ಕರ್ನಾಟಕ

karnataka

ETV Bharat / state

ಕರ್ನಾಟಕದ ಕರಾವಳಿಯಲ್ಲಿ 5 ಬ್ಯಾಂಕ್​ಗಳ ಸ್ಥಾಪನೆ; ಈಗ ಉಳಿದಿರುವುದು ಕೇವಲ 2 ಮಾತ್ರ - INTERNATIONAL BANK DAY

ಅಂತಾರಾಷ್ಟ್ರೀಯ ಬ್ಯಾಂಕ್​ ದಿನಾಚರಣೆಯ ಹಿನ್ನೆಲೆಯಲ್ಲಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾಂಕ್​ಗಳ ಕುರಿತು 'ಈಟಿವಿ ಭಾರತ' ಪ್ರತಿನಿಧಿ ವಿನೋದ್ ಪುದು ವಿಶೇಷ ವರದಿ.

Logos of Banks
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭವಾದ ಬ್ಯಾಂಕ್​ಗಳ ಲೋಗೋಗಳು (ETV Bhara)

By ETV Bharat Karnataka Team

Published : Dec 4, 2024, 5:36 PM IST

Updated : Dec 4, 2024, 6:13 PM IST

ಮಂಗಳೂರು:ಇಂದು ಅಂತಾರಾಷ್ಟ್ರೀಯ ಬ್ಯಾಂಕ್ ದಿನ. ಆರ್ಥಿಕ ಅಭಿವೃದ್ಧಿ, ಶ್ರೇಯಸ್ಸಿಗೆ ಆಧಾರವಾದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಗೌರವಿಸುವ ದಿನ. ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ (ಅವಿಭಜಿತ ದಕ್ಷಿಣ ಕನ್ನಡ) ಜಿಲ್ಲೆಗಳು ಬ್ಯಾಂಕಿಂಗ್​ ಕ್ಷೇತ್ರದಲ್ಲಿ ರಾಷ್ಟ್ರಕ್ಕೆ ಅಪಾರ ಕೊಡುಗೆ ನೀಡಿವೆ. ಇಲ್ಲಿಂದ ಆರಂಭವಾಗಿದ್ದ ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ವಿಜಯಾ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್ ಮತ್ತು ಖಾಸಗಿ ವಲಯದ ಕರ್ಣಾಟಕ ಬ್ಯಾಂಕ್ ಪ್ರಮುಖ ಬ್ಯಾಂಕುಗಳಾಗಿ ಗುರುತಿಸಿಕೊಂಡಿವೆ.

1906ರಿಂದಲೂ ದಕ್ಷಿಣ ಕನ್ನಡ ಜಿಲ್ಲೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಾ ಬರುತ್ತಿದೆ. ಕೆನರಾ ಬ್ಯಾಂಕ್ 1906‌ರಲ್ಲಿ ಆರಂಭವಾಗಿತ್ತು. ಕೆನರಾ ಪ್ರಥಮವಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ಯಾಂಕ್ ಆರಂಭಿಸಿತ್ತು. 1906ರಲ್ಲಿ ಕಾರ್ಪೋರೇಷನ್ ಬ್ಯಾಂಕ್ ಕೂಡ ಕಾರ್ಯಾಚರಣೆ ಆರಂಭಿಸಿತ್ತು. 1925ರಲ್ಲಿ ಸಿಂಡಿಕೇಟ್ ಬ್ಯಾಂಕ್ ಆರಂಭವಾಗಿತ್ತು. 'ಡೈಲಿ ಡಿಪಾಸಿಟ್ ಸ್ಕೀಮ್' (ಪಿಗ್ಮಿ ಸಂಗ್ರಹಿಸಿ) ಎಂಬ ವಿನೂತನ ಯೋಜನೆಯ ಮೂಲಕ ಬಡವರಿಗೆ ಬ್ಯಾಂಕ್ ಮೆಟ್ಟಿಲೇರಲು ಅನುಕೂಲ ಮಾಡಿಕೊಟ್ಟಿತು. ಇದು ಕೃಷಿಕರಿಗೆ ಆರ್ಥಿಕ ನೆರವು ಒದಗಿಸುವಲ್ಲಿ ಮುಂಚೂಣಿಯಲ್ಲಿತ್ತು. ವಿಜಯಾ ಬ್ಯಾಂಕ್ 1931ರಲ್ಲಿ ಆರಂಭವಾಗಿ ವ್ಯಾಪಾರ ಮತ್ತು ಸಮುದಾಯದ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಿದವು. ಇನ್ನು 1924ರಲ್ಲಿ ಆರಂಭವಾದ ಕರ್ಣಾಟಕ ಬ್ಯಾಂಕ್ ಖಾಸಗಿ ವಲಯದಲ್ಲಿ ಅತ್ಯುತ್ತಮ ಸೇವೆಗಳನ್ನು ಒದಗಿಸುತ್ತಿದ್ದು, ದೇಶದ ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾಗಿದೆ.

