ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ನೀರಿನ ಅಭಾವ ತಲೆದೂರಿದ್ದು ಇದರ ಪರಿಣಾಮ ನಗರ ಉಷ್ಣಾಂಶದಲ್ಲಿ ಹೆಚ್ಚಳವಾಗಿದೆ. ಪ್ರಸ್ತಕ ತಿಂಗಳಲ್ಲಿ 34 ಡಿಗ್ರಿ ಸೆಲಿಯಸ್ಸ್ ಉಷ್ಣಾಂಶ ಇದ್ದರೆ ಮೇ ತಿಂಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಎಎಸ್ಸಿ) ಪರಿಸರ ವಿಜ್ಞಾನಿ ಡಾ. ಟಿವಿ ರಾಮಚಂದ್ರರಾವ್ ಆತಂಕ ವ್ಯಕ್ತಪಡಿಸಿದರು. ಕರ್ನಾಟಕ ನೆಲ - ಜಲ ಸಂರಕ್ಷಣಾ ಸಮಿತಿ ವತಿಯಿಂದ ನಗರದ ಗಾಂಧಿಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಸಮಸ್ಯೆ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆರೆ ಸಂರಕ್ಷಣೆ ಕುರಿತಂತೆ ಆಧ್ಯಯನ ಮಾಡಿರುವ ಬಗ್ಗೆ ವಿವರಣೆ ನೀಡಿದರು.
ಕುಡಿಯುವ ನೀರಿನ ಸಮಸ್ಯೆ ಕುರಿತ ವಿಚಾರ ಸಂಕಿರಣ ಉದ್ಯಾನವನ, ಗಾರ್ಡನ್ ಸಿಟಿ ಎಂದು ಕರೆಯಿಸಿಕೊಳ್ಳುತ್ತಿದ್ದ ಬೆಂಗಳೂರಿನಲ್ಲಿ ಕೆರೆಗಳನ್ನು ನಾಶಪಡಿಸಿ ಗಗನಚುಂಬಿ ಕಟ್ಟಡಗಳು ತಲೆ ಎತ್ತಿವೆ. ಅಧಿಕ ವೈಟ್ ಟಾಪಿಂಗ್ನಿಂದ ಮಳೆಗಾಲದಲ್ಲಿ ನೀರು ಇಂಗಲು ವ್ಯವಸ್ಥೆಯಿಲ್ಲದ ಪರಿಣಾಮ ಬೇಸಿಗೆಯಲ್ಲಿ ನೀರಿನ ಹಾಹಾಕಾರ ಶುರುವಾಗಿದೆ. ಇದರಿಂದ ಹವಾಗುಣದ ಮೇಲೆ ಪ್ರತಿರೋಧ ಪರಿಣಾಮ ಬೀರಿದೆ. ಸದ್ಯ ಮಾರ್ಚ್ನಲ್ಲಿ 34 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇದ್ದರೆ ಮುಂದಿನ ಮೇ ತಿಂಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದೆ. ಅದೇ ರೀತಿ ಎಲ್ಲೆಲ್ಲಿಯೂ ಕೆರೆ - ಪಾರ್ಕ್ ಗಳಿರುತ್ತವೆಯೋ ಅಲ್ಲಿ ಶೇ.2ರಷ್ಟು ಉಷ್ಣಾಂಶ ಕಡಿಮೆಯಿದೆ ಎಂದರು.
