ಕರ್ನಾಟಕ

karnataka

ETV Bharat / state

ಕೆಆರ್​​ಎಸ್​​ನಿಂದ ತಮಿಳುನಾಡಿಗೆ ನೀರು ಬಿಟ್ಟಿಲ್ಲ, ಬೆಂಗಳೂರಿಗಾಗಿ ಹರಿಬಿಡಲಾಗಿದೆ: ನೀರಾವರಿ ಇಲಾಖೆ ಸ್ಪಷ್ಟನೆ

ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸಲು ಕೆಆರ್​ಎಸ್ ಜಲಾಶಯದಿಂದ ನೀರು ಹರಿಬಿಡಲಾಗಿದೆ ಹೊರತು, ತಮಿಳುನಾಡಿಗೆ ನೀರು ಬಿಟ್ಟಿಲ್ಲ ಎಂದು ನೀರಾವರಿ ಇಲಾಖೆ ಸ್ಪಷ್ಟೀಕರಣ ನೀಡಿದೆ.

irrigation-department-clarification-on-krs-water-release
ಕೆಆರ್​​ಎಸ್​​ನಿಂದ ತಮಿಳುನಾಡಿಗೆ ನೀರು ಹರಿಸಿಲ್ಲ, ಬೆಂಗಳೂರಿಗಾಗಿ ಹರಿಬಿಡಲಾಗಿದೆ: ನೀರಾವರಿ ಇಲಾಖೆ

By ETV Bharat Karnataka Team

Published : Mar 11, 2024, 7:32 AM IST

ಬೆಂಗಳೂರು:ಕೃಷ್ಣರಾಜಸಾಗರ (ಕೆಆರ್​​ಎಸ್) ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಿಲ್ಲ. ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಪೂರೈಕೆಗಾಗಿ ಹರಿಸಲಾಗಿದೆ ಎಂದು ನೀರಾವರಿ ಇಲಾಖೆ ಸ್ಪಷ್ಟೀಕರಣ ನೀಡಿದೆ.

ಬೆಂಗಳೂರಿಗೆ ನೀರಿನ ಬರ ಇದ್ದರೂ ತಮಿಳುನಾಡಿಗೆ‌ ಕಾವೇರಿ ನೀರು ಹರಿಸಲಾಗುತ್ತಿದೆ ಎಂದು ಪ್ರತಿಪಕ್ಷಗಳ ಆರೋಪ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆ ಪ್ರತಿಕಾ ಪ್ರಕಟಣೆ ಹೊರಡಿಸಿದೆ. ''ಇಲಾಖೆಯ ಮೈಸೂರು ವಿಭಾಗ ಹಾಗೂ ಬೆಂಗಳೂರು ನಗರಕ್ಕೆ ಕುಡಿಯಲು ನೀರು ಸರಬರಾಜು ಮಾಡುವ ಉದ್ದೇಶಕ್ಕಾಗಿ ಮಳವಳ್ಳಿ ತಾಲೂಕಿನ ಶಿವಾ ಅಣೆಕಟ್ಟೆಯನ್ನು ಉಪಯೋಗಿಸಲಾಗುತ್ತಿದೆ. ಕಾವೇರಿ ನದಿಯಿಂದ ಬೆಂಗಳೂರು, ಮೈಸೂರು ಮತ್ತು ಇತರೆ ಪಟ್ಟಣ ಹಾಗೂ ಗ್ರಾಮಗಳಿಗೆ ಕುಡಿಯಲು ಹಾಗೂ ಕೈಗಾರಿಕೆಗಳಿಗೆ ಸರಬರಾಜು ಮಾಡಲು ಪ್ರತಿದಿನ ಒಟ್ಟಾರೆ 1000 ಕ್ಯೂಸೆಕ್​ನಷ್ಟು ನೀರಿನ ಅಗತ್ಯತೆ ಇದೆ'' ಎಂದು ನೀರಾವರಿ ಇಲಾಖೆ ತಿಳಿಸಿದೆ.

