ಹುಬ್ಬಳ್ಳಿ:"ಮುಡಾ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ನೀಡಿದ್ದು ನಾಳೆ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾಗುತ್ತೇನೆ" ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಮುಂದಿನ ಯಾವುದೇ ಪ್ರಶ್ನೆಗಳಿಗೆ ಪ್ರತಿಕ್ರಿಯಿಸದೇ ಕಾರು ಹತ್ತಿ ಶಿಗ್ಗಾಂವಿ ಉಪ ಚುನಾವಣಾ ಪ್ರಚಾರಕ್ಕೆ ಹೊರಟರು. ಮುಡಾ ಪ್ರಕರಣದ ತನಿಖೆಯ ಭಾಗವಾಗಿ ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ನಿನ್ನೆಯಿಂದಲೂ ಸಿಎಂ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದರು.
ಸಿಎಂ ಸಿದ್ದರಾಮಯ್ಯ (ETV Bharat) ಸಿದ್ದರಾಮಯ್ಯನವರ ಶಕ್ತಿ ಅಡಗಿಸಲು ಸಾಧ್ಯವಿಲ್ಲ-ತಿಮ್ಮಾಪುರ:"ಸಿದ್ದರಾಮಯ್ಯನವರ ನಾಯಕತ್ವ ಮತ್ತು ಶಕ್ತಿ ಕುಂದಿಸಲು ಬಿಜೆಪಿಗರು ಪ್ರಯತ್ನಿಸುತ್ತಿದ್ದಾರೆ. ಇದು ಯಾವುದೇ ಕಾರಣಕ್ಕೂ ನಡೆಯುವುದಿಲ್ಲ" ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ತಿಳಿಸಿದರು.
ನಗರದಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಲೋಕಾಯಕ್ತ ಸಿದ್ದರಾಮಯ್ಯನವರಿಗೆ ನೋಟಿಸ್ ನೀಡಿದೆ. ಕೇಂದ್ರದ ನಾಯಕರು ಸಿದ್ದರಾಮಯ್ಯನವರ ಶಕ್ತಿ ಅಡಗಿಸಲು ಪ್ರಯತ್ನಿಸುತ್ತಿದ್ದಾರೆ. ಇದ್ಯಾವುದೂ ಅವರ ಮುಂದೆ ನಡೆಯಲ್ಲ" ಎಂದರು.
ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ (ETV Bharat) "ಇನ್ನು, ಅಬಕಾರಿ ಇಲಾಖೆಯಲ್ಲಿ ಯಾವುದೇ ವರ್ಗಾವಣೆಯಾಗಿಲ್ಲ. ಪ್ರೊಮೋಷನ್ ಕೊಡಲಾಗಿದೆ. ಹೊಸ ಲೈಸನ್ಸ್ ನೀಡುವ ಚಿಂತನೆಯನ್ನು ಸರ್ಕಾರ ತೆಗೆದುಕೊಂಡಿದೆ. ಈ ಬಗ್ಗೆ ಸಿಎಂ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ಅವರು ತಿಳಿಸಿದರು.
