ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದು, ಪ್ರವಾಸೋದ್ಯಮ ಉತ್ತೇಜನಕಾಕ್ಕಾಗಿ ಪರಿಷ್ಕೃತ ಪ್ರವಾಸೋದ್ಯಮ ನೀತಿ 2024-29 ಜಾರಿ ಮಾಡಲು ಮುಂದಾಗಿದ್ದಾರೆ.
- ಪ್ರವಾಸೋದ್ಯಮ ಉತ್ತೇಜನಕ್ಕಾಗಿ, ಪೌರಾಣಿಕ ಹಾಗೂ ಐತಿಹಾಸಿಕವಾಗಿ ಪ್ರಖ್ಯಾತಿ ಹೊಂದಿರುವ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಸ ಸೌಲಭ್ಯ ಅಭಿವೃದ್ಧಿಪಡಿಸಲು 100 ಕೋಟಿ ರೂ. ಅನುದಾನ ಮೀಸಲಿಡಲಾಗುವುದು.
- ರಾಜ್ಯದ ಪ್ರಮುಖ ಜಲಾಶಯಗಳ ಹಿನ್ನೀರಿನಲ್ಲಿ ಮತ್ತು ಕಡಲ ತೀರಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಜಲಕ್ರೀಡೆಗಳು ಮತ್ತು ಜಲಸಾಹಸ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಸರ್ಕಾರ ತೀರ್ಮಾನಿಸಿದ್ದು, ಅದಕ್ಕೆ ಬಜೆಟ್ನಲ್ಲಿ ಅನುದಾನ ಮೀಸಲು ಇಡಲಾಗಿದೆ.
- ಸಾಹಸ ಪ್ರವಾಸೋದ್ಯವನ್ನು ಉತ್ತೇಜಿಸಲು ರಾಜ್ಯದ ಪ್ರಮುಖ 10 ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೇಬಲ್ ಕಾರ್ / ರೋಪ್ ವೇ ಸೌಲಭ್ಯ ಅಭಿವೃದ್ಧಿ ಪಡಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
- ಗೋಕಾಕ್ ಜಲಪಾತವನ್ನು ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ ಪಡಿಸುವುದಾಗಿ ಬಜೆಟ್ನಲ್ಲಿ ಹೇಳಲಾಗಿದೆ.
- ರಾಜ್ಯದ 530 ಸಂರಕ್ಷಿತ ಸ್ಮಾರಕಗಳನ್ನು 3ಡಿ ಲೇಸರ್ ಸ್ಕ್ಯಾನಿಂಗ್ ಮೂಲಕ ಡಿಜಿಟಲ್ ದಾಖಲೀಕರಣ ಮಾಡಿದ ದೇಶದ ಪ್ರಥಮ ರಾಜ್ಯ ಎಂಬ ಶ್ರೇಯ ಕರ್ನಾಟಕದ್ದು. ಈ ಡಿಜಿಟಲ್ ಮಾಹಿತಿಗಳನ್ನು ಪರಿಣಾಮಕಾರಿ ಮತ್ತು ಸಂವಾದಾತ್ಮಕವಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು.
- ರಾಷ್ಟ್ರಕೂಟರ ಕಾಲದ ಕರ್ನಾಟಕದ ಮೊಟ್ಟ ಮೊದಲ ವಿಶ್ವವಿದ್ಯಾಲಯ ಎಂಬ ಸ್ಥಳೀಯ ನಂಬಿಕೆ ಹೊಂದಿರುವ ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ನಾಗಾವಿಯಲ್ಲಿನ ಪ್ರಾಚ್ಯಾವೇಶಗಳ ಸಂಶೋಧನೆ ಮತ್ತು ಸಂರಕ್ಷಣೆಗಾಗಿ Archaeological Survey of India (ASI)ಗೆ ಶಿಫಾರಸು ಮಾಡಲಾಗುವುದು ಎಂದು ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ.
- ಕೆ.ಎಸ್.ಟಿ.ಡಿ.ಸಿ ವತಿಯಿಂದ ಬಾಗಲಕೋಟೆಯ ಐಹೊಳೆಯಲ್ಲಿ ಸುಸಜ್ಜಿತ ಹೋಟೆಲ್ ನಿರ್ಮಾಣ ಹಾಗೂ ರೋರಿಚ್ ಮತ್ತು ದೇವಿಕಾರಾಣಿ ಎಸ್ಟೇಟ್ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು.
- ಬೀದರ್ ಹಾಗೂ ವಿಜಯಪುರದಲ್ಲಿ ಕರೇಜ್ ಎಂದು ಪ್ರಸಿದ್ಧವಾಗಿರುವ ಪುರಾತನ ನೀರು ಸರಬರಾಜು ವ್ಯವಸ್ಥೆಯನ್ನು ನುರಿತ ಸಂಸ್ಥೆಗಳ ತಾಂತ್ರಿಕ ನೆರವಿನೊಂದಿಗೆ 15 ಕೋಟಿ ರೂ. ವೆಚ್ಚದಲ್ಲಿ ಪುನಶ್ವೇತನ ಮಾಡಲು ನಿರ್ಧರಿಸಲಾಗಿದೆ.
- ರಾಜ್ಯದಲ್ಲಿ ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸಲು ಬಂಡೀಪುರ, ದಾಂಡೇಲಿ ಮತ್ತು ಕಬಿನಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಜೆಎಲ್ಆರ್ ಸಂಸ್ಥೆಯ ಮೂಲಕ ಇಂಟರ್‌ಪ್ರಿಟೇಷನ್ ಸೆಂಟರ್‌ಗಳ ನಿರ್ಮಾಣ ಮಾಡಲಾಗುವುದು.
- ಗದಗ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು.
- ಶ್ರೀ ರೇಣುಕಾ ಯಲ್ಲಮ್ಮನ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಸಂರಕ್ಷಿಸಿ ಅಭಿವೃದ್ಧಿಗೊಳಿಸಲು ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ರಚನೆಗೆ ಅಧಿಸೂಚನೆ ಹೊರಡಿಸಲಾಗಿದೆ.