ಬೆಂಗಳೂರು:ರಾಜ್ಯ ಬಿಜೆಪಿಯಲ್ಲಿನ ಬಂಡಾಯ ಶಮನಕ್ಕೆ ಕಡೆಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಎಂಟ್ರಿ ಕೊಟ್ಟಿದೆ. ಬಣ ರಾಜಕೀಯಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಪ್ರಮುಖ ನಾಯಕರಿಗೆ ಬುಲಾವ್ ನೀಡಲಾಗಿದ್ದು, ಸಂಘದ ಪ್ರಮುಖರ ಉಪಸ್ಥಿತಿಯಲ್ಲಿ ಗುರುವಾರ ಮಹತ್ವದ ಸಭೆ ನಡೆಸಲಿದೆ. ಪ್ರಸ್ತುತ ರಾಜ್ಯ ಬಿಜೆಪಿಯಲ್ಲಿನ ಆಂತರಿಕ ವಿದ್ಯಮಾನಗಳ ಕುರಿತು ಚರ್ಚೆ ನಡೆಯಲಿದ್ದು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಿದೆ.
ನಾಳೆ ನಗರದ ಹೊರವಲಯದ ಚನ್ನೇನಹಳ್ಳಿಯಲ್ಲಿರುವ ಜನಸೇವಾ ವಿದ್ಯಾ ಕೇಂದ್ರದಲ್ಲಿ ಬಿಜೆಪಿ ನಾಯಕರ ಜೊತೆ ಆರ್ಎಸ್ಎಸ್ ಸಭೆ ನಡೆಸಲಿದೆ. ಆರ್ಎಸ್ಎಸ್ ಸರ ಸಹಕಾರ್ಯವಾಹ ಮುಕುಂದ್, ಹಿರಿಯ ಪ್ರಚಾರಕ ಸುಧೀರ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಅಸಮಾಧಾನಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಪ್ರತಿಪಕ್ಷ ನಾಯಕ ಆರ್. ಅಶೋಕ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಿ.ಟಿ. ರವಿ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಸುನೀಲ್ ಕುಮಾರ್ ಸೇರಿ ಪ್ರಮುಖ ನಾಯಕರಿಗೆ ಆಹ್ವಾನ ನೀಡಲಾಗಿದೆ.
ಯೋಗೇಶ್ವರ್ಗೆ ಟಿಕೆಟ್ ಕೊಡುವಂತೆ ಮನವಿ:2023ರ ಸೋಲಿನ ನಂತರ ಆರ್ಎಸ್ಎಸ್ ರಾಜ್ಯ ಬಿಜೆಪಿಗೆ ಸಲಹೆ ಕೊಡುವುದನ್ನು ನಿಲ್ಲಿಸಿದಂತಿತ್ತು. ಏಕಪಕ್ಷೀಯವಾಗಿ ವಿಜಯೇಂದ್ರರನ್ನು ಹೈಕಮಾಂಡ್ ರಾಜ್ಯದ ಅಧ್ಯಕ್ಷರನ್ನಾಗಿ ಮಾಡಿದೆ. ಇದಾದ ನಂತರ ಪಕ್ಷದ ಸೀನಿಯರ್ ಗುಂಪಿನಲ್ಲಿ ತಳಮಳವಿದೆ. ಚನ್ನಪಟ್ಟಣ ಚುನಾವಣೆ ವಿಷಯದಲ್ಲಿ ವಿಜಯೇಂದ್ರರನ್ನು ಬಿಟ್ಟು ಅಶೋಕ್, ಬೆಲ್ಲದ್, ಬೊಮ್ಮಾಯಿ ನೇತೃತ್ವದಲ್ಲಿ ದೆಹಲಿಗೆ ಹೋಗಿ ಕೇಂದ್ರ ಸಚಿವ ಜೋಶಿ ಮನೆಯಲ್ಲಿ ಸಭೆ ನಡೆಸಿ, ಸಿ.ಪಿ. ಯೋಗೇಶ್ವರ್ಗೆ ಟಿಕೆಟ್ ಕೊಡಿ ಎನ್ನುವ ಮನವಿ ಮಾಡಲಾಗಿದೆ. ವಿಜಯೇಂದ್ರರನ್ನು ಬಿಟ್ಟು ಈ ಸಭೆ ನಡೆಸಲಾಗಿದೆ, ಹಿರಿಯರಿಗೆ ವಿಜಯೇಂದ್ರ ಒಪ್ಪಿತವಲ್ಲ ಎನ್ನುವುದಕ್ಕೆ ಇದು ನಿದರ್ಶನ ಎನ್ನಲಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿ ವಿಜಯೇಂದ್ರರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇತರ ಹಲವರು ಕೂಡ ವಿರೋಧಿಸುತ್ತಿದ್ದಾರೆ. ಹಾಗಾಗಿ, ಬಣ ರಾಜಕೀಯ ಶಕ್ತಿ ಪಡೆದುಕೊಂಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.