ಕರ್ನಾಟಕ

karnataka

ETV Bharat / state

ಮಂಗಳೂರು: ತಣ್ಣೀರು ಬಾವಿ ಬೀಚ್‌ನಲ್ಲಿ ದೇಶ-ವಿದೇಶಗಳ ಗಾಳಿಪಟಗಳ ರಂಗು - Kite Festival

ಮಂಗಳೂರಿನ ತಣ್ಣೀರು ಬಾವಿ ಕಡಲ ಕಿನಾರೆಯಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಲಾಗಿದೆ.

ಗಾಳಿಪಟ ಉತ್ಸವ
ಗಾಳಿಪಟ ಉತ್ಸವ

By ETV Bharat Karnataka Team

Published : Feb 11, 2024, 8:33 AM IST

ಅಂತರಾಷ್ಟ್ರೀಯ ಗಾಳಿಪಟ ಉತ್ಸವ

ಮಂಗಳೂರು(ದಕ್ಷಿಣ ಕನ್ನಡ): ಟೀಮ್ ಮಂಗಳೂರು ತಂಡದ ಆಶ್ರಯದಲ್ಲಿ ತಣ್ಣೀರು ಬಾವಿ ಕಡಲ ಕಿನಾರೆಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯುತ್ತಿದೆ. ಶನಿವಾರ ಸಾವಿರಾರು ಗಾಳಿಪಟಗಳು ಬಾನಂಗಳದಲ್ಲಿ ಹಾರಾಡಿದವು. ಫೆ.10 ಮತ್ತು 11ರಂದು ಎರಡು ದಿನಗಳ ಕಾಲ ಅಪರಾಹ್ನ 3ರಿಂದ 7ರವರೆಗೆ ಗಾಳಿಪಟ ಹಾರಾಟ ಮತ್ತು ಪ್ರದರ್ಶನ ನಡೆಯುತ್ತಿದೆ.

ವಿದ್ಯುತ್ ದೀಪಗಳ ಬಣ್ಣಗಳ ಬೆಳಕಿನಲ್ಲಿಯೂ ಗಾಳಿಪಟ ಹಾರಾಟಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. 'ಒಂದೇ ಆಕಾಶ, ಒಂದೇ ಭೂಮಿ, ಒಂದೇ ಕುಟುಂಬ' ಎಂಬ ಧ್ಯೇಯವಾಕ್ಯದಲ್ಲಿ ಸಾಮರಸ್ಯ, ಐಕ್ಯ ಭಾವಗಳಿಂದ ಗಾಳಿಪಟೋತ್ಸವ ನಡೆಯುತ್ತಿದೆ. 1,000ಕ್ಕೂ ಅಧಿಕ ವಿವಿಧ ವಿನ್ಯಾಸ, ಗಾತ್ರಗಳಿಂದ ಕೂಡಿದ ಗಾಳಿಪಟಗಳು ಹಾರಾಡಿವೆ. ಎಂಆರ್​ಪಿಎಲ್‌-ಒಎನ್‌ಜಿಸಿ ಸಂಸ್ಥೆಯ ಪ್ರಾಯೋಜಕತ್ವ ಹಾಗೂ ದ.ಕ ಜಿಲ್ಲಾಡಳಿತ ಪ್ರವಾಸೋದ್ಯಮ ಇಲಾಖೆಯ ಸಹಕಾರದಲ್ಲಿ ಉತ್ಸವ ನಡೆಯುತ್ತಿದೆ.

ಗಾಳಿಪಟ ಉತ್ಸವದಲ್ಲಿ ಟೀಮ್ ಮಂಗಳೂರು ತಂಡದ ಸಾಂಪ್ರದಾಯಿಕ ಗಾಳಿಪಟಗಳಾದ ಕಥಕ್ಕಲಿ, ಯಕ್ಷಗಾನ, ಭೂತಕೋಲಗಳೊಂದಿಗೆ ದೇಶ-ವಿದೇಶಗಳ ಅಧುನಿಕ ಶೈಲಿ ಹಾಗೂ ವಿನ್ಯಾಸದಿಂದ ಕೂಡಿದ ಅಮೀಬಾ, ಬೆಕ್ಕು, ಹಲ್ಲಿ, ಚಿರತೆ, ಹುಲಿ, ಕಥಕ್ಕಲಿ, ಬಟರ್ ಪ್ಲೈ ಟ್ರೈನ್
ಏರೋಪಾಯಿಲ್‌ ಗಾಳಿಪಟಗಳು ಹಾರಾಡಿದವು.