ಸತೀಶ್ ಜಾರಕಿಹೊಳಿ ಹೇಳಿದ್ದೇನು?:ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಲೋಕಾಯುಕ್ತ ಖುದ್ದು ಹಾಜರಾಗಲು ಸಿಎಂ ಸಿದ್ದರಾಮಯ್ಯನವರಿಗೆ ನೋಟಿಸ್ ಜಾರಿ ಮಾಡಿದ್ದು, ಅವರು ಹಾಜರಾಗಲೇಬೇಕು. ಲೋಕಾಯುಕ್ತದಿಂದ ನೋಟಿಸ್ ಬಂದಾಗ ಯಾರೇ ಆದರೂ ಹಾಜರಾಗಲೇಬೇಕಾಗುತ್ತದೆ. ಲೋಕಾಯುಕ್ತ ಎಲ್ಲದಕ್ಕಿಂತಲೂ ದೊಡ್ಡದು" ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಸಚಿವ ಸತೀಶ್ ಜಾರಕಿಹೊಳಿ (ETV Bharat) ಉಪಚುನಾವಣೆಯಲ್ಲಿ ಬಿಜೆಪಿ ಹಣ ಕೆಲಸ ಮಾಡಲ್ಲ- ಶಿವಾನಂದ ಪಾಟೀಲ್:"ಬಿಜೆಪಿಯವರು ಹಣದ ಮೇಲೆ ಚುನಾವಣೆ ಮಾಡುತ್ತಿದ್ದಾರೆ. ಹಣ ನೂರಕ್ಕೆ ನೂರರಷ್ಟು ಕೆಲಸ ಮಾಡಲ್ಲ. ಜನ ಬಿಜೆಪಿಯ ಹಣ ತೆಗೆದುಕೊಂಡು ಕಾಂಗ್ರೆಸ್ಗೆ ಮತ ಹಾಕ್ತಾರೆ. ಮೂರು ಉಪಚುನಾವಣೆ ಮುಗಿದ ನಂತರ ಬಿಜೆಪಿ ಪ್ರತಿಭಟನೆ ಮುಗಿಯುತ್ತದೆ, ಮನೆಗೆ ಹೋಗ್ತಾರೆ" ಎಂದು ಸಚಿವ ಶಿವಾನಂದ ಪಾಟೀಲ್ ಟೀಕಿಸಿದರು.
ನಗರದಲ್ಲಿಂದು ಮಾತನಾಡಿದ ಅವರು, "ನಮ್ಮ ಪಕ್ಷದಲ್ಲಿ ಸಾಮರಸ್ಯ ಇದೆ, ಬಿಜೆಪಿಯಲ್ಲಿ ಇಲ್ಲ. ಈ ಬಾರಿ ಕಾಂಗ್ರೆಸ್ ಖಂಡಿತ ಗೆದ್ದೇ ಗೆಲ್ಲುತ್ತದೆ. ಅದರಲ್ಲಿ ಎರಡು ಮಾತಿಲ್ಲ" ಎಂದರು.
ಸಚಿವ ಶಿವಾನಂದ ಪಾಟೀಲ್ (ETV Bharat) ವಕ್ಫ್ ವಿವಾದದ ಕುರಿತು:ವಕ್ಫ್ನಲ್ಲಿ ಕಾಂಗ್ರೆಸ್ ತಪ್ಪು ಮಾಡಿಲ್ಲ. ಈ ಹಿಂದೆ ಬಿಜೆಪಿ ಕೊಟ್ಟ ನೋಟಿಸ್ ಮುಂದುವರೆಯುತ್ತಿದೆ. ಕಾಂಗ್ರೆಸ್ ಯಾವತ್ತೂ ರೈತರ ವಿರೋಧಿ ಅಲ್ಲ. ಹಾಗೇನಾದರೂ ಆಗಿದ್ದರೆ ಕಾಂಗ್ರೆಸ್ 22 ಲಕ್ಷ ಎಕರೆ ಜಮೀನನ್ನು ದೇವರಾಜ ಅರಸು ಅವರಿದ್ದಾಗ ರಾಜ್ಯದ ಜನರಿಗೆ ಕೊಡ್ತಾ ಇರ್ಲಿಲ್ಲ. ನೀವು ಹೇಗೆ ಕಾಂಗ್ರೆಸ್ ರೈತ ವಿರೋಧಿ ಅಂತ ಹೇಳುತ್ತೀರಿ? ವಿಜಯಪುರದಲ್ಲಿ ರೈತರು ಯಾವುದೋ ಒಂದೆರಡು ಆಗಿದ್ದರೆ, ಧರಣಿ ಮಾಡ್ತಾರೆ. ಅವರಿಗೆ ಆ ಅಧಿಕಾರ ಇದೆ. ಅದಕ್ಕೆ ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ. ನೋಟಿಸ್ ಹಿಂಪಡೆದು, ರೈತರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇವೆ ಅಂದಿದ್ದಾರೆ" ಎಂದರು.
ಇದನ್ನೂ ಓದಿ:ಶಿಗ್ಗಾಂವಿ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್ ಭರ್ಜರಿ ಮತ ಪ್ರಚಾರ