ಕರ್ನಾಟಕ

karnataka

ETV Bharat / state

ಮಾರಣಾಂತಿಕ ಹಾವಿನ ವಿಷ ತಟಸ್ಥಗೊಳಿಸುವ ಹೊಸ ಪ್ರತಿಕಾಯ ಕಂಡುಹಿಡಿದ ಬೆಂಗಳೂರಿನ ಐಐಎಸ್​​ಸಿ ವಿಜ್ಞಾನಿಗಳು - ಹಾವು ಕಡಿತದ ಚಿಕಿತ್ಸೆಗೆ ಪ್ರತಿಕಾಯ

ಹಾವು ಕಡಿತದ ವಿಷ ತಟಸ್ಥಗೊಳಿಸುವ ಹೊಸ ಪ್ರತಿಕಾಯವನ್ನು ಬೆಂಗಳೂರಿನ ಐಐಎಸ್​ಸಿ ವಿಜ್ಞಾನಿಗಳ ತಂಡ ಕಂಡುಹಿಡಿದಿದೆ.

ವಿಷಕಾರಿ ಹಾವು (ಸಂಗ್ರಹ ಚಿತ್ರ)
ವಿಷಕಾರಿ ಹಾವು (ಸಂಗ್ರಹ ಚಿತ್ರ)

By ETV Bharat Karnataka Team

Published : Feb 23, 2024, 7:33 PM IST

Updated : Feb 24, 2024, 1:18 PM IST

ಬೆಂಗಳೂರು:ತೀವ್ರ ವಿಷಕಾರಿ ಹಾವುಗಳ ಪ್ರಬಲ ನ್ಯೂರೋ ಟಾಕ್ಸಿನ್ ಅನ್ನು ತಟಸ್ಥಗೊಳಿಸಬಲ್ಲ ಹೊಸ ಮಾನವ ಪ್ರತಿಕಾಯವನ್ನು (ಆಂಟಿಬಾಡಿ) ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್​​ಸಿ) ಪರಿಸರ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡ ಹಾಗೂ ಅಮೆರಿಕಾದ ಸ್ಕ್ರಿಪ್ಟ್ ರೀಸರ್ಚ್ ಇನ್ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದೆ. ಎಲಾಪಿಡಿ ಕುಟುಂಬಕ್ಕೆ ಸೇರಿದ ತೀವ್ರ ವಿಷಕಾರಿ ಹಾವುಗಳಾದ ಕಾಳಿಂಗ ಸರ್ಪ, ಕಟ್ಟುಹಾವು ಮತ್ತು ಕಪ್ಪು ಮಾಂಬಾ ಹಾವುಗಳ ವಿಷವನ್ನು ಈ ಪ್ರತಿಕಾಯ ತಟಸ್ಥಗೊಳಿಸಲಿದೆ.

ವಿಷವನ್ನು ತಟಸ್ಥಗೊಳಿಸುವ ಹೊಸ ಪ್ರತಿಕಾಯವನ್ನು ಸಂಶೋಧಿಸಲು ವಿಜ್ಞಾನಿಗಳ ತಂಡವು ಹೆಚ್‌ಐವಿ ಮತ್ತು ಕೋವಿಡ್-19 ಪ್ರತಿಕಾಯಗಳನ್ನು ಪರೀಕ್ಷಿಸಲು (ಸ್ವೀನಿಂಗ್ ಮಾಡಲು) ಬಳಸಲಾಗಿದ್ದ ವಿಧಾನವನ್ನು ಅಳವಡಿಸಿಕೊಂಡಿದೆ. ಇದೇ ಮೊದಲ ಸಲ ಹಾವು ಕಡಿತದ ಚಿಕಿತ್ಸೆಗೆ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಲು ಈ ನಿರ್ದಿಷ್ಟ ತಂತ್ರವನ್ನು ಬಳಸಲಾಗಿದೆ ಎಂದು ಪಿಹೆಚ್​ಡಿ ವಿದ್ಯಾರ್ಥಿ ಹಾಗೂ ಸೈನ್ಸ್ ಟ್ರಾನ್ಸೆಷನಲ್ ಮೆಡಿಸಿನ್​ನಲ್ಲಿ ಪ್ರಕಟವಾಗಿರುವ ಅಧ್ಯಯನದ ಮೊದಲ ಸಹ-ಲೇಖಕರಾದ ಆರ್ ಆರ್ ಸೆಂಜಿ ಲ್ಯಾಕ್ಷೆ ತಿಳಿಸಿದ್ದಾರೆ.

