ಹುಬ್ಬಳ್ಳಿ:ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಸಿಗುವ ವಿಶ್ವಾಸವಿತ್ತು. ನಿರೀಕ್ಷೆಯಂತೆ ಟಿಕೆಟ್ ನೀಡುವ ಮೂಲಕ ಹೆಚ್ಚಿನ ಸೇವೆ ಮಾಡಲು ವರಿಷ್ಠರು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಬೆಳಗಾವಿ ಟಿಕೆಟ್ ಘೋಷಣೆ ಹಿನ್ನೆಲೆಯಲ್ಲಿ ಭಾನುವಾರ ಅಭಿಮಾನಿಗಳೊಂದಿಗೆ ಸಂಭ್ರಮಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬೆಳಗಾವಿ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದೇನೆ. ಈ ನಿಟ್ಟಿನಲ್ಲಿ ವರಿಷ್ಠರಾದ ಜೆ.ಪಿ.ನಡ್ಡಾ, ಪ್ರಧಾನಮಂತ್ರಿ ನರೇಂದ್ರ ಮೋದಿ, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಮತ್ತು ಸ್ಥಳೀಯ ನಾಯಕರಿಗೆ ಧನ್ಯವಾದ ತಿಳಿಸುವೆ ಎಂದು ಹರ್ಷ ವ್ಯಕ್ತಪಡಿಸಿದರು.
ಸ್ಥಳೀಯ ನಾಯಕರ ನಂಬಿಕೆ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ಮಾಜಿ ಕೇಂದ್ರ ಸಚಿವರಾದ ದಿ. ಸುರೇಶ್ ಅಂಗಡಿ ಅವರು ರೈಲ್ವೆ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅದನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಭರವಸೆ ನೀಡಿದರು.
ಬೆಳಗಾವಿ ಅಭಿವೃದ್ಧಿ ಮಾಡಬೇಕು ಎಂಬ ಹುಮ್ಮಸ್ಸು ಬಂದಿದೆ. ಎಲ್ಲರ ಜೊತೆಗೂಡಿ ಚುನಾವಣೆ ಎದುರಿಸುತ್ತೇನೆ. ನಾನು ಬೆಳಗಾವಿ ಸ್ಥಳೀಯ ಮಟ್ಟದಲ್ಲಿ ಸಂಘಟನೆ ಮಾಡಿದ್ದೇನೆ. ಹೀಗಾಗಿ ಹಣದ ಮೇಲೆ ಚುನಾವಣೆ ನಡೆಯುವುದಿಲ್ಲ. ಇದು ರಾಷ್ಟ್ರೀಯ ಚುನಾವಣೆ. ಮೋದಿಯವರು ಮತ್ತೊಮ್ಮೆ ಪ್ರಧಾನಿ ಮಾಡುವ ನಿಟ್ಟಿನಲ್ಲಿ ಚುನಾವಣೆ ನಡೆಯುತ್ತಿದೆ. ಬೆಳಗಾವಿಯಲ್ಲಿ ಯಾವುದೇ ವಿರುದ್ಧ ವಾತಾವರಣ ಇದ್ದರೂ ಕೂಡಾ ಅದನ್ನು ಶಮನ ಮಾಡುವೆ. ಲೋಕಸಭಾ ಚುನಾವಣೆ ಹೊಸದಿರಬಹುದು. ಆದರೆ ಅಪಾರ ರಾಜಕೀಯ ಅನುಭವವಿದೆ. ಯಾವುದೇ ಪದವಿ, ಸಚಿವ ಸ್ಥಾನಕ್ಕೆ ಆಸೆ ಪಡುವುದಿಲ್ಲ. ಅವೆಲ್ಲಾ ತಾನಾಗಿಯೇ ಒಲಿದು ಬರಬೇಕೆಂದು ಹೇಳಿದರು.