ಮೈಸೂರು:ಸಂಸದೆ ಸುಮಲತಾ ಅವರು ನಮಗೆ ದೂರದವರು ಅಲ್ಲ, ಅಂಬರೀಶ್ ಇದ್ದಾಗಿನಿಂದಲೂ ಪರಿಚಿತರು. ರಾಜಕಾರಣದಲ್ಲಿ ಕೆಲವು ವ್ಯತ್ಯಾಸಗಳು ಇರುತ್ತವೆ, ಅವರು ನಮ್ಮ ಶಾಶ್ವತ ಶತ್ರು ಅಲ್ಲಾ. ಅಗತ್ಯವಿದ್ದರೆ ಅವರನ್ನು ಭೇಟಿ ಮಾಡುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಶ್ರೀಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವತ್ತು ಮಂಡ್ಯ ಅಭ್ಯರ್ಥಿ ವಿಚಾರವಾಗಿ ಸಮನ್ವಯ ಸಭೆ ನಡೆಯಲಿದೆ. ಬಳಿಕ ಫೈನಲ್ ನಿರ್ಧಾರಕ್ಕೆ ಬರಲಾಗುತ್ತದೆ. ಸುಮಲತಾ ಅವರು ನಮ್ಮ ಶಾಶ್ವತ ಶತ್ರು ಅಲ್ಲ. ರಾಜಕೀಯದಲ್ಲಿ ಹೋರಾಟ ಜಗಳ ಎಲ್ಲವೂ ಇದ್ದೇ ಇರುತ್ತದೆ. ಅವುಗಳನ್ನೆಲ್ಲ ದಾಟಿ ಮುಂದೆ ಸಾಗಬೇಕು ಎಂದು ಹೇಳುವ ಮೂಲಕ ಸುಮಲತಾ ಅವರೊಂದಿಗೆ ಸ್ನೇಹ ಹಸ್ತ ಚಾಚುವ ಮುನ್ಸೂಚನೆ ನೀಡಿದರು.
ಬಳಿಕ ಕಾರ್ಯಕರ್ತರ ಅಸಮಾಧಾನದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮೈಸೂರಿನಲ್ಲಿ 2014 ರಿಂದಲೂ ಲೋಕಸಭಾ ಚುನಾವಣೆಗೆ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿಯಲ್ಲಿದೆ ಇದು ಹೊಸದೇನಲ್ಲ. ಹಾಗಾಗಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಇಲ್ಲ. ಹಿಂದಿನಿಂದಲೂ ಎರಡು ಪಕ್ಷದ ಕಾರ್ಯಕರ್ತರಲ್ಲಿ ಸಮನ್ವಯತೆ ಇದೆ ಎಂದು ಹೆಚ್ಡಿಕೆ ಸ್ಪಷ್ಟನೆ ನೀಡಿದರು.