ಕರ್ನಾಟಕ

karnataka

ETV Bharat / state

ನೃಪತುಂಗ ರಸ್ತೆಯಲ್ಲಿ ಅತ್ಯಾಧುನಿಕ ಸ್ಮಾರ್ಟ್ ಬಸ್ ನಿಲ್ದಾಣ ಉದ್ಘಾಟನೆ: ಬಿಬಿಎಂಪಿಗೆ ಹಸ್ತಾಂತರ - SMART BUS STAND - SMART BUS STAND

ಸ್ಮಾರ್ಟ್​ ಬಸ್​ ನಿಲ್ದಾಣವನ್ನು ಉದ್ಘಾಟಿಸಿದ ಸಚಿವ ರಾಮಲಿಂಗಾ ರೆಡ್ಡಿ, ನಿಲ್ದಾಣವನ್ನು ಬಿಬಿಎಂಪಿಗೆ ಹಸ್ತಾಂತರಿಸಿದರು.

Inauguration of Smart Bus Stand at Nripatunga Road: Handover to BBMP
ನೃಪತುಂಗಾ ರಸ್ತೆಯಲ್ಲಿ ಅತ್ಯಾಧುನಿಕ ಸ್ಮಾರ್ಟ್ ಬಸ್ ನಿಲ್ದಾಣ ಉದ್ಘಾಟನೆ (ETV Bharat)

By ETV Bharat Karnataka Team

Published : Oct 2, 2024, 8:52 PM IST

ಬೆಂಗಳೂರು: ನಗರದ ಕೆ.ಆರ್ ವೃತ್ತದ ನೃಪತುಂಗಾ ರಸ್ತೆಯಲ್ಲಿ ಶಿಲ್ಪಾ ಫೌಂಡೇಶನ್ ಸಂಸ್ಥೆಯು ಬಹುರಾಷ್ಟ್ರೀಯ ಕಂಪನಿಯಾದ ಸೇಪಿಯನ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಸಹಯೋಗದಲ್ಲಿ ಸಿ.ಎಸ್.ಆರ್ ಅಡಿ ನಿರ್ಮಿಸಿರುವ ಅತ್ಯಾಧುನಿಕ ಹಾಗೂ ಸುಸಜ್ಜಿತವಾದ ಸ್ಮಾರ್ಟ್ ಬಸ್ ನಿಲ್ದಾಣವನ್ನು ಬುಧವಾರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಅವರು, "ಸೇಪಿಯನ್ಸ್ ಹಾಗೂ ಶಿಲ್ಪಾ ಫೌಂಡೇಶನ್ ನೇತೃತ್ವದಲ್ಲಿ ನಿರ್ಮಿಸಲಾಗಿರುವ ಸ್ಮಾರ್ಟ್ ನಿಲ್ದಾಣ ಹಲವು ವೈಶಿಷ್ಟತೆಗಳಿಂದ ಕೂಡಿದ್ದು, ಇದು ಸಾರ್ವಜನಿಕರಿಗೆ ಬಹಳ ಅನುಕೂಲವಾಗಲಿದೆ. ಇದರಲ್ಲಿರುವ ಸೌಲಭ್ಯಗಳನ್ನು ಸಾರ್ವಜನಿಕರು ಉತ್ತಮ ರೀತಿಯಲ್ಲಿ ಬಳಕೆ ಮಾಡಿದಲ್ಲಿ ಯೋಜನೆಯು ಯಶಸ್ವಿಯಾಗಲಿದೆ. ಸ್ಮಾರ್ಟ್ ನಿಲ್ದಾಣವು ಇತರ ಬಸ್ ನಿಲ್ದಾಣಗಳಿಗಿಂತ ವಿಭಿನ್ನವಾಗಿದ್ದು ಪ್ರತ್ಯೇಕವಾಗಿ ಮಹಿಳೆಯ ಸುರಕ್ಷತೆಗೆ ಹೆಚ್ಚು ಒತ್ತು ನೀಡಿದೆ. ಇಲ್ಲಿರುವ ಪ್ಯಾನಿಕ್ ಬಟನ್ ಹಾಗೂ ಸಿಸಿ ಕ್ಯಾಮರಾಗಳು ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಸಹಕಾರಿಯಾಗಲಿದೆ" ಎಂದು ಅಭಿಪ್ರಾಯಪಟ್ಟರು.

