ಬೆಂಗಳೂರು: ಹುಣಸೆ ಹಣ್ಣಿನ ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರು ಬರುತ್ತದೆ. ಪ್ರತಿಯೊಂದು ಅಡುಗೆ ಮನೆಯಲ್ಲೂ ಆಹಾರವಾಗಿ ಬಳಸುವ ಹುಣಸೆ ಹಣ್ಣು ಎಲ್ಲರಿಗೂ ಇಷ್ಟವಾದ ಪದಾರ್ಥ. ಇದೊಂದು ಸಿಹಿ ಹುಳಿ ಮಿಶ್ರಿತ ಹಣ್ಣು. ಟಾರ್ಟಾರಿಕ್ ಆಮ್ಲದಿಂದಾಗಿ ಇದು ಹೆಚ್ಚಿನ ರುಚಿಯನ್ನೂ ಕೊಡುತ್ತದೆ.
ಇದರಲ್ಲಿರುವ ಜೀವಸತ್ವ ಸಿ, ಇ, ಬಿ ಖನಿಜಾಂಶಗಳಾದ ಕಬ್ಬಿಣ, ಮೆಗ್ನೀಷಿಯಂ, ರಂಜಕ, ಪೊಟ್ಯಾಷಿಯಂ ಅಂಶಗಳಿಂದ ಆರೋಗ್ಯದ ದೃಷ್ಟಿಯಲ್ಲೂ ಹುಣಸೆ ಹಣ್ಣು ಮಹತ್ವ ಪಡೆದಿದೆ. ಹುಣಸೆ ಹಣ್ಣು ಉತ್ತಮ ಆ್ಯಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿರುವುದರಿಂದ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಹುಣಸೆ ಹಣ್ಣಿನಿಂದ ತಯಾರು ಮಾಡಿರುವ ಆರೋಗ್ಯಕ್ಕೆ ಬಹು ಉಪಯುಕ್ತವಾದ 'ಅಸಲಿ ಚಿಗಳಿ' ಬಗ್ಗೆ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಅಂತಾರಾಷ್ಟ್ರಿಯ ವಾಣಿಜ್ಯ, ಸಾವಯವ ಮತ್ತು ಸಿರಿಧಾನ್ಯ ಮೇಳದಲ್ಲಿ ಸಿಕ್ಕಿದ ಮಾಹಿತಿ ಇದು.
ಹುಣಸೆ ಹಣ್ಣಿನ ವಿಸ್ಮಯಕಾರಿ ಗುಣಗಳು: ಬಾಯಲ್ಲಿ ರುಚಿ, ಆರೋಗ್ಯ ಶುಚಿ ಈ ಚಿಗಳಿ. ಪಚನ ಕ್ರಿಯೆಯನ್ನು ಹಾಗೂ ಹಸಿವನ್ನು ವೃದ್ಧಿಸುತ್ತದೆ. ಮಲಬದ್ಧತೆಯಲ್ಲಿ ಪರಿಣಾಮಕಾರಿ ಕೆಲಸ ಮಾಡುತ್ತದೆ. ರೋಗ ನಿರೋಧಕ ವ್ಯವಸ್ಥೆ ವೃದ್ಧಿಸುವುದರ ಜೊತೆಗೆ ಬೊಜ್ಜು ಕರಗಿಸುವಲ್ಲಿ ಸಹಾಯವಾಗುತ್ತದೆ. ತೂಕ ಕಡಿಮೆ ಮಾಡುವುದರಲ್ಲಿ, ಮೊಡವೆ ನಿಯಂತ್ರಿಸುವಲ್ಲಿ, ತ್ವಚೆಯ ಕಾಂತಿವೃದ್ಧಿಯಲ್ಲಿ, ಕೂದಲು ಉದುರುವಿಕೆ ಮತ್ತು ಬಿಳಿಯಾಗುವಿಕೆಯನ್ನು ನಿಯಂತ್ರಿಸುವಲ್ಲಿ ಇದು ಸಹಕಾರಿಯಾಗಿದೆ. ಗರ್ಭಾವಸ್ಥೆಯಲ್ಲಿನ ವಾಕರಿಕೆ ಮತ್ತು ವಾಂತಿ ಕಡಿಮೆ ಮಾಡುತ್ತದೆ. ಸಂಧಿವಾತ ಅಥವಾ ಕೀಲು ನೋವು, ಕೆಮ್ಮು, ನೆಗಡಿ ಮುಂತಾದ ಕಫವಾತಜನ್ಯ ವಿಕಾರಗಳಲ್ಲಿ ಪರಿಣಾಮಕಾರಿಯಾಗಿದೆ. ಮೂತ್ರಕೋಶದ ಕಾಯಿಲೆ, ಹೊಟ್ಟೆ ನೋವು, ರಕ್ತಶುದ್ಧಿ, ಲಿವರ್ ರಕ್ಷಣೆ ಮತ್ತು ಕಾಮಾಲೆಯಲ್ಲಿ ಚಿಗಳಿ ಸಹಕರಿಸುತ್ತದೆ.