ಕರ್ನಾಟಕ

karnataka

ETV Bharat / state

ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಅಮಿತ್ ಶಾಗೂ ಹೇಳಿ ಬರುತ್ತೇನೆ: ಕೆ.ಎಸ್. ಈಶ್ವರಪ್ಪ - K S Eshwarappa - K S ESHWARAPPA

''ನಾನು ಸ್ವಂತಕ್ಕೆ ಎಂಪಿ ಆಗುಬೇಕು ಎಂದು ಸ್ಪರ್ಧೆ ಮಾಡುತ್ತಿಲ್ಲ. ರಾಜ್ಯದ ಹಿಂದೂಗಳಿಗೆ, ಹಿಂದುತ್ವವಾದಿಗಳಿಗೆ ಅನುಕೂಲವಾಗಬೇಕು, ಕುಟುಂಬ ರಾಜಕಾರಣದಿಂದ ಪಕ್ಷವನ್ನು ಮುಕ್ತವಾಗಿಸಲು ಸ್ಪರ್ಧಿಸುತ್ತಿದ್ದೇನೆ'' ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಹೇಳಿದರು.

AMIT SHAH  SHIVAMOGGA  LOK SABHA ELECTION 2024  LOK SABHA ELECTION K S ESHWARAPPA
ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೆನೆಂದು ಅಮಿತ್ ಶಾಗೂ ಹೇಳಿ ಬರುತ್ತೇನೆ: ಕೆ.ಎಸ್. ಈಶ್ವರಪ್ಪ

By ETV Bharat Karnataka Team

Published : Apr 3, 2024, 8:14 AM IST

Updated : Apr 3, 2024, 1:39 PM IST

ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಮಾತನಾಡಿದರು.

ಶಿವಮೊಗ್ಗ:''ನನ್ನನ್ನು ದೆಹಲಿಗೆ ಕರೆದಿರುವ ದೇಶದ ಗೃಹ ಸಚಿವ ಅಮಿತ್ ಶಾ ಅವರಿಗೆ ನಾನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿ ಬರುತ್ತೇನೆ'' ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಹೇಳಿದರು.

ನಗರದ ಶುಭಮಂಗಳ ಸಮುದಾಯ ಭವನದಲ್ಲಿ ನಿನ್ನೆ (ಮಂಗಳವಾರ) ನಡೆದ ಮಹಿಳಾ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ''ನಿಮ್ಮನ್ನೆಲ್ಲ ನೋಡಿದರೆ ಓಂ ಶಕ್ತಿ ಹಾಗೂ ತಾಯಿ ಮಾರಿಕಾಂಬ ನೋಡಿದಷ್ಟೆ ಸಂತೋಷ ಆಗುತ್ತಿದೆ. ನನಗೆ ಬಹಳ ದಿನಗಳಿಂದ ಒಂದು ಆಸೆ ಇದೆ. ನಿಮಗೆ ಕಾಶಿಗೆ ಕರ್ಕೊಂಡು ಹೋಗುತ್ತೇನೆ ಎಂದು ಹೇಳಿದ್ದೆ, ನಿಮ್ಮನ್ನೆಲ್ಲ ಕಾಶಿ ಹಾಗೂ ಅಯೋಧ್ಯೆಗೆ ಕರೆದುಕೊಂಡು ಹೋಗುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಆಶೀರ್ವಾದದಿಂದ ನಾನು ಲೋಕಸಭಾ ಸದಸ್ಯ ಆಗೇ ಆಗುತ್ತೇನೆ. ಬೆಳಗ್ಗೆ ಅಮಿತ್ ಶಾ ಫೋನ್ ಮಾಡಿದ್ರು. ನೀವು ಚುನಾವಣೆಗೆ ನಿಲ್ಲಬೇಡಿ ಎಂದರು. ನಾನು ಯಾಕೆ ನಿಲ್ಲಬಾರದು ಎಂದೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್​​ ನಿಲ್ಲಿಸಲು ಹೇಳಿದರು, ನಿಲ್ಲಿಸಿದೆ. ಆಗ ನನ್ನ ಮೇಲೆ ಕೇಸು ಬಿತ್ತು. ದೇವರ ಆಶೀರ್ವಾದದಿಂದ ನಾನು ತಪ್ಪು ಮಾಡಿಲ್ಲ ಎಂದು ತೀರ್ಪು ಬಂತು'' ಎಂದು ತಿಳಿಸಿದರು.

