ಮೈಸೂರು:ಸ್ವಂತ ಖರ್ಚಿನಲ್ಲಿ ಯೂಟ್ಯೂಬ್ ಚಾನಲ್ ತೆರೆದು ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವಂತೆ ತಾಂತ್ರಿಕ ಶಿಕ್ಷಣ ಬೋಧಿಸುತ್ತಿದ್ದ ತರಬೇತಿ ಅಧಿಕಾರಿಯೊಬ್ಬರಿಗೆ ರಾಷ್ಟ್ರೀಯ ಪ್ರಶಸ್ತಿ ಒಲಿದಿದೆ. ಹೌದು, ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಯ ವತಿಯಿಂದ ಕೊಡಮಾಡುವ 2024ರ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ನಗರದ ಎನ್.ಆರ್. ಮೊಹಲ್ಲಾದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ತರಬೇತಿ ಅಧಿಕಾರಿ ಕೆ.ಜೆ. ಶಿವಲಿಂಗಯ್ಯ ಅವರು ಭಾಜನರಾಗಿದ್ದಾರೆ.
ಕ್ಯಾಮರಾ ಬಾಡಿಗೆ ಪಡೆದು ವಿಡಿಯೋ ಚಿತ್ರೀಕರಣ:ಈ ಕುರಿತು ತರಬೇತಿ ಅಧಿಕಾರಿ ಕೆ.ಜೆ. ಶಿವಲಿಂಗಯ್ಯ 'ಈಟಿವಿ ಭಾರತ' ಜೊತೆಗೆ ಮಾತನಾಡಿ, ನಮ್ಮ ಕಾಲೇಜಿಗೆ ಹಳ್ಳಿ ಗಾಡಿನ ಮತ್ತು ಬಡತನ ರೇಖೆಗಿಂತ ಕೆಳಗಿರುವ ವಿದ್ಯಾರ್ಥಿಗಳು ಹೆಚ್ಚಾಗಿ ಬರುತ್ತಿದ್ದರು. ಅವರು ವಿದ್ಯಾಭ್ಯಾಸದ ಜೊತೆಗೆ ಕೆಲಸ ಮಾಡಿಕೊಂಡು ಹಣ ಸಂಪಾದನೆ ಮಾಡುತ್ತಿದ್ದರು. ಕೆಲವು ವಿದ್ಯಾರ್ಥಿಗಳು ಪೇಂಟಿಂಗ್, ಕ್ಯಾಟರಿಂಗ್ ಕೆಲಸಕ್ಕೆ ಹೋಗುತ್ತಿದ್ದರು. ಇವರೆಲ್ಲರಿಗೂ ತರಗತಿಗಳಿಗೆ ಬರಲು ಕೆಲವೊಮ್ಮೆ ಸಾಧ್ಯವಾಗುತ್ತಿರಲಿಲ್ಲ. ಕೈಗಾರಿಕಾ ತರಬೇತಿ ತರಗತಿಗಳಲ್ಲಿ ಕೌಶಲ್ಯ ಹೆಚ್ಚಿಸುವ ಕುರಿತು ತರಗತಿಗಳನ್ನು ಮಾಡಲಾಗುತ್ತದೆ. ಹೀಗಾಗಿ ನಾನು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಒಂದು ಕ್ಯಾಮರಾ ಬಾಡಿಗೆ ಪಡೆದು ವಿಡಿಯೋ ಚಿತ್ರೀಕರಣ ಮಾಡಿ ಯೂಟ್ಯೂಬ್ಗೆ ಅಪ್ಲೋಡ್ ಮಾಡಲು ಶುರು ಮಾಡಿದೆ ಎಂದು ತಿಳಿಸಿದರು.
ಮೆಕ್ಯಾನಿಕಲ್ ವಿಷಯಕ್ಕೆ ಸಂಬಂಧಿಸಿದ ಪಠ್ಯ ಮತ್ತು ಪ್ರಾಯೋಗಿಕ ವಿಷಯಗಳ ಕುರಿತು ಕಾಲೇಜಿನ ಲ್ಯಾಬ್ಗಳಲ್ಲಿಯೇ ವಿಡಿಯೋಗಳನ್ನು ವಿದ್ಯಾರ್ಥಿಗಳ ಸಹಾಯದೊಂದಿಗೆ ಚಿತ್ರೀಕರಿಸಿ "ಡಿಜಿಟಲ್ ಐಟಿಐ" ಯೂಟ್ಯೂಬ್ ಚಾನಲ್ಗೆ ಅಪ್ಲೋಡ್ ಮಾಡುತ್ತಿದ್ದೆ. ಈಗಿನ ಕಾಲದಲ್ಲಿ ಎಲ್ಲಾ ವಿದ್ಯಾರ್ಥಿಗಳ ಬಳಿ ಮೊಬೈಲ್ ಫೋನ್ ಇದ್ದೇ ಇರುತ್ತದೆ. ಅದರ ಜೊತೆಯಲ್ಲಿಯೇ ಯೂಟ್ಯೂಬ್ ಕೂಡ ಇರುತ್ತದೆ. ಇದನ್ನು ಮನಗಂಡು ಯೂಟ್ಯೂಬ್ ಮೂಲಕ ಬೋಧಿಸುವುದು ಸೂಕ್ತ ಎಂದು ತರಗತಿಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ಅಪ್ಲೋಡ್ ಮಾಡಿದೆ ಎಂದು ಶಿವಲಿಂಗಯ್ಯ ಮಾಹಿತಿ ನೀಡಿದರು.