ಬೆಂಗಳೂರು: ''ಪೊಲೀಸರ ಅಂತರ್ ಜಿಲ್ಲಾ ವರ್ಗಾವಣೆಯನ್ನು ನಿಯಮ ಮೀರಿ ಮಾಡುವಂತಿಲ್ಲ'' ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು.
ಬೆಂಗಳೂರಿನಲ್ಲಿ ಇಂದು (ಬುಧವಾರ) ಮಾತನಾಡಿದ ಅವರು, ಪೊಲೀಸರ ಅಂತರ ಜಿಲ್ಲಾ ವರ್ಗಾವಣೆ ಪೋರ್ಟಲ್ ಅರ್ಜಿ ಪ್ರಕಾರ ಆಗುತ್ತಿಲ್ಲ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿ, ''ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ಶಿಸ್ತು ಬದ್ಧವಾಗಿ ನಿಯಮದ ಚೌಕಟ್ಟಿನಲ್ಲಿ ನಡೆಯಬೇಕಾಗುತ್ತದೆ. ವರ್ಗಾವಣೆಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ಮಾಡಿದ್ದಾರೆ. ಅದನ್ನು ಮೀರಿ ವರ್ಗಾವಣೆ ಮಾಡಲು ಬರುವುದಿಲ್ಲ. ಅಕಸ್ಮಾತ್ ಮಾಡಬೇಕಾದರೆ ನಿಯಮಗಳನ್ನು ಬದಲಾಯಿಸಬೇಕಾಗುತ್ತದೆ'' ಎಂದರು.
ನಿಯಮ ಉಲ್ಲಂಘಿಸಿ ವರ್ಗಾವಣೆ ಮಾಡುವುದಕ್ಕೆ ಅವಕಾಶವಿಲ್ಲ:''ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಒಂದು ವರ್ಷದ ನಿಯಮವಿತ್ತು. ಸದನದಲ್ಲಿ ಕಾನೂನು ಬದಲಾಯಿಸಿ ಎರಡು ವರ್ಷ ಮಾಡಲಾಗಿದೆ. ಈ ರೀತಿ ಕಾನೂನು ಬದಲಾವಣೆ ಮಾಡಬಹುದು. ಇರುವಂತಹ ನಿಯಮ ಉಲ್ಲಂಘಿಸಿ, ವರ್ಗಾವಣೆ ಮಾಡುವುದಕ್ಕೆ ಅವಕಾಶವಿಲ್ಲ. ಡಿಜಿ ಅವರಾಗಲಿ, ನಾನು ಅಥವಾ ಮತ್ತೊಬ್ಬರು ಇರಬಹುದು. ಕಾನೂನು ನಿಯಮದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾಗುತ್ತದೆ'' ಎಂದು ಸಚಿವರು ತಿಳಿಸಿದರು.