ಬೆಂಗಳೂರು ಜಲ ಮಂಡಳಿ (ಬಿಡಬ್ಲ್ಯೂಎಸ್​​ಎಸ್​​ಬಿ) ನೀಡಿರುವ ಮಾಹಿತಿಯಂತೆ ಮಳವಳ್ಳಿ ತಾಲೂಕಿನ ಶಿವಾ ಅಣೆಕಟ್ಟೆ ಬಳಿಯಿಂದ ನೀರನ್ನು ತೊರೆಕಾಡನಹಳ್ಳಿವರೆಗೆ ಹರಿಸಿ, ತೊರೆಕಾಡನಹಳ್ಳಿಯಲ್ಲಿ ಸ್ಥಾಪಿಸಿರುವ ಜಲಸ್ಥಾವರ ಮುಖಾಂತರ ಸುಮಾರು 1470 ಎಂಎಲ್​ಡಿ (600 ಕ್ಯೂಸೆಕ್​ನಷ್ಟು) ನೀರನ್ನು ಬೆಂಗಳೂರಿಗೆ ಸರಬರಾಜು ಮಾಡಲಾಗುತ್ತಿದೆ. ಮಾರ್ಚ್​ 6ರಿಂದ 8ವರೆಗೆ ಶಿವಾ ಅಣೆಕಟ್ಟಿನಲ್ಲಿನ ನೀರಿನ ಮಟ್ಟವು ದಿನದಿಂದ ದಿನಕ್ಕೆ ಗಣನೀಯವಾಗಿ ಕಡಿಮೆಯಾಗಿ ಅಣೆಕಟ್ಟೆಯ ಮೇಲ್ಭಾಗದಿಂದ 36 ಇಂಚಿನಷ್ಟು ಕೆಳಮಟ್ಟ ತಲುಪಿದೆ. ಇದರಿಂದ, ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಪ್ರಮಾಣವನ್ನು ಸರಬರಾಜು ಮಾಡಲು ವ್ಯತ್ಯಯವಾಗಿದೆ ಎಂದಿದೆ.

ಮಾರ್ಚ್​ 9ರಂದು ಬೆಂಗಳೂರು ಜಲ ಮಂಡಳಿ ಅಧಿಕಾರಿಗಳು ಕೆಆರ್​​ಎಸ್ ಜಲಾಶಯಕ್ಕೆ ಭೇಟಿ ನೀಡಿ, ನೀರಿನ ಹರಿವಿನ ಪ್ರಮಾಣವನ್ನು ಹೆಚ್ಚಿಸಲು ಕೋರಿದ್ದಾರೆ. ಅದರಂತೆ ಕೆಆರ್​​ಎಸ್ ಜಲಾಶಯದಿಂದ ಹಂತ ಹಂತವಾಗಿ ನೀರನ್ನು ಏರಿಕೆ ಮಾಡಿ, ಸುಮಾರು 4780 ಕ್ಯೂಸೆಕ್​ಗಳಷ್ಟು ನೀರನ್ನು ಹರಿಬಿಡಲಾಗಿದೆ. ನಂತರ, ಕೆಆರ್​ಎಸ್ ಡ್ಯಾಂನಿಂದ ಕಾವೇರಿ ಪಾತ್ರದುದ್ದಕ್ಕೂ ಬೆಂಗಳೂರು ಜಲ ಮಂಡಳಿ ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ಇಲಾಖೆ ವಿವರಿಸಿದೆ.

ಇದನ್ನೂ ಓದಿ: ನೀರು ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಾಗಿಲ್ಲ, ಜನರು ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು: ಜಲಮಂಡಳಿ ಅಧ್ಯಕ್ಷ

ಸಿ.ಡಿ.ಎಸ್. ಅಣೆಕಟ್ಟು, ರಾಮಸ್ವಾಮಿ ಆಣೆಕಟ್ಟು, ಮಾಧವಮಂತ್ರಿ ಅಣೆಕಟ್ಟು, ಮೇದಿನಿ ಅಣೆಕಟ್ಟು, ಸತ್ತೇಗಾಲ ಬಳಿಯಿರುವ ಅಣೆಕಟ್ಟು ಹಾಗೂ ಶಿವಾ ಅಣೆಕಟ್ಟುಗಳನ್ನು ಪರಿವೀಕ್ಷಣೆ ಮಾಡಲಾಗಿದೆ. ಅದರಂತೆ, ಸತ್ತೇಗಾಲ ಅಣೆಕಟ್ಟು ಹಾಗೂ ಶಿವಾ ಅಣೆಕಟ್ಟುಗಳಲ್ಲಿ ನೀರಿನ ಮಟ್ಟವು ತಳಮಟ್ಟ ತಲುಪಿದ್ದು, ತೀವ್ರ ಕೊರತೆ ಉಂಟಾಗಿದೆ. ಮಾರ್ಚ್​​ 9ರಂದು ಕೆಆರ್​ಎಸ್​​ನಿಂದ 4780 ಕ್ಯೂಸೆಕ್​​ ಹಾಗೂ ಕಬಿನಿ ಜಲಾಶಯದಿಂದ 2000 ಕ್ಯೂಸೆಕ್​​ ನೀರನ್ನು ಹರಿಸಿದ್ದರ ಪರಿಣಾಮ ಮಾರ್ಚ್​​ 10ರ ಬೆಳಗ್ಗೆ ಶಿವಾ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಅಣೆಕಟ್ಟೆಯ ಮೇಲ್ಭಾಗದಿಂದ 38 ಇಂಚು ಕೆಳಮಟ್ಟದಿಂದ 24 ಇಂಚಿಗೆ ತಲುಪಿದ್ದು (16 ಇಂಚು ಏರಿಕೆ) ನಿಧಾನವಾಗಿ ಏರಿಕೆಯಾಗಿದೆ ಎಂದಿದೆ.