ಈ ಸಂಶೋಧನೆಯು ಹಲವು ಬಗೆಯ ಹಾವಿನ ವಿಷಗಳ ವಿರುದ್ಧ ರಕ್ಷಣೆ ಒದಗಿಸಬಲ್ಲ ಸಾರ್ವತ್ರಿಕ ಪ್ರತಿಕಾಯ ಪರಿಹಾರದೆಡೆಗೆ ನಮ್ಮನ್ನು ಒಂದು ಹೆಜ್ಜೆ ಹತ್ತಿರ ಕೊಂಡೊಯ್ದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯವಾಗಿ ಭಾರತ ಮತ್ತು ಆಫ್ರಿಕಾದ ಸಹರಾದ ದಕ್ಷಿಣಕ್ಕಿರುವ ದೇಶಗಳಲ್ಲಿ ಪ್ರತಿವರ್ಷ ಹಾವು ಕಡಿತದಿಂದ ಸಾವನ್ನಪ್ಪುವ ಸಾವಿರಾರು ಪ್ರಕರಣಗಳು ಆಗುತ್ತಲೇ ಇವೆ. ಪ್ರಸ್ತುತ ಅನುಸರಿಸುತ್ತಿರುವ ವಿಧಾನದಲ್ಲಿ ಪ್ರತಿವಿಷಗಳನ್ನು (ಅಂಟಿವೆನಮ್) ಅಭಿವೃದ್ಧಿಪಡಿಸಲು ಕುದುರೆ, ಕುದುರೆಮರಿ ಮತ್ತು ಹೇಸರುಗತ್ತೆಯಂತಹ (ಈಕ್ರೈನ್​ಗಳು) ಪ್ರಾಣಿಗಳ ದೇಹಕ್ಕೆ ಹಾವಿನ ವಿಷ ಸೇರಿಸಿ, ನಂತರ ಅವುಗಳ ರಕ್ತದಿಂದ ಪ್ರತಿಕಾಯಗಳನ್ನು ಸಂಗ್ರಹಿಸಲಾಗುತ್ತದೆ. ಆದರೆ ಈ ವಿಧಾನದಲ್ಲಿ ಹಲವಾರು ತೊಡಕುಗಳಿವೆ ಎಂದು ಮಾಹಿತಿ ನೀಡಿದ್ದಾರೆ.

ಅಲರ್ಜಿಯಂತಹ ಪ್ರತಿವರ್ತನೆ ಉಂಟಾಗುವ ಸಾಧ್ಯತೆ ಇರುವುದಿಲ್ಲ: ಪ್ರತಿಕಾಯವನ್ನು ಸೃಜಿಸುವ ವಿಷವನ್ನು ಕುದುರೆಯಂತಹ ಪ್ರಾಣಿಗಳಿಗೆ ಚುಚ್ಚುವ ಬದಲಿಗೆ ಮನುಷ್ಯ ಶರೀರದಿಂದ ತೆಗೆಯಲಾದ ಜೀವಕೋಶ ಸಾಲುಗಳನ್ನೇ ಬಳಸಲಾಗಿದೆ. ಪ್ರತಿಕಾಯವು ಸಂಪೂರ್ಣವಾಗಿ ಮನುಷ್ಯನ ಜೀವಕೋಶಗಳಿಂದ ಸೃಜನೆಯಾಗಿರುವುದರಿಂದ ಯಾವುದೇ ಅಲರ್ಜಿಯಂತಹ ಪ್ರತಿವರ್ತನೆ ಉಂಟಾಗುವ ಸಾಧ್ಯತೆ ಇರುವುದಿಲ್ಲ ಎಂದು ಲ್ಯಾಕ್ಷೆ ಪ್ರತಿಪಾದಿಸಿದ್ದಾರೆ.