ಪಕ್ಷ ಹಾಳಾಗಲು ನಾನು ಬಿಡಲ್ಲ:''ನಂತರ ನನಗೆ ಪುನಃ ಮಂತ್ರಿ ಮಾಡುವುದಾಗಿ ಯಡಿಯೂರಪ್ಪ, ಬೊಮ್ಮಾಯಿ ಹೇಳಿದ್ದರು. ಅಲ್ಲಿಯೂ ಸಹ ಮೋಸ ಆಯ್ತು. ಚುನಾವಣೆಗೆ ನಿಲ್ಲಬೇಡಿ ಎಂದು ಆದೇಶ ಮಾಡಿದರು, ನಾನು ತಕ್ಷಣ ಪತ್ರ ಬರೆದು ಅನುಕೂಲವಾಗಬೇಕೆಂದು ಹಿಂದೆ ಸರಿದೆ. ರಾಜ್ಯದಲ್ಲಿ ಅನಂತ್ ಕುಮಾರ್, ಯಡಿಯೂರಪ್ಪ, ಈಶ್ವರಪ್ಪ ನೋಡಿದ್ರೆ ಸೆಟ್ ದೋಸೆ ಎನ್ನುತ್ತಿದ್ದರು. ನಾವೆಲ್ಲಾ ಸೇರಿ 106 ಸ್ಥಾನ ತಂದೆವು. ಆದರೆ, ಯಡಿಯೂರಪ್ಪ ಕೈಗೆ ಪಕ್ಷ ಸಿಕ್ಕಿ 60 ಸೀಟಿಗೆ ಬಂದಿದೆ. ಈ ಪಕ್ಷ ಹಾಳಾಗಲು ನಾನು ಬಿಡಲ್ಲ'' ಎಂದರು‌.

''ಕಾಂಗ್ರೆಸ್ ಪಕ್ಷ ಒಂದೇ ಕುಟುಂಬದ ಕೈಯಲ್ಲಿ ಇದೆ. ಇವರಿಂದ ದೇಶವನ್ಜು ರಕ್ಷಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದಂತೆ‌ ನಾನು ನಮ್ಮ ರಾಜ್ಯದಲ್ಲಿ ಅಪ್ಪ, ಮಕ್ಕಳ‌ ಕೈಯಲ್ಲಿ ಇರುವ ಪಕ್ಷವನ್ನು ಮುಕ್ತಗೊಳಿಸುತ್ತೇನೆ. ಇದಕ್ಕಾಗಿ ನಾನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ, ಗೆದ್ದು ಕುಟುಂಬ ರಾಜಕೀಯದಿಂದ ಮುಕ್ತ ಮಾಡುತ್ತೇನೆ'' ಎಂದು ಕಿಡಿಕಾರಿದರು.

ಸ್ವಂತಕ್ಕೆ ಎಂಪಿ ಆಗುಬೇಕೆಂದು ಸ್ಪರ್ಧೆ ಮಾಡುತ್ತಿಲ್ಲ:''ಹಿಂದೂ ಹುಲಿಗಳಂತೆ ಇದ್ದ ಪ್ರತಾಪ್ ಸಿಂಹ, ಸಿ.ಟಿ. ರವಿ, ಸದಾನಂದ ಗೌಡ, ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಮೋಸ ಆಯ್ತು. ಇವರೆಲ್ಲ ಏನು ತಪ್ಪು ಮಾಡಿದ್ದರು. ಹಿಂದೂಪರ ಘೋಷಣೆ ಮಾಡಿದ್ದೆ ತಪ್ಪಾ'' ಎಂದು ಪ್ರಶ್ನಿಸಿದರು. ''ಇವರಿಗೆಲ್ಲ ಆಗಿರುವ ಅನ್ಯಾಯದ ವಿರುದ್ಧ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ಪಕ್ಷ ಕಟ್ಟಿದ ಕಾರ್ಯಕರ್ತರು ಇಂದು ನೋವು ಅನುಭವಿಸುತ್ತಿದ್ದಾರೆ. ಅವರೆಲ್ಲಾ ನೀವು ಚುನಾವಣೆಯಲ್ಲಿ ನಿಲ್ಲಿ, ನಿಮ್ಮನ್ನು ಎಂಪಿ ಮಾಡುತ್ತೇವೆ. ಜೊತೆಗೆ ರಾಜ್ಯದಲ್ಲಿ ಬಿಜೆಪಿಯನ್ನು ಶುದ್ಧೀಕರಣ ಮಾಡೋಣ ಎಂದು ಸಂತೋಷದಿಂದ ಹೇಳುತ್ತಿದ್ದಾರೆ. ನಾನು ಸ್ವಂತಕ್ಕೆ ಎಂಪಿ ಆಗುಬೇಕು ಎಂದು ಸ್ಪರ್ಧೆ ಮಾಡುತ್ತಿಲ್ಲ. ರಾಜ್ಯದ ಹಿಂದೂಗಳಿಗೆ, ಹಿಂದುತ್ವವಾದಿಗಳಿಗೆ ಅನುಕೂಲವಾಗಬೇಕು, ಕುಟುಂಬ ರಾಜಕಾರಣದಿಂದ ಪಕ್ಷವನ್ನು ಮುಕ್ತವಾಗಿಸಲು ಸ್ಪರ್ಧಿಸುತ್ತಿದ್ದೇನೆ'' ಎಂದು ಹೇಳಿದರು.

