ಬೆಂಗಳೂರು:ಇಂದು ಸೆಪ್ಟೆಂಬರ್ 15 ವಿಶ್ವ ಪ್ರಜಾಪ್ರಭುತ್ವ ದಿನ. ಈ ದಿನ ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ರಾಜ್ಯದ 31 ಜಿಲ್ಲೆಗಳನ್ನು ಒಳಗೊಂಡಂತೆ 2500 ಕಿ.ಮೀ. ಉದ್ದದ ಮಾನವ ಸರಪಳಿಯನ್ನು ನಿರ್ಮಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಲು ಸರ್ಕಾರ ಮುಂದಾಗಿದೆ.
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಸಮಾಜಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ರಾಜ್ಯದ ಗಡಿ ಜಿಲ್ಲೆಗಳಾದ ಬೀದರ್ ಜಿಲ್ಲೆಯಿಂದ ಚಾಮರಾಜನಗರದ ವರೆಗೂ ಸಮಾಜದ ಎಲ್ಲಾ ವರ್ಗದ ಜನರೂ ಸೇರಿದಂತೆ ಸುಮಾರು 25 ಲಕ್ಷ ಮಂದಿ ಕೈಕೈ ಹಿಡಿದು ರಾಜ್ಯದುದ್ದಕ್ಕೂ ವಿಶ್ವದ ಬೃಹತ್ ಮಾನವ ಸರಪಳಿ ನಿರ್ಮಿಸಲಿದ್ದಾರೆ. ಇದೇ ವೇಳೆ ಸಂವಿಧಾನದ ಮಹತ್ವ ಸಾರುವ ಪ್ರಸ್ತಾವನೆ ಓದುವುದು ಹಾಗೂ ಪ್ರಜಾಪ್ರಭುತ್ವದ ರಕ್ಷಣೆಯ ಹೊಣೆಗಾರಿಕೆ ನೆನಪಿಸುವ ಜಾಗೃತಿ ಮೂಡಿಸಲಿದ್ದಾರೆ. ಹಾಗೆಯೇ, ಸುತ್ತಮುತ್ತ ಪ್ರದೇಶದಲ್ಲಿ ಸಸಿಗಳನ್ನೂ ನೆಡಲಿದ್ದಾರೆ. ಈ ಮೂಲಕ ಅಂದು ರಾಜ್ಯಾದ್ಯಂತ 10 ಲಕ್ಷ ಸಸಿಗಳನ್ನು ನೆಡಲಾಗುತ್ತದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ರಾಜ್ಯದ 32 ಇಲಾಖೆಗಳ ಸುಮಾರು 8 ಲಕ್ಷಕ್ಕೂ ಅಧಿಕ ಸಿಬ್ಬಂದಿ ಇಡೀ ಕಾರ್ಯಕ್ರಮಕ್ಕಾಗಿ ಶ್ರಮಿಸುತ್ತಿದ್ದಾರೆ. ಈ ವಿನೂತನ ಮತ್ತು ಬೃಹತ್ ಕಾರ್ಯಕ್ರಮಕ್ಕೆ ಲಂಡನ್ನ ವಿಶ್ವ ದಾಖಲೆ ಪರಿಶೀಲಿಸುವ ತಂಡ ಆಗಮಿಸಲಿದ್ದು, ಎಲ್ಲವೂ ದಾಖಲೆಗಳ ನಿಯಮದಂತಿರುವುದನ್ನು ವಿವಿಧ ಹಂತಗಳಲ್ಲಿ ಅಧ್ಯಯನ ಮಾಡಲಿದೆ. ನಂತರ ಕಾರ್ಯಕ್ರಮ ದಾಖಲೆಗಳ ನಿಯಮಕ್ಕೆ ಒಪ್ಪುವಂತೆ ಇದ್ದರೆ ಕಾರ್ಯಕ್ರಮವನ್ನು ವಿಶ್ವ ದಾಖಲೆಗೆ ಸೇರಿಸಲಿದೆ. ಇದೆಲ್ಲದಕ್ಕೂ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಅವರು ತಮ್ಮದೇ ರೀತಿಯಲ್ಲಿ ವಿಶೇಷ ವ್ಯವಸ್ಥೆ ಮಾಡಿದ್ದಾರೆ. ಹಾಗೆಯೇ ಡ್ರೋನ್ ಚಿತ್ರೀಕರಣ ಹಾಗೂ ಪ್ರತಿ ಜಿಲ್ಲೆಯ ತಾಲೂಕುಗಳ ಮಾಹಿತಿಗಳು ಕ್ಷಣಕ್ಷಣದಲ್ಲಿ ಲಭ್ಯವಾಗಿ ಆಯೋಜಕರ ನಡುವೆ ಸಂಪೂರ್ಣ ಸಮನ್ವಯದೊಂದಿಗೆ ನಡೆಯುವಂತೆ ಮಾಡುವ ವಿಶೇಷ ಸುಧಾರಿತ ತಂತ್ರಜ್ಞಾನದ ಜಾಲವೊಂದರ ಸಿದ್ಧತೆ ನಡೆಸಿದ್ದಾರೆ ಎಂದು ತಿಳಿಸಿದರು.
ದಾಖಲೆ ಮಾಡಲು ಈ ಪ್ರಜಾಪ್ರಭುತ್ವ ದಿನ ಆಚರಿಸುತ್ತಿಲ್ಲ. ಭಾರತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರಜಾಸತ್ತಾತ್ಮಕ ಮೌಲ್ಯ ಕುಸಿಯುತ್ತಿದೆ. ಸಂವಿಧಾನಿಕ ಸಂಸ್ಥೆಗಳು ರಾಜಕೀಯ ದಾಳ ಆಗುತ್ತಿದೆ. ಸಮಾನತೆ, ಸೋದರತ್ವ ಭಾವನೆಗೆ ಧಕ್ಕೆ ಆಗುತ್ತಿದೆ. ಹೀಗಾಗಿ ಪ್ರಜಾಸತ್ತಾತ್ಮಕ ಅಧಿಕಾರವನ್ನು ಸರಿಯಾಗಿ ಬಳಸುವ ಅಗತ್ಯ ಇದೆ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಎಲ್ಲರೂ ಭಾಗವಹಿಸುವ ಅಗತ್ಯ ಇದೆ. ಈ ವಿಶೇಷ ಮಾನವ ಸರಪಳಿ ಪ್ರತಿ ಜಿಲ್ಲೆ, ತಾಲೂಕು ಹಾಗೂ ಪ್ರಮುಖ ಗ್ರಾಮಗಳಲ್ಲಿ ಹಾದು ಹೋಗುವ ಹೆದ್ದಾರಿಗಳಲ್ಲಿ ಹಾದು ಹೋಗಲಿದ್ದು, ಎಲ್ಲಾ ಹಳ್ಳಿಗಳಲ್ಲೂ ಇದೊಂದು ಹಬ್ಬದಂತೆ ಆಚರಿಸುವಂತೆ ಮಾಡಲು ಸರ್ಕಾರ ಸಕಲ ರೀತಿಯಲ್ಲಿ ಸಿದ್ಧತೆ ನಡೆಸಿದೆ ಎಂದರು.