ಕುಡಿಯುವ ನೀರಿನ ಸಮಸ್ಯೆ ಕುರಿತ ವಿಚಾರ ಸಂಕಿರಣ 740 ಚದರ ಕಿಲೋಮೀಟರ್ ವ್ಯಾಪ್ತಿಯ ಬೆಂಗಳೂರಿನಲ್ಲಿ ಕೆಂಪೇಗೌಡ ಕಾಲದಲ್ಲಿ 1452 ಕೆರೆಗಳಿದ್ದವು. ಗರಿಷ್ಠ 14 ರಿಂದ 16 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿತ್ತು. ಡಿಸೆಂಬರ್ನಲ್ಲಿ ಕನಿಷ್ಠ ತಾಪಮಾನ ಶೂನ್ಯವಾಗಿತ್ತು. ಈ ವಾತಾವರಣದಲ್ಲಿ ಅಂದಿನವರು ಸೇಬು ಬೆಳೆಯುತ್ತಿದ್ದರು. ಇದೀಗ ನಾವುಗಳು ಕಸ ಬೆಳೆಯುತ್ತಿದ್ದೇವೆ. ಸದ್ಯ ಜೀವಂತವಾಗಿರುವ ಕೆರೆಗಳು 193 ಮಾತ್ರ ಇವೆ. ಕೇಂದ್ರ ಪರಿಸರ ಸಚಿವಾಲಯ ನಿರ್ದೇಶನದಂತೆ ಶೇ.33 ರಷ್ಟು ಹಸಿರೀಕರಣ ಹೊಂದಿರಬೇಕು ಎಂದು ಹೇಳಿದೆ. ವಾಸ್ತವದಲ್ಲಿ ಶೇ.4ರಷ್ಟು ಹಸಿರು ಪ್ರದೇಶ ಹೊಂದಿದೆ. ಶೇ. 45 ರಷ್ಟು ಅಂತರ್ಜಲ ಮೇಲೆ ಅವಲಂಬಿತರಾಗಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ಕುಡಿಯುವ ನೀರಿನ ಸಮಸ್ಯೆ ಕುರಿತ ವಿಚಾರ ಸಂಕಿರಣ ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಸರಾಗವಾಗಿ ನೀರು ಹರಿಯುವ ರಾಜಕಾಲುವೆ ಮಾರ್ಗವನ್ನ ಇನ್ನಿಲ್ಲದಂತೆ ಮಾಡಲಾಗುತ್ತಿದೆ. ಇಂದು 1800 ಮೀಟರ್ ಆಳ ಕೊಳವೆಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಇದರ ನಡುವೆಯೂ ಚಂದ್ರನಲ್ಲಿ ನೀರು ಹುಡುಕಾಡುತ್ತಿದ್ದೇವೆ. ವಿಪರೀತ ನಗರೀಕರಣ ಪ್ರಭಾವದಿಂದ 1970ರ ದಶಕದಲ್ಲಿ ಶೇ.8ರಷ್ಟಿದ್ದ ಕೆಂಪು ಪ್ರದೇಶವು 2023ರಲ್ಲಿ ಶೇ.86ಕ್ಕೆ ಏರಿದೆ. ಸುಮಾರು 76ರಷ್ಟು ಪ್ರದೇಶದಲ್ಲಿ ಹಸಿರು ಕಳೆದುಕೊಂಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಕೆರೆ ಕಲುಷಿತದಿಂದಾಗಿ ಅದೇ ನೀರಿನಲ್ಲಿ ಸ್ಥಳೀಯ ರೈತರು ಬೆಳೆಯುವ ಸೊಪ್ಪು ತರಕಾರಿಗಳ ಸೇವನೆಯಿಂದಾಗಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಸೇವಿಸುವ ಆಹಾರದಲ್ಲಿ ಲೋಹದ ಅಂಶಗಳು ಇರುವುದರಿಂದ ಕ್ಯಾನ್ಸರ್ ಹಾಗೂ ಕಿಡ್ನಿ ಫೆಲ್ಯೂರ್ಗಳ ಸಂಖ್ಯೆ ಅಧಿಕವಾಗಿವೆ. ವರ್ತೂರು ಕೆರೆಯಲ್ಲಿ 11 ಮಿಲಿಯನ್ ಕ್ಯೂಬಿಕ್ ಹೂಳು ತೆಗೆಯುವ ಕೆಲಸವನ್ನ ಜಲಮಂಡಳಿ ಮಾಡಬೇಕಿದೆ ಎಂದರು.
ಮಳೆನೀರು ಕೊಯ್ಲುನಿಂದ ನಗರಕ್ಕೆ 15 ಟಿಎಎಂಸಿ ನೀರು:ನಗರದಲ್ಲಿ ಮಳೆ ನೀರು ಕೊಯ್ಲು ಕಡ್ಡಾಯಪಡಿಸಿದರೆ ಬೆಂಗಳೂರಿಗೆ 15 ಟಿಎಂಸಿ ನೀರು ಸಂಗ್ರಹಿಸಬಹುದಾಗಿದೆ. ಶೇ.70ರಷ್ಟು ನೀರು ಇದರಿಂದಲೇ ಮಳೆ ನೀರು ಕೊಯ್ಲು ಪದ್ದತಿಯಿಂದ ನೀರಿನ ಬೇಡಿಕೆಯನ್ನ ತಗ್ಗಿಸಬಹುದಾಗಿದೆ. ಸರ್ಕಾರವು ಉದ್ದೇಶಿಸಲಾಗಿರುವ ಮೇಕೆದಾಟು ಯೋಜನೆ ವಿರೋಧ ವ್ಯಕ್ತಪಡಿಸಿದ ರಾಮಚಂದ್ರರಾವ್, ಯೋಜನೆಗಾಗಿ 5 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಮುಳುಗಡೆಯಾಗಲಿದೆ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಕ್ರಾಂಕೀಟೀಕರಣ ಮಾಡಿ ನೀರು ಸಂಗ್ರಹಿಸುವ ಬದಲು ಇರುವ ವಿವಿಧ ಜೀವ ಪ್ರಭೇದ ಕಾಡುಗಳನ್ನ ಉಳಿಸಿ ಬೆಳೆಸಿದರೆ ಅಗತ್ಯ ಇರುವಷ್ಟು ನೀರು ಸಂಗ್ರಹಿಸಿಕೊಳ್ಳುವುದು ಬುದ್ಧಿವಂತಿಕೆಯಲ್ಲವೇ ಎಂದು ಪ್ರಶ್ನಿಸಿದರು.
