ಹಾವೇರಿ: ಆರೋಗ್ಯ ಸೂಕ್ಷ್ಮ ವಿಚಾರಗಳನ್ನು ರಾಜಕಾರಣಕ್ಕೆ ಎಳೆದು ತರುವುದು ಸಮಂಜಸವಲ್ಲ ಮತ್ತು ಸರಿಯಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾರ್ಟ್ ಆಪರೇಷನ್ ಚುನಾವಣೆ ಗಿಮಿಕ್ ಎಂದು ಆರೋಪ ಮಾಡಿರುವ ಕಾಂಗ್ರೆಸ್ ಶಾಸಕರ ವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ "ಈ ರೀತಿ ಆರೋಪ ಮಾಡಿರುವ ಶ್ರೀರಂಗಪಟ್ಟಣ ಶಾಸಕ ಡಾಕ್ಟರಲ್ಲ. ಕುಮಾರಸ್ವಾಮಿ ಅವರು ಚೆನ್ನೈಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬಂದ ಬಗ್ಗೆ ಎಲ್ಲ ದಾಖಲಾತಿಗಳಿವೆ. ರಾಜಕೀಯ ನೆಲೆಗಟ್ಟಿನಲ್ಲಿ ಹೋರಾಟ ಮಾಡಬೇಕು. ವೈಯಕ್ತಿಕ ವಿಚಾರಗಳಲ್ಲಿ ಅಲ್ಲ. ಶ್ರೀರಂಗಪಟ್ಟಣದ ಶಾಸಕ ಈ ಹಿಂದೆ ಕುಮಾರಸ್ವಾಮಿ ಜೊತೆ ಇದ್ದರು. ಅವರ ತಾಯಿ ಸಹ ಜೆಡಿಎಸ್ ಶಾಸಕಿ ಆಗಿದ್ದರು. ಅಂತಹವರು ಈ ರೀತಿ ಆರೋಪ ಮಾಡುತ್ತಿರುವುದು ನೋವು ತಂದಿದೆ" ಎಂದು ಬೇಸರ ವ್ಯಕ್ತಪಡಿಸಿದರು.
"ಬದಲಾದ ರಾಜಕೀಯ ಪರಿಸ್ಥಿತಿಗೆ ವೈಯಕ್ತಿಕ ವಿಚಾರಗಳನ್ನು ತರುವುದು ಸರಿಯಲ್ಲ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಹೆಚ್.ಡಿ. ಕುಮಾರಸ್ವಾಮಿ ಅವರು ಸ್ಪರ್ಧಿಸಲಿದ್ದಾರೆ. ಸುಮಲತಾ ಅವರ ನಡೆ ಇಂದು ಸಂಜೆ ತಿಳಿಯಬಹುದು. ಎಲ್ಲವೂ ಸರಿಯಾಗುತ್ತೆ" ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಿರುವ ಬಗ್ಗೆ ಅವರು, "ಇಷ್ಟು ಪ್ರಮಾಣದಲ್ಲಿ ಈಗಾಗಲೇ ಶಾಸಕ, ಸಚಿವರಾಗಿರುವವರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಲು ಕಾರಣ ಏನೆಂದರೆ, ಸುಮಾರು 12 ಜನ ಸಚಿವರಿಗೆ ಸ್ಪರ್ಧಿಸಲು ತಿಳಿಸಲಾಗಿತ್ತು. ಆದರೆ ಅವರಿಗೆ ಗೆಲುವು ಸಾಧಿಸುವ ವಿಶ್ವಾಸವಿಲ್ಲ. ಆದರೆ, ನೀವೇ ಅಭ್ಯರ್ಥಿಗಳು ಯಾರಾಗಬಹುದು ಎಂದು ಹೇಳಿ ಎಂದಾಗ ತಮ್ಮ ಅಣ್ಣ ತಮ್ಮಂದಿರನ್ನು, ಮಕ್ಕಳನ್ನು, ಸಂಬಂಧಿಕರನ್ನು ಸ್ಪರ್ಧೆಗೆ ನಿಲ್ಲಿಸಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ರಾಜಕೀಯ ಲಾಭವಾಗುವುದಿಲ್ಲ" ಎಂದು ಬೊಮ್ಮಾಯಿ ತಿಳಿಸಿದರು.