ಗಾಳಿಪಟ ಉತ್ಸವ ವೀಕ್ಷಿಸಲು ಬರುವವರಿಗೆ ಕೆಐಒಸಿಎಲ್ ಬಳಿಯಿಂದ ತಣ್ಣೀರುಬಾವಿ ಬೀಚ್‌ಗೆ ಆರು ಬಸ್ ಸೌಲಭ್ಯಗಳನ್ನು, ಸುಲ್ತಾನ್ ಬತ್ತೇರಿಯಿಂದ ದೋಣಿಯಲ್ಲಿ ಬರುವವರಿಗೂ ರಾತ್ರಿ 10ರವರೆಗೆ ದೋಣಿ ವ್ಯವಸ್ಥೆ ಮತ್ತು ಗಾಳಿಪಟ ಖರೀದಿಸುವರಿಗೆ ಕೈಟ್ ಮಳಿಗೆಗಳ ವ್ಯವಸ್ಥೆ ಮಾಡಲಾಗಿತ್ತು.

ಮಲೇಶ್ಯಾದ ಲಿಯನ್ನವತಿ ಲೆ:ಕಳೆದ 30 ವರ್ಷಗಳಿಂದ ಅಂತಾರಾಷ್ಟ್ರೀಯ ಮಟ್ಟದ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸುತ್ತಿರುವ ಮಲೇಶ್ಯಾದ 65 ವರ್ಷ ವಯಸ್ಸಿನ ಲಿಯನ್ನವತಿ ಲೆ ಮಂಗಳೂರಿಗೆ ಎರಡನೇ ಬಾರಿಗೆ ಆಗಮಿಸಿದ್ದಾರೆ. ಈ ಹಿಂದೆ ಇಲ್ಲಿ ನಡೆದ ಉತ್ಸವದಲ್ಲಿ ಇವರು ಬೃಹತ್ ಹನುಮಂತ ಗಾಳಿಪಟಗಳನ್ನು ಹಾರಿಸಿದ್ದರು. ಈ ಬಾರಿ ಫೆರ್ರಿ ಥಿಂಕರ್ ಬೆಲ್ ಗಾಳಿಪಟ ತಂದಿದ್ದಾರೆ. ಲಿಯನ್ನವತಿ, ಬೃಹತ್ ಗಾಳಿಪಟಗಳ ರಫ್ತುದಾರರಾಗಿಯೂ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಜೋಡಿಯನ್ನು ಒಂದಾಗಿಸಿದ ಗಾಳಿಪಟ ಉತ್ಸವ:ಉಕ್ರೇನ್‌ ಯುವಕ ಒಲೆ ಶ್ರಮ್ಮೊ ಹಾಗೂ ಥಾಯ್ಲೆಂಡ್‌ನ ಯುವತಿ ನೀ ಎಂಬಿಬ್ಬರನ್ನು ನಾಲ್ಕು ವರ್ಷಗಳ ಹಿಂದೆ ನಡೆದ ಗಾಳಿಪಟ ಉತ್ಸವ ಪರಸ್ಪರ ಜೋಡಿಯನ್ನಾಗಿಸಿದೆ. ಇವರು ಕಳೆದ 8 ವರ್ಷಗಳಿಂದ ಪರಿಚಿತರು. ಇದೀಗ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಗಳು ಎಲ್ಲೇ ನಡೆದರೂ ಅಲ್ಲಿ ಇವರು ಭಾಗವಹಿಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಥಾಯ್ಲೆಂಡ್‌ನ ಪಲವಾನ್ ಸುಕನ್‌ಲಯ, ಗ್ರೀಸ್‌ನ ಕೊನ್‌ಸ್ಟಂಟಿನ್ ರಾಟ್‌ಸ್, ಎಸ್ಟೋನಿಯಾದ ಆ್ಯಂಡ್ರಿಸ್ ಸೊಕ್, ಲಿಯಾ ರಿಡಲಿ, ಸ್ವೀಡನ್‌ ಆ್ಯಂಡ್ರೆಸ್ ಅಗ್ರೆನ್, ಇಂಡೋನೇಶ್ಯಾದ ಸರಿ ಸಬ್ಬಾ ಭಕ್ತಿ ಮದ್‌ಝಿದ್, ಟಿಂಟಾನ್ ಪ್ರಿಯಾಂಗೊರೊ, ವೆನಾಸ್ ಒಂಗೊವಿನೊಟೊ, ಮಲೇಶ್ಯಾದ ಮುಹಮ್ಮದ್ ಫಸ್ಟೀಲ್ ಬಿನ್ ಅಲಿ, ವಾನ್ ಅಹ್ಮದ್ ಅಳ್ಳವಿ ಬಿನ್ ವನ್ ಹುಸೇನ್ ಅವರನ್ನೊಳಗೊಂಡ ತಂಡಗಳು ಭಾಗವಹಿಸಿವೆ.

