ಕರ್ನಾಟಕ

karnataka

ETV Bharat / state

ಜಾರಕಿಹೊಳಿ, ಹೆಬ್ಬಾಳ್ಕರ್ ಕುಟುಂಬದ ಎರಡನೇ ಕುಡಿಗಳ ರಾಜಕೀಯ ಪ್ರವೇಶಕ್ಕೆ ಸಿದ್ಧವಾಯ್ತಾ ಅಖಾಡ..? - Congress ticket to Mrinal Priyanka

ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರಗಳಿಂದ ಮೃಣಾಲ್​ ಹಾಗೂ ಪ್ರಿಯಾಂಕಾಗೆ ಟಿಕೆಟ್​ ಬಹುತೇಕ ಖಚಿತ ಎನ್ನಲಾಗುತ್ತಿದೆ.

Mrinal and Priyanka
ಮೃಣಾಲ್​ ಹಾಗೂ ಪ್ರಿಯಾಂಕಾ

By ETV Bharat Karnataka Team

Published : Mar 12, 2024, 2:38 PM IST

Updated : Mar 12, 2024, 2:59 PM IST

ಬೆಳಗಾವಿ: ಬೆಳಗಾವಿಯಿಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಮತ್ತು ಚಿಕ್ಕೋಡಿಯಿಂದ ಸಚಿವ ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಬಿಜೆಪಿ ಭದ್ರಕೋಟೆಯನ್ನು ಮಣಿಸಲು ಈ ಇಬ್ಬರು ಘಟಾನುಘಟಿ ನಾಯಕರ ಮಕ್ಕಳೇ ಸೂಕ್ತ ಎಂಬ ನಿರ್ಧಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಬಂದಿದೆ ಎಂಬ ಮಾತು ಕೈ ಪಾಳಯದಲ್ಲಿ ಕೇಳಿ ಬಂದಿದೆ.

ಹೌದು, ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರ ಕಾಂಗ್ರೆಸ್ ಹೈಕಮಾಂಡ್​ಗೆ ದೊಡ್ಡ ಕಗ್ಗಂಟಾಗಿತ್ತು. ಆದರೆ, ಜಿಲ್ಲೆಯ ಇಬ್ಬರು ಪ್ರಭಾವಿ ಸಚಿವರ ಮಕ್ಕಳಾದ ಮೃಣಾಲ್ ಹೆಬ್ಬಾಳ್ಕರ್ ಮತ್ತು ಪ್ರಿಯಾಂಕಾ ಜಾರಕಿಹೊಳಿ ಕಣಕ್ಕಿಳಿಸಿದರೆ ಗೆಲುವು ಸುಲಭ ಆಗಲಿದೆ ಎಂಬುದು ಕಾಂಗ್ರೆಸ್​ ಹೈ ಕಮಾಂಡ್ ಲೆಕ್ಕಾಚಾರವಾಗಿದೆ. ಅದರಲ್ಲೂ ಬೆಳಗಾವಿ ಚುನಾವಣಾ ಉಸ್ತುವಾರಿ ಸತೀಶ ಜಾರಕಿಹೊಳಿ ಹೆಗಲಿಗಿದ್ದರೆ, ಚಿಕ್ಕೋಡಿ ಜವಾಬ್ದಾರಿ ಲಕ್ಷ್ಮಿ ಹೆಬ್ಬಾಳ್ಕರ್​ಗೆ ವಹಿಸಲಾಗಿದೆ. ಇದರಿಂದಾಗಿ ಅನಿವಾರ್ಯವಾಗಿ ಇಬ್ಬರು ಎರಡೂ ಕ್ಷೇತ್ರದಲ್ಲಿ ಕೈ ಅಭ್ಯರ್ಥಿಗಳನ್ನು ಗೆಲ್ಲಿಸಲು ಶಕ್ತಿ ಮೀರಿ ಶ್ರಮಿಸಬೇಕಾಗುತ್ತದೆ.

