ಕಾರವಾರ: ಅರಬ್ಬಿ ಸಮುದ್ರಕ್ಕೆ ಶನಿವಾರ ದಿಢೀರ್ ಆಗಮಿಸಿದ ಗಸ್ತು ಹಡಗುಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದವು. ಕಿಲೋಮೀಟರ್‌ಗಟ್ಟಲೆ ದೂರ ಸಾಗಿ ಬೋಟ್‌ಗಳ ಪರಿಶೀಲನೆ, ಜೆಮಿನಿ ಬೋಟ್‌ಗಳ ಮೂಲಕ ರಕ್ಷಣಾ ಕಾರ್ಯ, ಬೆಂಕಿ ಅನಾಹುತ ನಡೆಯದಂತೆ ವಾಟರ್ ಫೈರ್ ಹಾಗೂ ಬುಲೆಟ್ ಫೈರಿಂಗ್ ಕಾರ್ಯಾಚರಣೆಗಳು ನಡೆದವು.
ಸಮುದ್ರ ಸಂಪೂರ್ಣ ಸುರಕ್ಷಿತವಾಗಿ ತಮ್ಮ ಸುಪರ್ದಿನಲ್ಲಿದೆ ಎಂಬುದನ್ನು ದೃಢೀಕರಿಸಿಕೊಂಡ ಬಳಿಕವಷ್ಟೇ ಆ ಹಡಗುಗಳು ಹಿಂತಿರುಗಿದವು. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಕೋಸ್ಟ್‌ಗಾರ್ಡ್ಸ್ ಬಂದರಿನಿಂದ ಬೆಳಿಗ್ಗೆ ಜನರನ್ನು ಹೊತ್ತುಕೊಂಡು ಒಂದರ ಹಿಂದೊಂದರಂತೆ ಗಸ್ತು ಹಡಗುಗಳಾದ ಕಸ್ತೂರ್ ಬಾ ಗಾಂಧಿ, ಸಾವಿತ್ರಿ ಬಾಯಿ ಪುಲೆ, ಸಿ-448, ಐಎನ್‌ಎಸ್ ವಿಕ್ರಮ್ ಸಮುದ್ರದತ್ತ ಧಾವಿಸಿದ್ದವು.
6 ನಾಟಿಕಲ್ ಮೈಲು ದೂರ ಸಾಗುತ್ತಿದ್ದಂತೆ ಈ ಹಡಗುಗಳು ತಮ್ಮ ಪ್ರಯಾಣದ ವೇಗ ಕಡಿಮೆಗೊಳಿಸಿದವು. ಕೊಂಚ ಹೊತ್ತಿನಲ್ಲಿ ದೂರದಲ್ಲಿ ಕಾಣುತ್ತಿದ್ದ ಹಡಗೊಂದರ ಸುತ್ತಲೂ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಕೋಸ್ಟ್ ಗಾರ್ಡ್ ಸಿಬ್ಬಂದಿ ಎರಡು ಜೆಮಿನಿ ಬೋಟ್‌ನಲ್ಲಿ ತಿರುಗಲಾರಂಭಿಸಿದರು. ಆ ಹಡಗುಗಳು ಸುರಕ್ಷಿತವಾಗಿವೆ ಎಂದು ಅರಿತ ಬಳಿಕ ನೀರಿಗೆ ಬಿದ್ದು ಸ್ಮೋಕ್ ಮೂಲಕ ಸಿಗ್ನಲ್ ಕೊಡುತ್ತಿದ್ದ ವ್ಯಕ್ತಿಯೋರ್ವನನ್ನು ಸಿಬ್ಬಂದಿ ಸುತ್ತುವರಿದು ರಕ್ಷಿಸಿದರು. ಇದನ್ನೆಲ್ಲವನ್ನೂ ನೆರೆದಿದ್ದ ಜನರು ಕಣ್ಣು ಮಿಟುಕಿಸದೆ ದೂರದಿಂದ ನೋಡುತ್ತಿದ್ದರು.
ಅಷ್ಟರಲ್ಲಿ ವಾಟರ್ ಕೆನನ್ ಮೂಲಕ ಭಾರಿ ಪ್ರಮಾಣದಲ್ಲಿ ದೂರಕ್ಕೆ ನೀರು ಚಿಮ್ಮಿಸುವ ಮೂಲಕ ಅಗ್ನಿ ಅವಘಡ ನಡೆಯದಂತೆ ನೋಡಿಕೊಳ್ಳಲಾಯಿತು. ಆಕಾಶದಲ್ಲಿ ಸಿಗ್ನಲ್‌ಗಳನ್ನು ಹಾರಿಸಿದ ಬಳಿಕ ದೊಡ್ಡ ಗನ್ ಮೂಲಕ ಸಮುದ್ರದಲ್ಲಿ ಭಾರಿ ಪ್ರಮಾಣದಲ್ಲಿ ಬುಲೆಟ್ ಫೈರಿಂಗ್ ನಡೆಯಿತು. ಸಮುದ್ರದಲ್ಲಿ ಭಾರತದ ಗಡಿ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ದೃಢೀಕರಿಸಿಕೊಂಡ ನಂತರ ಗಸ್ತು ಹಡಗುಗಳು ಸ್ವಸ್ಥಾನಕ್ಕೆ ಹಿಂತಿರುಗಿದವು. ಅಂದಹಾಗೆ, ಇದು ಇಂಡಿಯನ್ ಕೋಸ್ಟ್‌ಗಾರ್ಡ್ಸ್ ವತಿಯಿಂದ ನಡೆದ ಅಣಕು ಕಾರ್ಯಾಚರಣೆ.