ಏಕದಾರದಲ್ಲಿ ಹಾರಿದ 101 ಬಟರ್ ಫ್ಲೈಗಳು:ಮುಂಬೈನ ಗೋಲ್ಡನ್ ಕೈಟ್ ಕ್ಲಬ್‌ ಸದಸ್ಯ, ಅಂತಾರಾಷ್ಟ್ರೀಯವಾಗಿ ಗಾಳಿಪಟ ಹಾರಾಟಗಾರ ಮಾತ್ರವಲ್ಲದೆ ವಿಶೇಷವಾಗಿ ಫೈಟರ್ ಕೈಟ್ ನಿಪುಣ ಎಂದೇ ಖ್ಯಾತಿ ಪಡೆದಿರುವ ಅಬ್ದುಲ್ ರವೂಫ್ ಈ ಬಾರಿ ಮಂಗಳೂರಿನ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಭಾಗವಹಿಸಿದ್ದಾರೆ.

74ರ ಹರೆಯದ ಅಬ್ದುಲ್ ರವೂಫ್ ಟ್ರೇನ್ ಕೈಟ್ (ಒಂದೇ ದಾರದಲ್ಲಿ ಪೋಣಿಸಲ್ಪಟ್ಟ ಹಲವು ಗಾಳಿಪಟಗಳು) ಹಾರಾಟದಲ್ಲಿ ಚಾಣಾಕ್ಷ. ರೈಲು ಬೋಗಿಯಂತೆ ಒಂದರ ಹಿಂದೆ ಒಂದು ಗಾಳಿಪಟಗಳು ಬಾನಂಗಳದಲ್ಲಿ ಹಾರಾಡುವ ಈ ಟ್ರೇನ್ ಕೈಟ್ ನೋಡುವುದಕ್ಕೆ ಅತ್ಯಾಕರ್ಷಕ. ಇಂತಹ ಟ್ರೇನ್ ಗಾಳಿಪಟಗಳ ತಯಾರಕರೂ ಆಗಿರುವ ರವೂಫ್ ಕಳೆದ ಸುಮಾರು 28 ವರ್ಷಗಳಿಂದ ಯುರೋಪಿನಾದ್ಯಂತ ನಡೆಯುವ ಗಾಳಿಪಟ ಉತ್ಸವಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಇವರು ಮಂಗಳೂರಿನಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ 101 ಚಿಟ್ಟೆಗಳನ್ನು (ಬಟರ್‌ಪ್ಲೈ) ಒಳಗೊಂಡ ಟ್ರೇನ್ ಕೈಟ್‌ನ ಜತೆಗೆ, 70 ಬ್ಯಾಟ್‌ ಮ್ಯಾನ್‌ಗಳು ಹಾಗೂ 35 ಸ್ಟಾರ್‌ಗಳಿಂದ ಕೂಡಿದ ಟ್ರೇನ್ ಕೈಟ್‌ಗಳು ಹಾರಾಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಟೀಮ್ ಮಂಗಳೂರಿನ ಸರ್ವೇಶ್, "ಮಂಗಳೂರಿನಲ್ಲಿ ಏಳನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಲಾಗಿದೆ. ತಣ್ಣೀರುಬಾವಿ ಬೀಚ್​ನಲ್ಲಿ ಗಾಳಿಯ ಒತ್ತಡ ಒಂದೇ ರೀತಿ ಇರುವುದರಿಂದ ಎಲ್ಲಾ ರೀತಿಯ ಗಾಳಿಪಟಗಳು ಇಲ್ಲಿ ಹಾರಾಡುತ್ತವೆ. 8 ದೇಶಗಳ 13 ಗಾಳಿಪಟ ತಂಡಗಳು ಮತ್ತು ನಮ್ಮ ದೇಶದ 5 ರಾಜ್ಯದ ತಂಡಗಳು ಉತ್ಸವದಲ್ಲಿ‌ ಭಾಗವಹಿಸಿದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ:ವಾಣಿಜ್ಯ ನಗರಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ: ಕಣ್ಮನ ಸೆಳೆದ ಬಗೆ ಬಗೆಯ ಗಾಳಿಪಟಗಳು

ABOUT THE AUTHOR

...view details