ಬೆಳಗಾವಿಯಿಂದ ತಮ್ಮ ಆಪ್ತ ಡಾ. ಗಿರೀಶ್​ ಸೋನವಾಲ್ಕರ್​ಗೆ ಟಿಕೆಟ್ ಕೊಡಿಸಲು ಸಚಿವ ಸತೀಶ ಜಾರಕಿಹೊಳಿ ಯತ್ನಿಸಿದ್ದರೆ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಪುತ್ರನ ಸ್ಪರ್ಧೆಗೆ ಇಂಗಿತ ವ್ಯಕ್ತಪಡಿಸಿದ್ದರು. ಚಿಕ್ಕೋಡಿಯಲ್ಲಿ ಕುರುಬ ಸಮುದಾಯದ ಲಕ್ಷ್ಮಣರಾವ್ ಚಿಂಗಳೆಗೆ ಟಿಕೆಟ್ ಕೊಡಿಸಲು ಸತೀಶ ಮುಂದಾಗಿದ್ದರು. ಆದರೆ ಬೆಳಗಾವಿ ಕ್ಷೇತ್ರಕ್ಕೆ ಮೃಣಾಲ್ ಮತ್ತು ಚಿಕ್ಕೋಡಿ ಕ್ಷೇತ್ರಕ್ಕೆ ಪ್ರಿಯಾಂಕಾಗೆ ಟಿಕೆಟ್ ಕೊಟ್ಟರೆ ನೂರಕ್ಕೆ ನೂರು ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂಬ ವಾದವನ್ನು ಅಲ್ಲಿನ ಪ್ರಭಾವಿ ನಾಯಕರು ಮಂಡಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ ಮೊನ್ನೆ ಅಥಣಿಗೆ ಬಂದ ವೇಳೆ ಈ ಕುರಿತು ಸಿದ್ದರಾಮಯ್ಯ ಮತ್ತು ಡಿಕೆಶಿ, ಸತೀಶ್​ ಜಾರಕಿಹೊಳಿ ಜೊತೆಗೆ ಚರ್ಚಿಸಿದ್ದಾರೆ.

ಇಷ್ಟು ದಿನ ತಮ್ಮ ಪುತ್ರಿ ಪ್ರಿಯಾಂಕಾ ಸ್ಪರ್ಧಿಸೋದಿಲ್ಲ ಎನ್ನುತ್ತಾ ಬಂದಿದ್ದ ಸತೀಶ ಜಾರಕಿಹೊಳಿ ಮೊನ್ನೆ ಮಾಧ್ಯಮಗಳ ಜೊತೆಗೆ ಮಾತನಾಡುತ್ತಿದ್ದ ವೇಳೆ ಪ್ರಿಯಾಂಕಾ ಸ್ಪರ್ಧೆ ಬಗ್ಗೆ ಸಿಎಂ ಮತ್ತು ಡಿಸಿಎಂ ನನ್ನ ಜೊತೆ ಮಾತಾಡಿದ್ದು, ಜಿಲ್ಲೆಯ ಶಾಸಕರು ಮತ್ತು ಮುಖಂಡರ ಜೊತೆಗೆ ಮತ್ತೊಮ್ಮೆ ಚರ್ಚಿಸಿ ಅಂತಿಮವಾಗಿ ನಿಮಗೆ ತಿಳಿಸುತ್ತೇವೆ ಅಂತಾ ಹೇಳಿದ್ದೇನೆ ಎಂದಿದ್ದರು.

ಒಟ್ಟಾರೆ ಈ ಬಾರಿಯ ಲೋಕಸಭೆ ಚುನಾವಣೆಯಿಂದಲೇ ಜಾರಕಿಹೊಳಿ ಮತ್ತು ಹೆಬ್ಬಾಳ್ಕರ್ ಕುಟುಂಬಗಳ ಎರಡನೇ ಕುಡಿಗಳ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಿದ್ಧವಾಗಿದ್ದು, ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಅಂತಿಮ‌ ಮುದ್ರೆಯೊಂದೇ ಬಾಕಿಯಿದೆ.

ಇದನ್ನೂ ಓದಿ:ಬೆಳಗಾವಿ ಲೋಕ ಸಮರ: ಮೃಣಾಲ್, ಡಾ. ಸೋನವಾಲ್ಕರ್ ಪೈಕಿ ಯಾರಿಗೆ ಸಿಗುತ್ತೆ ಕಾಂಗ್ರೆಸ್ ಟಿಕೆಟ್?

Last Updated : Mar 12, 2024, 2:59 PM IST

ABOUT THE AUTHOR

...view details