ಕರ್ನಾಟಕ ನೆಲ - ಜಲ ಸಂರಕ್ಷಣಾ ಸಮಿತಿ ಸಂಚಾಲಕ ಕುರುಬುರು ಶಾಂತಕುಮಾರ್ ಮಾತನಾಡಿ, ಕುಡಿಯುವ ನೀರಿಗಾಗಿ ಜನ ಹಾಹಾಕಾರ ಪಡುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಭೀಮ, ಕೃಷ್ಣಾ, ಘಟಪ್ರಭಾ, ಮಹದಾಯಿ, ಕಾವೇರಿ ನದಿಗಳಿಂದ ನೀರು ಹರಿಸುವಂತೆ ರೈತರು ಘೋರ ಆಕ್ರಂದನ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ವಾರಕ್ಕೊಮ್ಮೆ ನೀರು ಸಿಗುವಂತಾಗಿದೆ. ಇಂಥ ಸ್ಥಿತಿಯಲ್ಲಿ ಮೇಕೆದಾಟು ಕುಡಿಯುವ ನೀರಿನ ಯೋಜನೆಯನ್ನು ಸ್ಥಗಿತಗೊಳಿಸುವ ಡಿಎಂಕೆ ಚುನಾವಣಾ ಪ್ರಣಾಳಿಕೆ ಏಕೆ ಬೇಕು ಕುಡಿಯೋ ನೀರಿನ ವಿವಾದ ಕೆಣಕಿ ಜನರನ್ನ ರೂಚ್ಚಿಗೆಳಿಸುವ ರಾಜಕೀಯ ಪಕ್ಷಕ್ಕೆ ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಳ್ಳಲಿ. ರಾಜ್ಯ ಸರ್ಕಾರ ಚುನಾವಣಾ ಆಯೋಗಕ್ಕೆ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಲಿ.
ನೀರಿನ ಸಂಕಷ್ಟ ಕಾಲದಲ್ಲಿ ರೈತರು ಕೂಡ ಬೆಳೆ ಪದ್ಧತಿ ಬದಲಾಯಿಸಿಕೊಳ್ಳಬೇಕು. ವೇಸ್ಟ್ ವಾಟರ್ ಪುನರ್ ಬಳಕೆ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಕಳೆದ ಆರು ತಿಂಗಳ ಹಿಂದೆ ಕಾವೇರಿ ಹೋರಾಟ ಮಾಡಿದಾಗ ಕಾವೇರಿ ನೀರು ತಮಿಳುನಾಡಿಗೆ ಹರಿಸದಂತೆ ಸರ್ಕಾರದ ಗಮನ ಸೆಳೆದರೂ ಪ್ರಯೋಜನವಾಗಲಿಲ್ಲ. ಮತ್ತೊಂದು ಕಡೆ ಬೆಂಗಳೂರು ನಗರದಲ್ಲಿರುವ ಕೆರೆ ಕಟ್ಟೆಗಳನ್ನ ಮುಚ್ಚಿ ಭೂ ಮಾಫಿಯಾದವರು ದೊಡ್ಡ ಕಟ್ಟಡಗಳ ನಿರ್ಮಾಣ ಮಾಡಿದ ಕಾರಣವೂ ಸಮಸ್ಯೆಯ ಮೂಲವಾಗಿದೆ ಇಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತಾಗಬೇಕು. ರಾಜ್ಯ ಸರ್ಕಾರದ ವೈಫಲ್ಯದಿಂದ ನಾವು ಸಂಕಷ್ಟ ಪಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬರ ಪರಿಹಾರ ಬಿಡುಗಡೆಗೆ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ರಾಜ್ಯ ಸರ್ಕಾರ - Drought Relief