"ಜನರು ಈಗಾಗಲೇ ಪ್ರಧಾನಿ ಮೋದಿ ಮತ್ತು ಬಿಜೆಪಿಗೆ ಮತ ಹಾಕುವ ನಿರ್ಣಯ ಮಾಡಿದ್ದಾರೆ. ಇದರಿಂದ ಮೋದಿ ಅಲೆ ಮತ್ತಷ್ಟು ಹೆಚ್ಚಾಗುತ್ತದೆ ಹೊರತು ಕಾಂಗ್ರೆಸ್‌ಗೆ ಲಾಭವಾಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ ಮಾಡಿದ ಮೂರು ತಿಂಗಳಲ್ಲಿ ಕಾಂಗ್ರೆಸ್‌ನಲ್ಲಿ ಸಮಸ್ಯೆಯಾಗಲಿದೆ. ಕಾಂಗ್ರೆಸ್ ಇಬ್ಭಾಗವಾಗುವ ಸಾಧ್ಯತೆ ಇದ್ದು, ಅದರ ಲಕ್ಷಣಗಳು ಗೋಚಲಾರಂಭಿಸಿವೆ. ಅದರ ಪರಿಣಾಮ ರಾಜ್ಯದ ಮೇಲೆಯೂ ಆಗಲಿದೆ. ನಾಮಪತ್ರ ಸಲ್ಲಿಸುವ ದಿನಾಂಕ ನಿಗದಿ ಮಾಡಿಲ್ಲ. ಒಂದು ನಾಮಪತ್ರ ಸಲ್ಲಿಸುವ ಸಮಯದ ಪ್ರಕಾರ ಮತ್ತೊಂದು ನಾಮಪತ್ರವನ್ನು ಸಾರ್ವತ್ರಿಕ ಕಾರ್ಯಕ್ರಮ ನಡೆಸಿ ಸಲ್ಲಿಸಲಿದ್ದೇವೆ. ಎರಡು ದಿನಾಂಕಗಳನ್ನು ಭಾನುವಾರ ಪ್ರಕಟಿಸಲಾಗುವುದು" ಎಂದು ಬೊಮ್ಮಾಯಿ ತಿಳಿಸಿದರು.
"ನಾನು ಸಹ ಸ್ಟಾರ್ ಪ್ರಚಾರಕನಾಗಿದ್ದೇನೆ. ಮೊದಲ ಹಂತದ ಎರಡ್ಮೂರು ಕ್ಷೇತ್ರಗಳಿಗೆ ಮತ್ತು ಎರಡನೇಯ ಹಂತದ ಎರಡ್ಮೂರು ಕ್ಷೇತ್ರಗಳಿಗೆ ಆಹ್ವಾನ ನೀಡಿದ್ದಾರೆ. ಅಲ್ಲಿ ಹೋಗಿ ನಮ್ಮ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದೇನೆ. ಕಾದಂಬರಿಕಾರ ಎಸ್.ಎಲ್.ಭೈರಪ್ಪ ಮತ್ತೊಮ್ಮೆ ಮೋದಿ ಸರ್ಕಾರ ಬರಲಿದೆ ಎಂದರೆ, ಮತ್ತೊಬ್ಬ ಚಿಂತಕ ದೇವನೂರು ಮಹಾದೇವ ಬಿಜೆಪಿ ಪ್ರಜಾಪ್ರಭುತ್ವಕ್ಕೆ ಮಾರಕ ಎನ್ನುವ ವೈರುಧ್ಯದ ಬಗ್ಗೆ ಮಾತನಾಡಿದ್ದಾರೆ. ಇಬ್ಬರೂ ಹಿರಿಯ ಸಾಹಿತಿಗಳು. ಅವರವರ ವಿಚಾರಗಳಿಗೆ ಅಂಟಿಕೊಂಡು ತಮ್ಮ ವಿಚಾರಧಾರೆಗಳನ್ನು ಬಹಳ ವರ್ಷಗಳಿಂದ ವ್ಯಕ್ತಪಡಿಸುತ್ತಿದ್ದಾರೆ. ಎಸ್.ಎಲ್. ಭೈರಪ್ಪ ವಿಚಾರಧಾರೆ ಬಹಳ ಸ್ಪಷ್ಟವಾಗಿದೆ. ದೇವನೂರು ಮಹದೇವ ಅವರದು ಎಡಪಂಥೀಯ ವಿಚಾರ ಬಹಳ ಸ್ಪಷ್ಟವಾಗಿದೆ. ಆದರೆ, ಜನ ಮಾತ್ರ ಈ ಬಾರಿ ಮತ್ತೆ ಮೋದಿಯವರನ್ನು ಗೆಲ್ಲಿಸುವ ತೀರ್ಮಾನ ಮಾಡಿದ್ದಾರೆ." ಎಂದು ತಿಳಿಸಿದರು.
ಇದನ್ನೂ ಓದಿ:ರಾಜ್ಯದ 28 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫೈನಲ್: ಯಾರ ವಿರುದ್ಧ ಯಾರು ಅಖಾಡದಲ್ಲಿದ್ದಾರೆ, ಇಲ್ಲಿದೆ ಸಂಪೂರ್ಣ ಮಾಹಿತಿ - Lok Sabha election 2024