ಹುಬ್ಬಳ್ಳಿ: ಮಹಾ ಶಿವರಾತ್ರಿ ನಿಮಿತ್ತ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮಿಯ ರಥೋತ್ಸವದಲ್ಲಿ ಭಾಗವಹಿಸಿ ರಾತ್ರಿ ವೇಳೆ ಹಿಂದಿರುಗುವ ಭಕ್ತರು ಹಾಗೂ ಇತರ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ವ್ಯವಸ್ಥೆ ಮಾಡಿದೆ.
ಸಿದ್ದಾರೂಢ ಸ್ವಾಮಿ ರಥೋತ್ಸವದಲ್ಲಿ ಭಾಗವಹಿಸಿ ಹಿಂದಿರುಗುವ ಭಕ್ತರ ಅನುಕೂಲಕ್ಕಾಗಿ ಫೆ.27 ರಂದು ರಾತ್ರಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಪ್ರಮುಖ ಸ್ಥಳಗಳಿಗೆ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದ್ದಾರೆ.

ಪ್ರತಿ ವರ್ಷ ಮಹಾ ಶಿವರಾತ್ರಿ ಅವಧಿಯಲ್ಲಿ ಉತ್ತರ ಕರ್ನಾಟಕದ ಬಹು ಜನರ ಆರಾಧ್ಯ ದೈವ ಶ್ರೀ ಸಿದ್ಧಾರೂಢ ಸ್ವಾಮಿ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಶ್ರೀಗಳ ರಥೋತ್ಸವವು ವೈಭವದಿಂದ ಜರುಗಲಿದೆ. ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹುಬ್ಬಳ್ಳಿ- ಧಾರವಾಡ ಅವಳಿ ನಗರ, ಸುತ್ತ ಮುತ್ತಲಿನ ಊರುಗಳಲ್ಲದೇ, ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ, ಹೊಸಪೇಟೆ, ಕುಷ್ಟಗಿ, ಲಿಂಗಸುಗೂರು, ಗಂಗಾವತಿ, ರಾಯಚೂರು, ಸಿಂಧನೂರು, ಬಳ್ಳಾರಿ ಸೇರಿದಂತೆ, ವಿಜಯಪುರ, ಬಾಗಲಕೋಟೆ, ಇಲಕಲ್ ಮತ್ತಿತರ ಪ್ರಮುಖ ಸ್ಥಳಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ಗುರುವಾರ ರಥೋತ್ಸವ: ಈ ವರ್ಷ ಶ್ರೀ ಸಿದ್ಧಾರೂಢ ಸ್ವಾಮಿಯ ರಥೋತ್ಸವವು ಫೆಬ್ರವರಿ 27 ರಂದು ಗುರುವಾರ ಸಂಜೆ 5-30 ಗಂಟೆಗೆ ಜರುಗಲಿದೆ. ಶಕ್ತಿ ಯೋಜನೆ ಜಾರಿಯಲ್ಲಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬರಬಹುದೆಂದು ನಿರೀಕ್ಷಿಸಲಾಗಿದೆ. ಧಾರ್ಮಿಕ ಕಾರ್ಯಕ್ರಮಗಳು ಹಾಗೂ ರಥೋತ್ಸವದ ನಂತರ ಭಕ್ತರು ತಮ್ಮ ಊರುಗಳಿಗೆ ಹಿಂದಿರುಗಲು ಅನುಕೂಲವಾಗುವಂತೆ ಹುಬ್ಬಳ್ಳಿಯಿಂದ ವಿವಿಧ ಪ್ರಮುಖ ