ಬಾಗಲಕೋಟೆ: ಸರ್ಕಾರಿ ಇಲಾಖೆಗಳ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ಸಿಐಡಿಗೆ ವಹಿಸುವ ಮೂಲಕ ಬಾಗಲಕೋಟೆ ಪೊಲೀಸ್ ತನಿಖೆ ಚುರುಕುಗೊಳಿಸಿ ತಪ್ಪಿಸ್ಥರಿಗೆ ಬಿಸಿ ಮುಟ್ಟಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
"ಬಾಗಲಕೋಟೆಯ ಪ್ರವಾಸೋದ್ಯಮ, ಅಲ್ಪಸಂಖ್ಯಾತ, ಕಾರ್ಮಿಕರ, ಕೈಮಗ್ಗ-ಜವಳಿ, ಹಿಂದುಳಿದ ವರ್ಗಗಳ ಇಲಾಖೆಗಳ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು. ಬಾಗಲಕೋಟೆಯ ಐಡಿಬಿಐ ಬ್ಯಾಂಕಿನಲ್ಲಿ ಈ ಐದು ಇಲಾಖೆಗಳ 6.08 ಕೋಟಿ ರೂ. ಹಣವನ್ನು 33 ವಿವಿಧ ಖಾತೆಗಳಿಗೆ ಬ್ಯಾಂಕಿನ ಸಿಬ್ಬಂದಿ ವರ್ಗಾವಣೆ ಮಾಡಿದ್ದರು. ಇಲ್ಲಿಯವರೆಗೆ 9 ಜನ ಬ್ಯಾಂಕ್ ಸಿಬ್ಬಂದಿ ಸೇರಿ 19 ಜನರನ್ನು ಬಂಧನ ಮಾಡಿ, ವಿಚಾರಣೆ ನಡೆಸಲಾಗಿದೆ. 3 ಕೋಟಿ ರೂ.ಗೂ ಅಧಿಕ ಅವ್ಯವಹಾರ ಹಿನ್ನೆಲೆ ಪ್ರಕರಣದ ಸಮಗ್ರ ತನಿಖೆಗಾಗಿ ಸಿಐಡಿಗೆ ವಹಿಸಲಾಗಿದೆ" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ.