮಾಡಬೇಕೆಂದು ಗ್ರಾಮದ ಜನರೆಲ್ಲ ನಿರ್ಣಯಿಸಿದೆವು. 2020ರಲ್ಲೇ ಗ್ರಾಮದಿಂದ ರಕ್ತದಾನದ ಮೊದಲ ಶಿಬಿರ ಆಯೋಜಿಸಲಾಯಿತು. ಕೊರೊನಾ ಕಾರಣ ಅಂತರ ಕಾಯ್ದುಕೊಳ್ಳುವುದು ಕೂಡ ಅಗತ್ಯವಿತ್ತು. ಈ ವೇಳೆ ಬಹಳ ಎಚ್ಚರಿಕೆಯಿಂದ 100 ಯೂನಿಟ್ ರಕ್ತ ಸಂಗ್ರಹಿಸಿ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಅಂದಿನಿಂದ ಇಲ್ಲಿಯವರೆಗೂ ನಮ್ಮ ಜೀವದಾನಿ ಬಳಗ ರಕ್ತದಾನದ ಜೊತೆಗೆ ನಿಧನದ ಬಳಿಕ ನೇತ್ರದಾನ, ಅಂಗಾಂಗ ದಾನ ಮಾಡಲು ತೀರ್ಮಾನಿಸಲಾಗಿದೆ. ಸದ್ಯ ಗ್ರಾಮದಿಂದ 200 ಯೂನಿಟ್ ರಕ್ತ ಸಂಗ್ರಹಿಸಲಾಗುತ್ತಿದೆ" ಎಂದು ತಿಳಿಸಿದರು.
ಇದನ್ನೂ ಓದಿ:ಶ್ವಾನದಿಂದ ಶ್ವಾನಕ್ಕೆ ರಕ್ತದಾನ; ಮತ್ತೊಂದು ವಿಶೇಷ ಘಟನೆಗೆ ಸಾಕ್ಷಿಯಾದ ಸ್ನೇಹಮೈತ್ರಿ ಬ್ಲಡ್ ಆರ್ಮಿ