ಎಐಬಿಇಎ ಮಾಜಿ ರಾಜ್ಯ ಉಪಾಧ್ಯಕ್ಷ ಹೆಚ್.ವಿ.ರಾವ್ (ETV Bharat)

ವಿಲೀನದ ಬಳಿಕ ಉಳಿದಿರುವುದು ಕೇವಲ 2 ಬ್ಯಾಂಕ್:ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ನಾಲ್ಕು ರಾಷ್ಟ್ರೀಕೃತ ಮತ್ತು ಒಂದು ಖಾಸಗಿ ರಂಗದ ಬ್ಯಾಂಕ್​ಗಳು ಆರಂಭವಾದರೂ ಇದೀಗ ಒಂದು ರಾಷ್ಟ್ರೀಕೃತ ಮತ್ತು ಒಂದು ಖಾಸಗಿ ಬ್ಯಾಂಕ್ ಮಾತ್ರ ಉಳಿದಿದೆ. ಬ್ಯಾಂಕ್ ಆಫ್​ ಬರೋಡಾದೊಂದಿಗೆ ವಿಜಯ ಬ್ಯಾಂಕ್, ಕೆನರಾ ಬ್ಯಾಂಕ್​ನೊಂದಿಗೆ ಸಿಂಡಿಕೇಟ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಜೊತೆ ಕಾರ್ಪೋರೇಷನ್ ಬ್ಯಾಂಕ್ ವಿಲೀನವಾಗಿದೆ. ಇದರ ಪರಿಣಾಮ, ಇದೀಗ ಕೆನರಾ ಬ್ಯಾಂಕ್ ಮತ್ತು ಕರ್ಣಾಟಕ ಬ್ಯಾಂಕ್ ಮಾತ್ರ ಉಳಿದುಕೊಂಡಿದೆ.

ಎಐಬಿಇಎ (ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯಿಸ್ ಅಸೋಸಿಯೇಶನ್)ನ ಮಾಜಿ ರಾಜ್ಯ ಉಪಾಧ್ಯಕ್ಷ ಹೆಚ್.ವಿ.ರಾವ್, ದಕ್ಷಿಣ ಕನ್ನಡ ಮತ್ತು ಉಡುಪಿಯ ಬ್ಯಾಂಕಿಂಗ್ ಕ್ಷೇತ್ರದ ಇತಿಹಾಸ ಮತ್ತು ಪ್ರಸ್ತುತ ಸ್ಥಿತಿಯ ಕುರಿತು ತೀವ್ರವಾಗಿ ಮಾತನಾಡಿ, "ಇತ್ತೀಚಿನ ದಿನಗಳಲ್ಲಿ ಹಲವಾರು ಶಾಖೆಗಳು ಮುಚ್ಚಲ್ಪಟ್ಟಿದ್ದು, ಬ್ಯಾಂಕ್ ಉದ್ಯೋಗಾವಕಾಶಗಳು ಕಡಿಮೆಯಾಗಿವೆ. ಸಿಂಡಿಕೇಟ್ ಬ್ಯಾಂಕ್​ನ ಹಂಪನಕಟ್ಟಾ ಶಾಖೆಯೊಂದರಲ್ಲೇ ಹಿಂದೊಮ್ಮೆ 120 ನೌಕರರಿದ್ದರು. ಇಂದು ಕೇವಲ 18 ಮಂದಿ ಮಾತ್ರ ಇದ್ದಾರೆ. 1970ರ ದಶಕದಲ್ಲಿ ದಕ್ಷಿಣ ಕನ್ನಡದ ಯುವಜನತೆಯಲ್ಲಿ 20% ಮಂದಿ ಬ್ಯಾಂಕ್ ಉದ್ಯೋಗಸ್ಥರಾಗಿದ್ದರು. ಆದರೆ ಇಂದು ಈ ಪ್ರಮಾಣ 5%ಕ್ಕೆ ಇಳಿದಿದೆ" ಎಂದರು.