ಈ ಪ್ರಾಣಿಗಳು ತಮ್ಮ ಜೀವಿತಾವಧಿಯಲ್ಲಿ ವಿವಿಧ ಬ್ಯಾಕ್ಟಿರಿಯಾಗಳು ಮತ್ತು ವೈರಸ್​ಗಳಿಗೆ ತಮ್ಮನ್ನು ವೊಡ್ಡಿಕೊಂಡಿರುತ್ತವೆ ಎಂದು ಸಿಇಎನಲ್ಲಿ ಸಹ ಪ್ರಾಧ್ಯಾಪಕ, ಅಧ್ಯಯನದ ಜಂಟಿ ಸಹಲೇಖಕರಾದ ಕಾರ್ತಿಕ್ ಸುಣಗಾರ್ ವಿವರಿಸಿದ್ದಾರೆ. ಪ್ರತಿವಿಷಗಳು (ಅಂಟಿವೆನಮ್) ಚಿಕಿತ್ಸೆಯ ದೃಷ್ಟಿಯಿಂದ ಅನಿವಾರ್ಯವಾದ ಸೂಕ್ಷ್ಮಾಣುಜೀವಿಗಳ ವಿರುದ್ಧದ ಪ್ರತಿಕಾಯಗಳನ್ನು ಕೂಡ ಒಳಗೊಂಡಿರುತ್ತವೆ. ವಾಸ್ತವವಾಗಿ, ಶೇಕಡ 10ಕ್ಕಿಂತ ಕಡಿಮೆ ಪ್ರಮಾಣದ ಹಾವಿನ ವಿಷಗಳಿಗೆ ಸಂಬಂಧಿಸಿದ ಪ್ರತಿಕಾಯಗಳನ್ನು ಹೊಂದಿರುತ್ತದೆ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ ಎಂದು ಹೇಳಿದ್ದಾರೆ.

ತಂಡವು ಅಭಿವೃದ್ಧಿಪಡಿಸಿರುವ ಈ ಪ್ರತಿಕಾಯವು ವಿಷದಲ್ಲಿನ ಫಿಂಗರ್ ಟಾಕ್ಸಿನ್ ಎಂಬ ಪ್ರಮುಖ ನಂಜಿನ ಪ್ರಧಾನ ಘಟಕದ ಸಂರಕ್ಷಿತ ನೆಲೆಯನ್ನು ಗುರಿಯಾಗಿಸಿಕೊಂಡು ಕಾರ್ಯಾಚರಿಸುತ್ತದೆ. ಎಲಾಪಿಡಿಗಳ ಬೇರೆ ಬೇರೆ ಪ್ರಭೇದಗಳು ವಿಭಿನ್ನ ಟಾಕ್ಸಿನ್ ಸೃಜಿಸುತ್ತವೆಯಾದರೂ, ಈ ಪ್ರೊಟೀನ್​ನಲ್ಲಿರುವ ಕೆಲವಷ್ಟು ನೆಲೆಗಳು ಒಂದೇ ತರಹ ಇರುತ್ತವೆ. ಅಂತಹ ಒಂದು ಸಂರಕ್ಷಿತ ನೆಲೆ - ಡೈ ನಿಡ್ ಕೋರ್ ಅನ್ನು ಇದೀಗ ಪತ್ತೆ ಹಚ್ಚಲಾಗಿದೆ. ಮಾನವ ಜನ್ಯ ಕೃತಕ ಪ್ರತಿಕಾಯಗಳ ದೊಡ್ಡಸಂಗ್ರಹವನ್ನು ಯೀಸ್ಟ್ ಜೀವಕೋಶದ ಮೇಲೆ ವಿನ್ಯಾಸಗೊಳಿಸಿ ಪ್ರದರ್ಶಿಸಲಾಗಿದೆ. ಪ್ರಪಂಚದ ವಿವಿಧೆಡೆಗಳ ಎಲಾಪಿಡಿ ಹಾವುಗಳ ಪ್ರತಿಕಾಯಗಳು ಅಂಟಿಕೊಳ್ಳಬಲ್ಲ ಸಾಮರ್ಥ್ಯವನ್ನು ಪರೀಕ್ಷಿಸಲಾಗಿದೆ. ಹಲವು ಸಲ ಸ್ವೀನಿಂಗ್ ಪುನರಾವರ್ತಿಸಿದ, ಬಲವಾಗಿ ಅಂಟಿಕೊಳ್ಳಬಲ್ಲ ಒಂದು ಪ್ರತಿಕಾಯಕ್ಕೆ ಆಯ್ಕೆಯನ್ನು ಸೀಮಿತಗೊಳಿಸಲಾಗಿದೆ ಎಂದಿದ್ದಾರೆ.