''ನಾನು ಚುನಾವಣೆಯಲ್ಲಿ ನಿಲ್ಲಬೇಕೋ, ಬೇಡವೋ ಎಂದು ನೆರೆದಿದ್ದ ಮಹಿಳೆಯರನ್ನು ಹೇಳಿದಾಗ ಅವರು ನೀವು ಚುನಾವಣೆಗೆ ನಿಲ್ಲಬೇಕು ಎಂದರು. ಇದೇ ರೀತಿ ರಾಜ್ಯಾದ್ಯಂತ ನನಗೆ ಫೋನ್​ ಬರ್ತಾ ಇದೆ. ನಾವು ನಿಮ್ಮ ಚುನಾವಣೆಗೆ ಬಂದು ಕೆಲಸ ಮಾಡಿ, ನಿಮ್ಮನ್ನು ಗೆಲ್ಲಿಸುತ್ತೇವೆ ಎನ್ನುತ್ತಿದ್ದಾರೆ. ಈ ಬಾರಿ ಹಣಕ್ಕಿಂತಲೂ ಧರ್ಮ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ'' ಎಂದು ನುಡಿದರು.

ಏಪ್ರಿಲ್ 12 ರಂದು ನಾಮಪತ್ರ ಸಲ್ಲಿಸುತ್ತೇನೆ. ಆ ದಿನ ನೀವು ಅಪಾರ ಸಂಖ್ಯೆಯಲ್ಲಿ ಸೇರಬೇಕು. ನಿಮ್ಮನ್ನು ನೋಡಿ ಓಂ ಶಕ್ತಿ, ಮಾರಿಕಾಂಬ ಮೆರವಣಿಗೆ ಬಂದಿದೆ ಅನ್ನಿಸಬೇಕು. ಅಮಿತ್ ಶಾ ಫೋನ್ ಮಾಡಿ ನಾಳೆ ದೆಹಲಿಗೆ ಬರಲು ತಿಳಿಸಿದ್ದಾರೆ. ಅಮಿತ್ ಶಾ ಅವರಿಗೆ ನಾನು ಗೆಲ್ಲುವ ಬಗ್ಗೆ ಖಚಿತ ಮಾಹಿತಿ ಇದೆ. ಹಾಗಾಗಿ ಯಡಿಯೂರಪ್ಪ ಹಾಗೂ ಅವರ ಮಕ್ಕಳು ಫೋನ್​ ಮಾಡಿಸಿದ್ದಾರೆ. ನಾನು ಈ ಭಾರಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿ ಬರುತ್ತೇನೆ'' ಎಂದು ಹೇಳಿದರು.

ಈಶ್ವರಪ್ಪ ಪುತ್ರ ಕೆ.ಈ. ಕಾಂತೇಶ್ ಮಾತನಾಡಿ, ''ಮಾರಿಕಾಂಬ ಜಾತ್ರೆ ದಿನ ರಾತ್ರಿ ಬಿ.ವೈ. ರಾಘವೇಂದ್ರ ಫೋನ್ ಮಾಡಿ ದೇವರಾಣೆ ನಿನಗೆ ಟಿಕೆಟ್ ಎಂದರು. ಆದರೆ ಎರಡು ದಿನ ನಂತರ ಬಸವರಾಜ ಬೊಮ್ಮಾಯಿಗೆ ಟಿಕೆಟ್ ಸಿಕ್ಕಿತು. ದೇವರ ಮೇಲೆ ಆಣೆ ಮಾಡಿ ಸುಳ್ಳು ಹೇಳಿದ ರಾಘವೇಂದ್ರಗೆ ದೇವರೇ ನೋಡಿಕೊಳ್ಳಲಿ. ನಮ್ಮ ಕುಟುಂಬದ ಮೇಲೆ ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ಪ್ರತಿವರ್ಷ ಓಂ ಶಕ್ತಿ ಪ್ರವಾಸ ಮಹಿಳೆಯರು ಮಾಡುತ್ತಾರೆ. ಈ ಬಾರಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಹಾಗೂ ನಮ್ಮ ತಂದೆಯವರು ಚುನಾವಣೆಯಲ್ಲಿ ಗೆಲ್ಲಲಿ ಎಂದು ಓಂ ಶಕ್ತಿ ಬಳಿ ಕೇಳಿಕೊಳ್ಳೋಣ'' ಎಂದು ಹೇಳಿದರು.

ಇದನ್ನೂ ಓದಿ:ಇಂದು ಸಂಸದೆ ಸುಮಲತಾ ನಿರ್ಧಾರ ಪ್ರಕಟ: ಬಿಜೆಪಿ ಸೇರ್ತಾರಾ, ಪಕ್ಷೇತರವಾಗಿ ಕಣಕ್ಕಿಳಿಯಲಿದ್ದಾರಾ? - Sumalatha Ambareesh

Last Updated : Apr 3, 2024, 1:39 PM IST

ABOUT THE AUTHOR

...view details