ಬೆಂಗಳೂರು:ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಹೆಚ್ಚುವರಿ ಸಿಆರ್ಪಿಎಫ್ ಪಡೆ ನಿಯೋಜಿಸಲಾಗುತ್ತದೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿದರು. ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಕ್ಷೇತ್ರದ ಎಲ್ಲಾ 2,829 ಮತಗಟ್ಟೆಗಳಲ್ಲಿ ವೆಬ್ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗುವುದು. ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಆರ್ಪಿಎಫ್ ಸಿಬ್ಬಂದಿ ನಿಯೋಜಿಸಲಾಗುತ್ತದೆ. ಒಟ್ಟು 7 ಪ್ಯಾರಾಮಿಲಿಟರಿ ಪಡೆ ಕರ್ತವ್ಯದಲ್ಲಿ ಇರಲಿದ್ದಾರೆ. ಅಭ್ಯರ್ಥಿ ಸಲ್ಲಿಸಿದ ಪಿಆರ್ ಲಿಸ್ಟ್, ಸ್ಥಳೀಯ ಚುನಾವಣಾಧಿಕಾರಿಗಳ ವರದಿ ಆಧಾರದಲ್ಲಿ ನಾವೇ ಪರಾಮರ್ಶಿಸಿ, ಹೆಚ್ಚುವರಿ ಭದ್ರತೆ ಮಾಡುತ್ತಿದ್ದೇವೆ. ಮೈಸೂರು-ಕೊಡಗು ಕ್ಷೇತ್ರದ ಎಲ್ಲಾ ಮತಗಟ್ಟೆಗಳಲ್ಲೂ ವೆಬ್ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ವಿವರ ನೀಡಿದರು.
23 ದ್ವೇಷ ಭಾಷಣ ಪ್ರಕರಣ ದಾಖಲು:ಈವರೆಗೆ ವಿವಿಧ ಪಕ್ಷಗಳ ವಿರುದ್ದ ಒಟ್ಟು 23 ದ್ವೇಷ ಭಾಷಣದ ಪ್ರಕರಣಗಳನ್ನು ದಾಖಲಿಸಲಾಗಿದೆ. ಬಿಜೆಪಿ ವಿರುದ್ಧ 12 , ಕಾಂಗ್ರೆಸ್ ವಿರುದ್ಧ 9 ಹಾಗೂ ಜೆಡಿಎಸ್ ವಿರುದ್ದ 2 ಪ್ರಕರಣಗಳು ದಾಖಲಾಗಿವೆ. ಪ್ರಚಾರದಲ್ಲಿ ಮಕ್ಕಳ ಬಳಕೆ ಪ್ರಕರಣದಲ್ಲಿ ತಲಾ 7 ಕೇಸ್ ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ದಾಖಲಾಗಿದೆ. ಧಾರ್ಮಿಕ ಸ್ಥಳಗಳ ಬಳಕೆ ಸಂಬಂಧ 8 ಬಿಜೆಪಿ, 6 ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ 1 ಪ್ರಕರಣ ದಾಖಲಾಗಿದೆ. ಒಟ್ಟು 189 ಗಂಭೀರ ಸ್ವರೂಪದ ನೀತಿ ಸಂಹಿತೆ ಉಲ್ಲಂಘನೆ ಕೇಸ್ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.