ಅಭಿವೃದ್ಧಿಪಡಿಸಿರುವ ಪ್ರತಿಕಾಯವನ್ನು ಪ್ರಾಣಿಗಳ ಮಾದರಿಗಳ ಮೇಲೆ ಪರೀಕ್ಷಿಸಲಾಗಿದೆ. ಒಂದು ಗುಂಪಿನ ಪ್ರಯೋಗಗಳಲ್ಲಿ, ಸಿಂಥೆಟಿಕ್ ಪ್ರತಿಕಾಯವನ್ನು ಪಾನಿನ ಹಟ್ಟೆ ಕಟ್ಟುಹಾವು (ಪೈಪಾನಿನ ಬ್ಯಾಂಡೆಡ್ ಲೈಟ್​​ನಿಂದ) ಸೃಜಿಸುವ ವಿಷಕಾರಿ ಟಾಕ್ಸಿನ್​ನೊಂದಿಗೆ ಮೊದಲೇ ಮಿಶ್ರಣ ಮಾಡಿ, ಅದನ್ನು ಇಲಿಗಳ ಶರೀರಕ್ಕೆ ಸೇರಿಸಲಾಗಿದೆ. ಕೇವಲ ವಿಷವನ್ನು ಸೇರಿಸಲಾಗಿದ್ದ ಇಲಿಗಳು ನಾಲ್ಕು ಗಂಟೆಗಳ ಅವಧಿಯೊಳಗೆ ಸತ್ತುಹೋಗಿವೆ. ಆದರೆ ವಿಷ-ಪ್ರತಿಕಾಯದ ಮಿಶ್ರಣವನ್ನು ಸೇರಿಸಲಾಗಿದ್ದ ಇಲಿಗಳು 24 ಗಂಟೆಗಳ ಪರಿವೀಕ್ಷಣಾ ಅವಧಿಯ ನಂತರವೂ ಬದುಕುಳಿದಿವೆ. ಅಲ್ಲದೆ ಪೂರ್ತಿ ಆರೋಗ್ಯಕರವಾಗಿಯೂ ಉಳಿದಿವೆ ಎಂದು ಹೇಳಿದ್ದಾರೆ.