ನೃಪತುಂಗಾ ರಸ್ತೆಯಲ್ಲಿ ಅತ್ಯಾಧುನಿಕ ಸ್ಮಾರ್ಟ್ ಬಸ್ ನಿಲ್ದಾಣ ಉದ್ಘಾಟನೆ (ETV Bharat)

ಸ್ಮಾರ್ಟ್ ಬಸ್​ ನಿಲ್ದಾಣ ನಿರ್ಮಿಸಲು ಯೋಜನೆ:"ಶಿಲ್ಪಾ ಫೌಂಡೇಶನ್ ಸೇಪಿಯನ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ನಗರದ ಸಾರಿಗೆ ವ್ಯವಸ್ಥೆಯಲ್ಲಿ ಪರಿವರ್ತನೆಯನ್ನು ತರಲು ಹಾಗೂ ಸಾರ್ವಜನಿಕರಿಗೆ ಅನುಕೂಲಕರ ಮತ್ತು ಹೊಸ ಅನುಭವವನ್ನು ನೀಡುವ ನಿಟ್ಟಿನಲ್ಲಿ ಬ್ರಾಂಡ್ ಬೆಂಗಳೂರು ಅಡಿಯಲ್ಲಿ ನಗರದ ಪ್ರಮುಖ 3 ಪ್ರದೇಶಗಳಲ್ಲಿ ಸುಸಜ್ಜಿತ ಮತ್ತು ಅತ್ಯಾಧುನಿಕವಾದ ಸ್ಮಾರ್ಟ್ ಬಸ್ಸು ನಿಲ್ದಾಣಗಳನ್ನು ನಿರ್ಮಿಸಲು ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯು ಸಾರ್ವಜನಿಕರಿಗೆ ಹೆಚ್ಚು ಉಪಯುಕ್ತ ಹಾಗೂ ಪ್ರಯಾಣಿಕ ಸ್ನೇಹಿ ಬಸ್ ನಿಲ್ದಾಣವಾಗಲಿದೆ" ಎಂದು ಆಶಿಸಿದರು.

ನೃಪತುಂಗಾ ರಸ್ತೆಯಲ್ಲಿ ಅತ್ಯಾಧುನಿಕ ಸ್ಮಾರ್ಟ್ ಬಸ್ ನಿಲ್ದಾಣ ಉದ್ಘಾಟನೆ (ETV Bharat)

"ನಗರದಲ್ಲಿ ಅನಿಯಮಿತ ಬಸ್ ನಿಲ್ದಾಣಗಳಿದ್ದರೂ ಪ್ರಯಾಣಿಕ ಸ್ನೇಹಿ ಹಾಗೂ ಅತ್ಯಾಧುನಿಕ ಶೈಲಿಯ ಗುಣಮಟ್ಟದ ನಿಲ್ದಾಣವನ್ನು ಕಲ್ಪಿಸುವುದು ಸ್ಮಾರ್ಟ್ ನಿಲ್ದಾಣದ ಉದ್ದೇಶವಾಗಿದೆ. ಅದಕ್ಕಾಗಿಯೇ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ಅತಿ ಉಪಯುಕ್ತವಾಗುವ ರೀತಿಯಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ. ಸ್ಮಾರ್ಟ್ ಬಸ್ ನಿಲ್ದಾಣದಲ್ಲಿ ದಿನದ 24 ಗಂಟೆಗಳ ಕಾಲ ಸಿಸಿ ಕ್ಯಾಮರಾಗಳು ಕಾರ್ಯಾಚರಣೆ ನಡೆಸಲಿವೆ. ಹಾಗಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲಾಗುತ್ತದೆ. ಸಿಸಿ ಕ್ಯಾಮರಾಗಳು ಸ್ಥಳೀಯ ಪೊಲೀಸ್ ಠಾಣೆಗೆ ಸಂಪರ್ಕ ಹೊಂದಿರಲಿದ್ದು ಸ್ಥಳೀಯ ಠಾಣಾ ಪೊಲೀಸರ ನಿರೀಕ್ಷಣೆಯಲ್ಲಿರಲಿದೆ" ಎಂದು ಹೇಳಿದರು.

