ಕಾಂಗ್ರೆಸ್ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶ ಮಂಗಳೂರು:ದೇಶದಲ್ಲಿ ಹಲವು ಯೋಜನೆಗಳನ್ನು ತರುವ ಮೂಲಕ ಬಡ ಜನರಿಗೆ, ದಲಿತರಿಗೆ, ಹಿಂದುಳಿದ ವರ್ಗದವರಿಗೆ ಶಕ್ತಿ ತುಂಬಿದ್ದು ಕಾಂಗ್ರೆಸ್ ಪಕ್ಷ. ಆದರೆ, ಈಗ ಜನತೆ ಮೋದಿ ಮೋದಿ ಎನ್ನುತ್ತಿದ್ದಾರೆ. ಮೋದಿ ಮೋದಿ ಎಂದರೆ ಹೊಟ್ಟೆ ತುಂಬುತ್ತದೆಯೇ? ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ. ಮಂಗಳೂರಿನ ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭೂ ಮಸೂದೆ ಕಾನೂನು ತಂದು ಉಳುವವನಿಗೆ ಭೂ ಮಾಲೀಕನನ್ನು ಮಾಡಿದ್ದು ಕಾಂಗ್ರೆಸ್. ಇದರಿಂದ ಯಾರು ಲಾಭ ಪಡೆದರೋ ಅವರು ಅದನ್ನು ಮರೆತರು. ಸೋನಿಯಾ ಗಾಂಧಿ ಆಹಾರ ಭದ್ರತೆ ಕಾನೂನು, ಉಚಿತ ಶಿಕ್ಷಣ ಕಾನೂನು ಮಾಡಿದರು. ಜನರು ಅದನ್ನೂ ಮರೆತರು. ಕಾಂಗ್ರೆಸ್ ಪಕ್ಷದಿಂದ ಲಾಭ ಪಡೆದವರು ಈಗ ಮೋದಿಗೆ ಜೈ ಎನ್ನುತ್ತಿದ್ದಾರೆ. ಮೋದಿ ಜನತೆಗೆ ಜಮೀನು ಕೊಟ್ರಾ? ಆಹಾರ ಭದ್ರತೆ ಕಾಯ್ದೆ ತಂದ್ರಾ? ಹೇಳಿದಂತೆ 15 ಲಕ್ಷ ರೂ. ಕೊಟ್ರಾ? ಬರೀ ಸುಳ್ಳು ಹೇಳುತ್ತಿದ್ದಾರೆಂದು ಖರ್ಗೆ ಕಿಡಿಕಾರಿದರು.
ಮೋದಿ ಮೋದಿ ಎಂದರೆ ಹೊಟ್ಟೆ ತುಂಬುತ್ತದೆಯೇ? ಎಂದು ಪ್ರಶ್ನಿಸಿದ ಅವರು, ಜನರಿಗೆ ವಿದ್ಯಾಭ್ಯಾಸ, ಅನ್ನ ಯೋಜನೆ ನೀಡಿದ್ದು ಕಾಂಗ್ರೆಸ್ ಸರ್ಕಾರ. ಕೇಂದ್ರದ ಬಿಜೆಪಿ ಸರ್ಕಾರ ಕೇವಲ ಜಗಳ ಹಚ್ಚುತ್ತದೆ. ಜನರನ್ನು ಮಾಲೀಕರನ್ನಾಗಿ ಮಾಡಿದ್ದು ನಾವು. ಆದರೆ, ಮುಂಜಾನೆ ಎದ್ದ ಕೂಡಲೇ ಕಾಂಗ್ರೆಸ್ ಬೈಯುತ್ತಾರೆ. ಯಾರು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೋ ಅವರು ಬಡವರು ಮತ್ತು ಹಿಂದುಳಿದವರನ್ನು ತುಳಿಯುತ್ತಿದ್ದಾರೆ ಅಂತಲೇ ಅರ್ಥ. ಆದರೆ, ಕಾಂಗ್ರೆಸ್ ಪಕ್ಷ ನೀಡಿರುವ ಯೋಜನೆಗಳನ್ನು ಜನರು ಮರೆತದ್ದು ದುರಂತ. ಕನಿಷ್ಠ ರಾಜ್ಯ ಸರ್ಕಾರ ನೀಡಿರುವ ಈ ಐದು ಗ್ಯಾರಂಟಿಯನ್ನಾದರೂ ನೆನಪಿನಲ್ಲಿಟ್ಟುಕೊಳ್ಳಿ. ಹಿಂದೆ ಮಾಡಿದಂತೆ ಮಾಡಬೇಡಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶ ಪ್ರಧಾನಮಂತ್ರಿ ನರೇಂದ್ರ ಮೋದಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ. ತೆರಿಗೆ ಹಣ ರಾಜ್ಯಕ್ಕೆ ಬರುತ್ತಿಲ್ಲವೆಂದಾಗ ಸತ್ಯಾಗ್ರಹ ಮಾಡಬೇಕಾಯಿತು. ಇದು ಪರಿಣಾಮ ಬೀರದೇ ಇರದು. ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ 20 ಸ್ಥಾನ ಗೆಲ್ಲುವ ಮೂಲಕ ಬುದ್ಧಿ ಕಲಿಸಲಿದ್ದಾರೆ ಎಂದು ಖರ್ಗೆ ಹೇಳಿದರು.
ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿ ಪ್ರಪಂಚದಲ್ಲಿ ಇಲ್ಲ- ಸಿದ್ದರಾಮಯ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಮೋದಿ ಬರೀ ಸುಳ್ಳು ಹೇಳುತ್ತಾರೆ. ಅವರು ನಮ್ಮ ಗ್ಯಾರಂಟಿ ಪದವನ್ನು ಕದ್ದಿದ್ದಾರೆ. ಕೊಟ್ಟ ಮಾತು ಯಾವುದನ್ನು ಈಡೇರಿಸಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಮೋದಿಯಷ್ಟು ಸುಳ್ಳು ಹೇಳಿದ ಪ್ರಧಾನಮಂತ್ರಿಯನ್ನು ಪ್ರಪಂಚದಲ್ಲಿ ನೋಡಿಲ್ಲ. ಹಾಗಾಗಿ ಬಿಜೆಪಿಯನ್ನು ನಂಬಬೇಡಿ. ಅವರು ಅಧಿಕಾರಕ್ಕೆ ಬಂದಾಗ ನುಡಿದಂತೆ ನಡೆದಿಲ್ಲ. 2014ರಲ್ಲಿ ನೀಡಿದ ಯಾವುದಾದರೂ ಭರವಸೆ ಈಡೇರಿಸಿದ್ದಾರಾ? ಅಚ್ಛೆ ದಿನ್ ಆಯೇಗಾ ಎಂದು ಪೆಟ್ರೋಲ್, ಡೀಸೆಲ್, ಗ್ಯಾಸ್, ಗೊಬ್ಬರ, ಅಹಾರ ಪದಾರ್ಥ ಬೆಲೆ ಹೆಚ್ಚಿಸಿದರು. ರಾಜ್ಯದ ಜನ ಇದನ್ನು ಯೋಚನೆ ಮಾಡಬೇಕು. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 28ರಲ್ಲಿ 20 ಸ್ಥಾನ ಕಾಂಗ್ರೆಸ್ ಗೆಲ್ಲಲಿದೆ. ಬಿಜೆಪಿ 28 ಸ್ಥಾನದಲ್ಲಿ ಗೆಲ್ಲುತ್ತದೆ ಎಂದು ಹೇಳುವುದು ಜನರ ದಾರಿ ತಪ್ಪಿಸುವ ತಂತ್ರ ಎಂದರು.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ಮೋದಿ ಪ್ರಧಾನಿಯಾದರೆ ಹೆಚ್ ಡಿ ದೇವೆಗೌಡರು ದೇಶ ಬಿಟ್ಟು ಹೋಗುವೆ ಎಂದಿದ್ದರು. ಈಗ ಒಟ್ಟಾಗಿದ್ದಾರೆ. ಆದರೂ, ನಾವು ಚಿಂತೆ ಮಾಡುವುದಿಲ್ಲ. ನಾವು ತತ್ವ ನೀತಿಯಲ್ಲಿ ಇದ್ದು, ಎಲ್ಲಾ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ. ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಐಸಿಸಿ ಉಸ್ತುವಾರಿ ರಣದೀಪ್ ಸುರ್ಜೇವಾಲ ಮಾತನಾಡಿ, ಮೋದಿ ಕೊಟ್ಟ ಭರವಸೆಯಂತೆ 2 ಕೋಟಿ ಉದ್ಯೋಗ, 15 ಲಕ್ಷ ಹಣ, 50 ಲಕ್ಷ ಕೋಟಿ ಕಪ್ಪು ಹಣ ತರಲು ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಕಾರ್ಯಕ್ರಮದಲ್ಲಿ ರಾಜ್ಯದ ಸಚಿವರುಗಳು, ಮಾಜಿ ಮುಖ್ಯಮಂತ್ರಿ, ರಾಜ್ಯ ಕಾಂಗ್ರೆಸ್ ಮುಖಂಡರು, ಶಾಸಕರು ಭಾಗಿಯಾಗಿದ್ದರು.
ಇದಕ್ಕೂ ಮುನ್ನ ನಗರದ ಅಡ್ಯಾರ್ನ ಸಹ್ಯಾದ್ರಿ ಮೈದಾನದಲ್ಲಿ ರಾಜ್ಯ ಕಾಂಗ್ರೆಸ್ ಸಮಾವೇಶಕ್ಕೆ ಆಗಮಿಸಿರುವ ಸಿಎಂ ಸಿದ್ದರಾಮಯ್ಯ ಅವರ ಕಾರಿಗೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕಪ್ಪು ಬಾವುಟ ಹಿಡಿದು ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಬಿಜೆಪಿ ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸಿರುವುದು, ಬಜೆಟ್ನಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಅನುದಾನ ನೀಡಿರುವುದನ್ನು ಖಂಡಿಸಿ ಬಿಜೆಪಿಗರು ಮುತ್ತಿಗೆ ಹಾಕಲು ಯತ್ನಿಸಿದರು.
ಇದನ್ನೂ ಓದಿ:ಸಿದ್ದರಾಮಯ್ಯ ಎಲ್ಲಾ ಜನಾಂಗ, ವರ್ಗಕ್ಕೂ ಬಜೆಟ್ ಮುಟ್ಟಿಸುವ ಕೆಲಸ ಮಾಡಿದ್ದಾರೆ : ಬಿ.ಆರ್ ಪಾಟೀಲ್