ಪೂರ್ವ ಭಾರತದ ಮಾನೊ ಕಲ್ಕ್ ನಾಗರಹಾವಿನ ಮತ್ತು ಆಫ್ರಿಕಾದಲ್ಲಿ ಸಹರಾದ ದಕ್ಷಿಣಕ್ಕಿರುವ ದೇಶಗಳಲ್ಲಿನ ಕಪ್ಪು ಮಾಂಬಾದ ವಿಷದ ವಿರುದ್ಧ ಕೂಡ ಪ್ರತಿಕಾಯವನ್ನು ತಜ್ಞರ ತಂಡ ಪರೀಕ್ಷಿಸಿದೆ. ಇದೇ ರೀತಿಯ ಫಲಿತಾಂಶಗಳನ್ನು ಕಂಡುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿಕಾಯದ ಪರಿಣಾಮ ಸಾಂಪ್ರದಾಯಿಕ ಉತ್ಪನ್ನಕ್ಕಿಂತ ಸುಮಾರು 15 ಪಟ್ಟು ಹೆಚ್ಚು ಎಂಬುದು ಕಂಡುಬಂದಿದೆ. ಮುಖ್ಯವಾಗಿ, ಮೊದಲು ವಿಷವನ್ನು ಸೇರಿಸಿದ ನಂತರ 10 ನಿಮಿಷ ಅಥವಾ 20 ನಿಮಿಷ ಬಿಟ್ಟು ಪ್ರತಿಕಾಯವನ್ನು ಸೇರಿಸಿದಾಗಲೂ ಇಲಿಗಳ ಪ್ರಾಣ ಉಳಿಸುವುದಕ್ಕೆ ಸಾಧ್ಯವಾಗಿದೆ ಎಂದು ನುಡಿದಿದ್ದಾರೆ.

ಅಭಿವೃದ್ಧಿಪಡಿಸಲಾಗಿರುವ ಪ್ರತಿಕಾಯವು ನಮ್ಮ ದೇಹದಲ್ಲಿನ ರಿಸೆಪ್ಪಾರ್ಗಳ ವಿಷಬಂಧಕ ನೆಲೆಯನ್ನು ಹೆಚ್ಚಿಸುತ್ತದೆ. ಪ್ರತಿಕಾಯವು ತಡವಾಗಿ ನೀಡಿದ ಸಂದರ್ಭದಲ್ಲಿಯೂ ವಿಷವನ್ನು ತಟಸ್ಥಗೊಳಿಸುವುದರಿಂದ, ಇದು ರಿಸೆನ್ಸಾರ್​​ಗಳಿಗೆ ಅಂಟಿಕೊಂಡಿರುವ ವಿಷವನ್ನು ಕದಲಿಸಲಿದೆ. ಒಂದೇ ಸಮಯದಲ್ಲಿ ಎರಡು ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ಸುಣಗಾರ್ ತಿಳಿಸಿದ್ದಾರೆ.

ಇದು ಸಂಪೂರ್ಣವಾಗಿ ಮನುಷ್ಯ ಜನ್ಯ ಪ್ರತಿಕಾಯವಾಗಿರುವುದರಿಂದ ಸಾಂಪ್ರದಾಯಿಕ ಪ್ರತಿವಿಧ ಚಿಕಿತ್ಸೆ ನೀಡಲಾಗುವವರಲ್ಲಿ ಅಪರೂಪಕ್ಕೆ ಕಂಡುಬರುವ ಮಾರಣಾಂತಿಕ ಅನಾಥೈಲ್ಯಾಕ್ಸಿಸ್ ಸೇರಿದಂತೆ ಇನ್ನಿತರ ಅಡ್ಡ ಪರಿಣಾಮಗಳನ್ನು ತಡೆಗಟ್ಟಬಹುದಾಗಿದೆ. ಜೀವರಕ್ಷರ ಪ್ರತಿವಿಷ ಉತ್ಪಾದಿಸಲು ಪ್ರಾಣಿಗಳಿಗೆ ಉಪದ್ರವ ನೀಡುವ ಪ್ರಮೇಯವೇ ಭವಿಷ್ಯದಲ್ಲಿ ಇದರಿಂದ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.

ಅಂಟಿವೆನಮ್ ಥೆರಪಿಯಾಗಿ ಸಂಯೋಜಿಸಬಲ್ಲ ಸಾಧ್ಯತೆ ಇದೆ: ವಿವಿಧ ಹಾವಿನ ವಿಷಗಳ ವಿರುದ್ಧ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಲು ಇದೇ ವಿಧಾನವನ್ನು ಬಳಸಬಹುದಾಗಿದೆ. ನಂತರ ಇದನ್ನು ಅಂಟಿವೆನಮ್ ಥೆರಪಿಯಾಗಿ ಸಂಯೋಜಿಸಬಲ್ಲ ಸಾಧ್ಯತೆ ಇದೆ. ಚಿಕಿತ್ಸಕ ಪ್ರಯೋಗಗಳ ಹಂತಕ್ಕೆ ತೆಗೆದುಕೊಂಡು ಹೋಗಬಹುದಾಗಿದೆ ಎಂದು ಸುಣಗಾರ್ ತಿಳಿಸಿದ್ದಾರೆ.

ಚಿಕಿತ್ಸೆಗಾಗಿ ಈ ಏಕೈಕ ಪ್ರತಿಕಾಯವನ್ನು ಅವಲಂಬಿಸುವುದು ಸಾಧ್ಯವಿಲ್ಲ. ಏಕೆಂದರೆ ಇದು ಸದ್ಯಕ್ಕೆ ಕೆಲವು ಎಲಾಪಿಡಿ ಕುಟುಂಬಕ್ಕೆ ಸೇರಿದ ಹಾವುಗಳ ವಿಷಗಳ ವಿರುದ್ಧ ಮಾತ್ರ ಪರಿಣಾಮಕಾರಿಯಾಗಿದೆ. ನಾವು ಇತರ ಹಾವುಗಳ ವಿಷದ ವಿರುದ್ಧ ಹೆಚ್ಚುವರಿ ಪ್ರತಿಕಾಯಗಳನ್ನು ಅನ್ವೇಷಿಸುವ ಪ್ರಕ್ರಿಯೆಯಲ್ಲಿದ್ದೇವೆ. ಭವಿಷ್ಯದಲ್ಲಿ ಸಾರ್ವತ್ರಿಕ ಪ್ರತಿವಿಷವೊಂದು ಅಂತಹ ಕೆಲವಾರು ಸಂಶ್ಲೇಷಿತ ಪ್ರತಿಕಾಯಗಳನ್ನು ಒಳಗೊಳ್ಳಲಿದೆ. ಪ್ರಪಂಚದ ವಿವಿಧ ಭಾಗಗಳ ಬಹುತೇಕ ಹಾವುಗಳ ವಿಷವನ್ನು ತಟಸ್ಥಗೊಳಿಸಬಲ್ಲದಾಗಿದೆ ಎನ್ನುವ ಆಶಾಭಾವನೆ ಈ ಅಧ್ಯಯನದಿಂದ ಮೂಡಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಾಯೋಗಿಕ ಹಂತಕ್ಕೆ ಕೊಂಡೊಯ್ಯಬಹುದಾಗಿದೆ: ಪ್ರಪಂಚದೆಲ್ಲೆಡೆ ಬಳಸಬಹುದಾದ ಒಂದು ಸಾರ್ವತ್ರಿಕ ಉತ್ಪನ್ನವನ್ನು ಅಥವಾ ಕನಿಷ್ಠ ಭಾರತದಾದ್ಯಂತ ಕೆಲಸ ಮಾಡಬಲ್ಲ ಪ್ರತಿಕಾಯಗಳ ಮಿಶ್ರಣವನ್ನು ಮಾನವ ಚಿಕಿತ್ಸೆಗೆ ಬಳಸಲು ಪ್ರಾಯೋಗಿಕ ಹಂತಕ್ಕೆ ಕೊಂಡೊಯ್ಯಬಹುದಾಗಿದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ :ಹಾವಿನ ಕಡಿತದಿಂದಾಗುವ ಸಾವು ತಪ್ಪಿಸಬಹುದು: ಅಧ್ಯಯನ

Last Updated : Feb 24, 2024, 1:18 PM IST

ABOUT THE AUTHOR

...view details