ಮಂಗಳೂರು:ಜೆರೋಸಾ ಶಾಲೆಯ ಶಿಕ್ಷಕಿಯಿಂದ ಧಾರ್ಮಿಕ ನಿಂದನೆ ಆರೋಪ ಪ್ರಕರಣ ಸಂಬಂಧ ತನಿಖಾಧಿಕಾರಿ ಆಕಾಶ್ ಶಂಕರ್ ಅವರು ವಿದ್ಯಾರ್ಥಿಗಳು ಹಾಗೂ ಪೋಷಕರ ವಿಚಾರಣೆ ನಡೆಸಿದ್ದಾರೆ. ಪ್ರಕರಣ ಸಂಬಂಧ ತನಿಖೆಗಾಗಿ ಸರ್ಕಾರವು ಐಎಎಸ್ ಅಧಿಕಾರಿ ಆಕಾಶ್ ಶಂಕರ್ ಅವರನ್ನು ಇತ್ತೀಚೆಗೆ ನೇಮಕ ಮಾಡಿತ್ತು.
ಆಕಾಶ್ ಅವರು ಮಂಗಳವಾರವೂ ಕೂಡ ಡಿಡಿಪಿಐ ಕಚೇರಿಯಲ್ಲಿ ಮುಂಜಾನೆಯಿಂದಲೇ ವಿವಿಧ ಹಂತದಲ್ಲಿ ತನಿಖೆ ನಡೆಸಿ, ಕೆಲವು ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಸುಮಾರು ಶೇ. 30ರಷ್ಟು ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಮೌಖಿಕವಾಗಿ ವಿಚಾರಣೆ ನಡೆಸಿದ್ದಾರೆ. ಪೋಷಕರು ಹಾಗೂ ವಿದ್ಯಾರ್ಥಿಗಳು ಪ್ರಕರಣ ಸಂಬಂಧ ತನಿಖಾಧಿಕಾರಿ ಮುಂದೆ ಹೇಳಿಕೆ ನೀಡಿದ್ದಾರೆ. ಜೊತೆಗೆ, ಶಾಲಾ ಆಡಳಿತ ಮಂಡಳಿಯನ್ನು ಕರೆಯಿಸಿ ವಿಚಾರಣೆ ನಡೆಸಲಾಗಿದೆ. ಶಾಲೆಗೂ ಭೇಟಿ ನೀಡಿದ್ದಾರೆ.
''ಎರಡು ದಿನಗಳಲ್ಲಿ ಈ ಪ್ರಕ್ರಿಯೆ ಮುಗಿಸುವ ಅಂದಾಜಿದ್ದರೂ ಇನ್ನಷ್ಟು ಮಾಹಿತಿ ಕಲೆಹಾಕುವ ಅವಶ್ಯಕತೆ ಇರುವುದರಿಂದ ತನಿಖೆ ಮುಂದುವರೆಯಲಿದೆ. ಈ ಸಂದರ್ಭದಲ್ಲಿ ಎಲ್ಲರಿಗೂ ತಮ್ಮ ಅನಿಸಿಕೆ ನೀಡಲು ಮುಕ್ತ ಅವಕಾಶ ನೀಡಲಾಗಿದೆ. ತನಿಖೆಯನ್ನು ತರಾತುರಿಯಲ್ಲಿ ಮಾಡುವ ಉದ್ದೇಶವಿಲ್ಲ. ನ್ಯಾಯಯುತವಾಗಿ ನಡೆಸಿ, ಸರ್ಕಾರಕ್ಕೆ ಸತ್ಯಾಂಶವನ್ನು ನೀಡಲಿದ್ದೇನೆ. ಎಲ್ಲವೂ ಪೂರ್ಣಗೊಂಡ ಬಳಿಕ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ'' ಎಂದು ಆಕಾಶ್ ಶಂಕರ್ ತಿಳಿಸಿದ್ದಾರೆ.
ಬೆದರಿಕೆ ಆರೋಪ, ಶಿಕ್ಷಕಿಯಿಂದ ದೂರು:ಈ ನಡುವೆಜೆರೋಸಾ ಶಾಲೆಯಲ್ಲಿ ಧಾರ್ಮಿಕ ನಿಂದನೆ ಆರೋಪಿಸಿ ಆಡಿಯೋ ಮಾಡಿದ ಪೋಷಕಿ ಇವರೇ ಎಂದು ಮಹಿಳೆಯ ಕುಟುಂಬದ ಸಹಿತ ಫೋಟೋವನ್ನು ಕಿಡಿಗೇಡಿಗಳು ವೈರಲ್ ಮಾಡಿದ್ದು, ಈ ಬಗ್ಗೆ ದೂರು ದಾಖಲಾಗಿದೆ. ತಮ್ಮ ಕುಟುಂಬದ ಫೋಟೋದೊಂದಿಗೆ, ನಂಬರ್ ಕೂಡ ವೈರಲ್ ಮಾಡಲಾಗಿದೆ ಎಂದು ಆರೋಪಿಸಿ ಕವಿತಾ ಎಂಬುವರು ದೂರು ದಾಖಲಿಸಿದ್ದಾರೆ. ಜೊತೆಗೆ, ವಿದೇಶದಿಂದ ನಿರಂತರ ಬೆದರಿಕೆ ಕರೆಗಳು ಬರುತ್ತಿವೆ ಎಂದು ಕಂಕನಾಡಿ ನಗರ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದಾರೆ.