ಚಿತ್ರದುರ್ಗ:ಮರುಬಳಕೆ ಉಡಾವಣಾ ವಾಹನದ (Reusable Launch Vehicle - RLV) ಲ್ಯಾಂಡಿಂಗ್ ಪ್ರಯೋಗದ (ಎಲ್‌ಇಎಕ್ಸ್) ಅಂತಿಮ ಪ್ರಯೋಗವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ- ISRO) ಭಾನುವಾರ ಯಶಸ್ವಿಯಾಗಿ ನಡೆಸಿದೆ.
ಕರ್ನಾಟಕದ ಚಿತ್ರದುರ್ಗದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್ (Aeronautical Test Range - ATR)ನಲ್ಲಿ ಬೆಳಗ್ಗೆ 07:10ಕ್ಕೆ 'ಪುಷ್ಪಕ್' ನೌಕೆಯ ಪ್ರಯೋಗ ನಡೆಸಲಾಗಿದೆ. ಇದು ಲ್ಯಾಂಡಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸುವ ಎಲ್‌ಇಎಕ್ಸ್-03 ತಂತ್ರಜ್ಞಾನದ ಸರಣಿಯಲ್ಲಿ ಅಂತಿಮ ಹಾಗೂ ಸತತ ಮೂರನೇ ಯಶಸ್ವಿ ಪ್ರಯೋಗವಾಗಿದೆ.
ಆರ್‌ಎಲ್‌ವಿ ಎಲ್‌ಇಎಕ್ಸ್-02 ನೌಕೆಯುನ್ನು 150 ಮೀಟರ್ ಕ್ರಾಸ್ ರೇಂಜ್ನಲ್ಲಿ ಪ್ರಯೋಗ ನಡೆಸಲಾಗಿತ್ತು. ಈಗ ಆರ್‌ಎಲ್‌ವಿ ಎಲ್‌ಇಎಕ್ಸ್-3 ನೌಕೆಯನ್ನು 500 ಮೀಟರ್ ಕ್ರಾಸ್ ರೇಂಜ್ನಲ್ಲಿ ಹೆಚ್ಚು ಸವಾಲು ಹಾಗೂ ಹೆಚ್ಚು ತೀವ್ರವಾದ ಗಾಳಿ ಪರಿಸ್ಥಿತಿಗಳಲ್ಲೂ ಪ್ರಯೋಗ ಯಶಸ್ಸು ಕಂಡಿದೆ. ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್‌ನಿಂದ 4.5 ಕಿ.ಮೀ ಎತ್ತರದಿಂದ ಈ ನೌಕೆಯನ್ನು ಬಿಡುಗಡೆ ಮಾಡಲಾಗಿತ್ತು. ರನ್‌ವೇ ಸೆಂಟರ್‌ಲೈನ್‌ನಲ್ಲಿ ನಿಖರವಾದ ಸಮತಲ ಲ್ಯಾಂಡಿಂಗ್ ಕಾರ್ಯಗತಗೊಂಡಿದೆ ಎಂದು ಇಸ್ರೋ ತಿಳಿಸಿದೆ.
ವಿಮಾನದ ವೇಗಕ್ಕಿಂತ ನೌಕೆಯ ವೇಗ ಹೆಚ್ಚು: ಈ ನೌಕೆಯು ಕಡಿಮೆ ಲಿಫ್ಟ್-ಟು-ಡ್ರ್ಯಾಗ್ ಅನುಪಾತದ ವಾಯುಬಲ ವೈಜ್ಞಾನಿಕ ಸಂರಚನೆಯಿಂದಾಗಿ ಇದರ ಲ್ಯಾಂಡಿಂಗ್ ವೇಗವು 320 kmph (ಪ್ರತಿ ಗಂಟೆಗೆ ಕಿಲೋ ಮೀಟರ್) ಅನ್ನು ಮೀರಿತ್ತು. ವಾಣಿಜ್ಯ ವಿಮಾನದ ವೇಗವು 260 kmph ಮತ್ತು ಸಾಮಾನ್ಯ ಯುದ್ಧ ವಿಮಾನದ ವೇಗವು 280 kmph ಇರುತ್ತದೆ ಎಂದು ಇಸ್ರೋ ಹೇಳಿದೆ.
ನೌಕೆಯ ವೇಗವನ್ನು ಗಂಟೆಗೆ ಸುಮಾರು 100 ಕಿ.ಮೀ.ಗೆ ಇಳಿಸಲು ಟಚ್‌ಡೌನ್ ನಂತರ, ಬ್ರೇಕ್ ಪ್ಯಾರಾಚೂಟ್‌ಗಳನ್ನು ಬಳಸಲಾಗಿದೆ. ವೇಗವನ್ನು ಕಡಿಮೆ ಮಾಡಲು ಮತ್ತು ರನ್‌ವೇಯಲ್ಲಿ ನೌಕೆಯನ್ನು ನಿಲ್ಲಿಸಲು ಲ್ಯಾಂಡಿಂಗ್ ಗೇರ್ ಬ್ರೇಕ್‌ಗಳನ್ನು ಬಳಸಲಾಗಿದೆ. ಎಲ್‌ಇಎಕ್ಸ್-02 ಮಿಷನ್‌ನಿಂದ ಯಾವುದೇ ಮಾರ್ಪಾಡುಗಳಿಲ್ಲದೆ ರೆಕ್ಕೆಯ ದೇಹ ಮತ್ತು ಹಾರಾಟದ ವ್ಯವಸ್ಥೆಯನ್ನು ಮರುಬಳಕೆ ಮಾಡಲಾಗಿದೆ ಎಂದೂ ಬಾಹ್ಯಾಕಾಶ ಸಂಸ್ಥೆ ಮಾಹಿತಿ ನೀಡಿದೆ.
ಇದು ಬಹು ಕಾರ್ಯಾಚರಣೆಗಳಿಗಾಗಿ ವಿಮಾನ ವ್ಯವಸ್ಥೆಯನ್ನು ಮರುಬಳಕೆ ಮಾಡಲು ಇಸ್ರೋದ ವಿನ್ಯಾಸದ ಸಾಮರ್ಥ್ಯದ ದೃಢತೆಯನ್ನು ಪ್ರದರ್ಶಿಸುತ್ತದೆ. ಇಸ್ರೋ ಈಗ ಕಕ್ಷೆಯಲ್ಲಿ ಆರ್‌ಎಲ್‌ವಿ-ಒಆರ್‌ವಿ ಮರುಬಳಕೆ ಮಾಡಬಹುದಾದ ವಾಹನವನ್ನು ಪ್ರಾರಂಭಿಸುವ ಗುರಿ ಹೊಂದಿದೆ ಎಂದು ಇಸ್ರೋ ಹೇಳಿದೆ. (ಐಎಎನ್ಎಸ್)
ಇದನ್ನೂ ಓದಿ:ಜೂನ್ 26ರಿಂದ ಹೊಸ ದೂರಸಂಪರ್ಕ ಕಾಯ್ದೆ ಜಾರಿ: ಏನಿದು ಹೊಸ ಟೆಲಿಕಾಂ ಕಾಯ್ದೆ?, ಏನೆಲ್ಲ ಬದಲಾವಣೆ?