ಸಿಂಡಿಕೇಟ್‌ ಬ್ಯಾಂಕ್‌ಗೆ ಭದ್ರ ಅಡಿಪಾಯ ಹಾಕಿದ 25 ಪೈಸೆ: "ಅವಿಭಿಜಿತ ದಕ್ಷಿಣ ಕನ್ನಡ ಜಿಲ್ಲೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಶೇಷ ರೀತಿಯಲ್ಲಿ ಬೆಳೆದಿದೆ. ಇಲ್ಲಿನ ಕೆನರಾ ಬ್ಯಾಂಕ್ ದೇಶದ ಮೂರನೇ ಅತಿ ದೊಡ್ಡ ಬ್ಯಾಂಕ್ ಎನಿಸಿಕೊಂಡಿದೆ. ಸಿಂಡಿಕೇಟ್ ಬ್ಯಾಂಕ್ ಸ್ಥಾಪನೆಯಾದಾಗ ಆರಂಭಿಸಿದ ಡೈಲಿ ಡೆಪಾಸಿಟ್​ ಸ್ಕೀಮ್​ ಠೇವಣಿಯ ಮೊತ್ತ ದಿನಕ್ಕೆ 25 ಪೈಸೆ ಆಗಿತ್ತು. ಈ ಮೊತ್ತವನ್ನು ರೈತರಿಗೆ ಸಾಲದ ರೂಪದಲ್ಲಿ ನೀಡಿತ್ತು. ಇದು ಸಿಂಡಿಕೇಟ್ ಬ್ಯಾಂಕ್​ನ ದೊಡ್ಡ ಸಾಧನೆ. ದಕ್ಷಿಣ ಕರ್ನಾಟಕದಲ್ಲಿ ಹೆಚ್ಚು ಅಭಿವೃದ್ಧಿ ಹೊಂದಿದ ಜಿಲ್ಲೆ ದಕ್ಷಿಣ ಕನ್ನಡ ಮತ್ತು ಉಡುಪಿ. ಇದಕ್ಕೆ ಕಾರಣ ಬ್ಯಾಂಕ್‌ಗಳು. ಇಲ್ಲಿ ಸ್ಥಾಪನೆಯಾದ ಬ್ಯಾಂಕ್‌ಗಳು ಕೇವಲ ಬ್ಯಾಂಕ್‌ಗಳಲ್ಲ, ರೈತರು ಮತ್ತು ಇತರ ಜನರ ಅರ್ಥಿಕತೆಗೆ ಬೆನ್ನೆಲುಬು. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕತೆಯೂ ಅಭಿವೃದ್ಧಿ ಹೊಂದಿತು" ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಬ್ಯಾಂಕ್ ದಿನದ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಮತ್ತು ಉಡುಪಿಯ ಬ್ಯಾಂಕಿಂಗ್ ಇತಿಹಾಸವನ್ನು ಸ್ಮರಿಸುವುದು ಮಾತ್ರವಲ್ಲ, ಇಂದಿನ ಸವಾಲುಗಳನ್ನು ಚರ್ಚಿಸುವುದು ಮಹತ್ವವಾಗಿದೆ. ಹೆಚ್.ವಿ.ರಾವ್ ಅವರಂತೆ, "ಬ್ಯಾಂಕ್‌ಗಳ ಬದಲಾವಣೆಯು ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸಬೇಕು" ಎಂಬ ನಿಲುವು ಇಡೀ ದೇಶದ ಅಭಿವೃದ್ಧಿಗೆ ಪೂರಕವಾಗಿದೆ.

ಇದನ್ನೂ ಓದಿ:ಬ್ಯಾಂಕ್ ಲಾಕರ್​ನಲ್ಲಿ ಚಿನ್ನ ಇಟ್ಟಿದ್ದೀರಾ? : ಆರ್‌ಬಿಐ ನಿಯಮಗಳು ಏನು ಹೇಳುತ್ತವೆ?

Last Updated : Dec 4, 2024, 6:13 PM IST

ABOUT THE AUTHOR

...view details