ಮಾರ್ಚ್​​ 10ರ ಬೆಳಗ್ಗೆ 10 ಗಂಟೆಗೆ ಕೆಆರ್​​ಎಸ್​ನ ನೀರಿನ ಹರಿವಿನ ಪ್ರಮಾಣವನ್ನು 4780 ಕ್ಯೂಸೆಕ್​ನಿಂದ 2769 ಕ್ಯೂಸೆಕ್​ಗೆ ಇಳಿಕೆ ಮಾಡಲಾಗಿದೆ. ಶಿವಾ ಅಣೆಕಟ್ಟೆಯ ನೀರಿನ ಮಟ್ಟವು ಮಧ್ಯಾಹ್ನ 12 ಗಂಟೆಗೆ 2 ಇಂಚು ಏರಿಕೆಯಾದ್ದರಿಂದ ಕೆಆರ್​ಎಸ್​​ನ ನೀರಿನ ಹರಿವಿನ ಪ್ರಮಾಣವನ್ನು 2769 ಕ್ಯೂಸೆಕ್​​ನಿಂದ 1008 ಕ್ಯೂಸೆಕ್​​ಗೆ ಇಳಿಕೆ ಮಾಡಲಾಗಿದೆ. ಮಾರ್ಚ್​ 10ರ ಸಂಜೆ 6.00 ಗಂಟೆಗೆ ಶಿವಾ ಅಣೆಕಟ್ಟೆಯ ನೀರಿನಮಟ್ಟ ಅಣೆಕಟ್ಟೆಯ ಮೇಲ್ಭಾಗದಿಂದ 18 ಇಂಚು ಕೆಳಗಡೆಯಿದ್ದು, ಹಿಂದಿನ ದಿನದ (ಮಾರ್ಚ್​ 9) 36 ಇಂಚು ಕೆಳಮಟಕ್ಕೆ ಹೋಲಿಸಿದರೆ, ಒಟ್ಟಾರೆ 18 ಇಂಚಿನಷ್ಟು ಏರಿಕೆಯಾಗಿದೆ. ಪ್ರಸ್ತುತ, ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಪ್ರಮಾಣವನ್ನು ಸುಸ್ಥಿರಗೊಳಿಸಲಾಗುತ್ತಿದೆ. ಹೀಗಾಗಿ, ಕೆಆರ್​ಎಸ್ ಜಲಾಶಯದಿಂದ 4,000 ಕ್ಯೂಸೆಕ್​ಗೂ ಹೆಚ್ಚು ನೀರನ್ನು ತಮಿಳುನಾಡಿಗೆ ಹರಿಸಿಲ್ಲ. ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಪೂರೈಕೆಗಾಗಿ ಹರಿಬಿಡಲಾಗಿದೆ ಎಂದು ನೀರಾವರಿ ಇಲಾಖೆ ಸ್ಪಷ್ಟೀಕರಣ ನೀಡಿದೆ.

ಇದನ್ನೂ ಓದಿ:ಬೆಂಗಳೂರು ಜಲ ಸಮಸ್ಯೆ‌ ನಿವಾರಣೆಗೆ ಫೀಲ್ಡಿಗಿಳಿದ BWSSB ಅಧ್ಯಕ್ಷ; ಕೈಗಾರಿಕೆಗಳಿಗೆ ಶುದ್ಧೀಕರಿಸಿದ ನೀರು ಪೂರೈಕೆ

ABOUT THE AUTHOR

...view details