ಬೆಂಗಳೂರು:ಮಾಹಿತಿ ತಂತ್ರಜ್ಞಾನ(ಐಟಿ) ಉದ್ಯೋಗಿಗಳ ಕೆಲಸದ ಅವಧಿಯನ್ನು 14 ಗಂಟೆಗಳವರೆಗೆ ಹೆಚ್ಚಿಸಲು ರಾಜ್ಯ ಸರ್ಕಾರ ಉದ್ದೇಶಿಸಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (ಕೆಐಟಿಯು) ಫ್ರೀಡಂ ಪಾರ್ಕ್ನಲ್ಲಿ ಶನಿವಾರ ಪ್ರತಿಭಟನೆ ನಡೆಸಿತು. ಸುಮಾರು 500ಕ್ಕೂ ಅಧಿಕ ಉದ್ಯೋಗಿಗಳು ಭಾಗಿಯಾಗಿ, ಆಕ್ರೋಶ ಹೊರಹಾಕಿದರು.
'ಕೆಲಸದ ಸಮಯವನ್ನು 14 ಗಂಟೆಗಳವರೆಗೆ ವಿಸ್ತರಿಸಬೇಕೆಂಬ ಸರ್ಕಾರದ ಕ್ರಮ ಖಂಡನೀಯ', 'ನಾವು ಜೀತದಾಳುಗಳಲ್ಲ' ಎಂಬಂತಹ ಭಿತ್ತಿಪತ್ರಗಳನ್ನು ಹಿಡಿದು ಸರ್ಕಾರದ ವಿರುದ್ಧ ಪ್ರತಿಭಟಿಸಿದರು.
ಸದ್ಯ ಅಸ್ತಿತ್ವದಲ್ಲಿರುವ ಕರ್ನಾಟಕ ಅಂಗಡಿಗಳು ಹಾಗೂ ವಾಣಿಜ್ಯ ಸಂಸ್ಥೆಗಳ ಕಾಯಿದೆಯು ದಿನಕ್ಕೆ ಗರಿಷ್ಠ 10 ಗಂಟೆಗಳ ಕೆಲಸವನ್ನು ಅನುಮತಿಸುತ್ತದೆ. ಆದರೆ ಸರ್ಕಾರ ಅನುಷ್ಠಾನಕ್ಕೆ ತರಲು ರೂಪಿಸಿರುವ ತಿದ್ದುಪಡಿ ಹೆಚ್ಚುವರಿ ಸಮಯ ಸೇರಿದಂತೆ, IT/ITES ಕಂಪನಿಗಳಿಗೆ ಸಿಬ್ಬಂದಿಯ ದೈನಂದಿನ ಕೆಲಸದ ಸಮಯವನ್ನು ಅನಿರ್ದಿಷ್ಟವಾಗಿ ವಿಸ್ತರಿಸಲು ಅನುವು ಮಾಡಿಕೊಡುತ್ತದೆ. ಆದ್ದರಿಂದ ತಿದ್ದುಪಡಿ ತರಬಾರದು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (ಕೆಐಟಿಯು) ಪ್ರಧಾನ ಕಾರ್ಯದರ್ಶಿ ಸುಹಾಸ್ ಅಡಿಗ ಮಾತನಾಡಿ, ''ನೂತನ ತಿದ್ದುಪಡಿ ಉದ್ಯೋಗಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಲಿದೆ ಎಂಬುದನ್ನು ವಿವಿಧ ಅಧ್ಯಯನಗಳು ತೋರಿಸಿವೆ. ಇದು ಕಾರ್ಮಿಕರ ವೈಯಕ್ತಿಕ ಜೀವನದ ಮೂಲಭೂತ ಹಕ್ಕಿನ ಮೇಲಿನ ದಾಳಿ. ಈ ಬದಲಾವಣೆಯನ್ನು ಕಾರ್ಯಗತಗೊಳಿಸಲು ಮಾಡುವ ಯಾವುದೇ ಪ್ರಯತ್ನಗಳನ್ನು ಸಂಘ ವಿರೋಧಿಸುತ್ತದೆ'' ಎಂದು ಹೇಳಿದರು.