ಬಸ್​​​ನಲ್ಲಿ ಪ್ಯಾನಿಕ್​ ಬಟನ್​ ಅಳವಡಿಕೆ:"ಬಸ್ ನಿಲ್ದಾಣದಲ್ಲಿ ಪ್ರಮುಖವಾಗಿ ಪ್ಯಾನಿಕ್ ಬಟನ್ ಅಳವಡಿಸಲಾಗಿದೆ. ಬಸ್​ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಥವಾ ಸಾರ್ವಜನಿಕರಿಗೆ ಮುಖ್ಯವಾಗಿ ಮಹಿಳೆಯರಿಗೆ ಯಾವುದೇ ರೀತಿಯ ಅಪಾಯ ಉಂಟಾಗುವ ಸನ್ನಿವೇಶದಲ್ಲಿ ಪ್ಯಾನಿಕ್ ಬಟನ್ ಒತ್ತಿದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಸಂದೇಶ ತಲುಪಲಿದೆ. ಇದರಿಂದ ಕೆಲವೇ ನಿಮಿಷಗಳಲ್ಲಿ ಪೊಲೀಸ್ ಸಿಬ್ಬಂದಿಗಳು ಆಗಮಿಸಿ ಅಪಾಯಕ್ಕೊಳಗಾದವರ ರಕ್ಷಣೆ ಮಾಡಲಿದ್ದಾರೆ. ಇನ್ನು ಸ್ಮಾರ್ಟ್ ಬಸ್​ ನಿಲ್ದಾಣದಲ್ಲಿ ಯಾವುದೇ ಸಂದರ್ಭದಲ್ಲಿ ಮಹಿಳೆಯರಿಗೆ 24/7 ಸ್ಯಾನಿಟರಿ ಪ್ಯಾಡ್ ಗಳು ದೊರೆಯಲಿವೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪ್ಯಾಡ್ ಗಳನ್ನು ಸ್ವೀಕರಿಸಬಹುದಾಗಿದೆ. ಬಸ್​ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಥವಾ ಸಾರ್ವಜನಿಕರಿಗೆ ಮೊಬೈಲ್ ಹಾಗೂ ಲ್ಯಾಪ್​ಟಾಪ್ ಚಾರ್ಜಿಂಗ್ ಮಾಡಲು ಚಾರ್ಜಿಂಗ್ ಪಾಯಿಂಟ್​ಗಳು ಇರಲಿವೆ. ಬಸ್​ ನಿಲ್ದಾಣದಲ್ಲಿ ಸೆನ್ಸರ್ ಬೇಸ್ಡ್ ಡಸ್ಟ್ ಬಿನ್ ಅಳವಡಿಸಲಾಗಿದ್ದು, ಒಣ ತ್ಯಾಜ್ಯ ಹಾಗೂ ಹಸಿ ತ್ಯಾಜ್ಯಗಳನ್ನು ವಿಂಗಡಿಸಿ ತ್ಯಾಜ್ಯ ಶೇಖರಿಸಲಿದೆ. ತ್ಯಾಜ್ಯ ತುಂಬಿದ ತಕ್ಷಣದಲ್ಲಿ ಆನ್ ಲೈನ್ ಮೂಲಕ ನಿರ್ವಾಹಕರಿಗೆ ಸೈರನ್ ಮೂಲಕ ಮಾಹಿತಿ ತಲುಪಲಿದ್ದು ಕೂಡಲೇ ತ್ಯಾಜ್ಯ ವಿಲೇವಾರಿಯಾಗಲಿದೆ" ಎಂದು ವಿವರಿಸಿದರು.

"ಬಸ್​ ನಿಲ್ದಾಣದಲ್ಲಿ ನಾಲ್ಕು ಡಿಸ್ಪ್ಲೇಗಳನ್ನು ಅಳವಡಿಸಿದ್ದು ಒಂದರಲ್ಲಿ ಬಿ.ಎಂ.ಟಿ.ಸಿ ಬಸ್​ಗಳ ವಿವರ ಲಭ್ಯವಾಗಲಿದೆ. ಮಳೆ ನೀರನ್ನು ಸಂಗ್ರಹಿಸಿ ನೀರು ಪೋಲಾಗದಂತೆ ನೀರನ್ನು ಗಿಡಗಳಿಗೆ ಹಾಗೂ ಇಂಗು ಗುಂಡಿಗಳಿಗೆ ಬಿಡಲಾಗುತ್ತದೆ. ಬಸ್ ನಿಲ್ದಾಣದಲ್ಲಿ ಸ್ನ್ಯಾಕ್ ವೆಂಡಿಂಗ್ ಮೆಷಿನ್ ಅಳವಡಿಸಲು ಸ್ಥಳ ಮೀಸಲಿರಿಸಿದ್ದು ಸ್ನ್ಯಾಕ್ ವೆಂಡಿಂಗ್ ಮೆಷಿನ್ ಕೂಡಾ ಅಳವಡಿಸಬಹುದಾಗಿದೆ" ಎಂದು ಮಾಹಿತಿ ನೀಡಿದರು.

ಶಿಲ್ಪಾ ಫೌಂಡೇಶನ್ ಸಂಸ್ಥಾಪಕರಾದ ಅಚ್ಚುತ್ ಗೌಡ ಮಾತನಾಡಿ, "ಅತ್ಯಾಧುನಿಕ ಹಾಗೂ ಸುಸಜ್ಜಿತ ಬಸ್​ ನಿಲ್ದಾಣವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಿದ್ದು ಇಲ್ಲಿ ಯಾವುದೇ ರೀತಿಯ ಜಾಹೀರಾತುಗಳನ್ನು ಅಳವಡಿಸಲಾಗುವುದಿಲ್ಲ. ಡಿಸ್ಪ್ಲೇಗಳಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ಬಿಬಿಎಂಪಿ ಅಥವಾ ಸರಕಾರದ ಮಾಹಿತಿಗಳನ್ನು ಬಿಬಿಎಂಪಿ ಬಿತ್ತರಿಸಬಹುದಾಗಿದೆ" ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸೇಪಿಯನ್ಸ್ ಸಂಸ್ಥೆಯ ಸುರಜೀತ್ ಬಸು, ರಾಜೇಶ್ ಕೆಂಕೆರೆ, ಸುಶೀಲ್ ಮಹಲ, ಗಿರೀಶ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ:ಹುಬ್ಬಳ್ಳಿ ಉಪ ಕಾರಾಗೃಹದಲ್ಲಿ ಹೊಸದಾಗಿ 4 ಬ್ಯಾರಕ್‌ಗಳ ಉದ್ಘಾಟನೆ - Barracks Inauguration

ABOUT THE AUTHOR

...view details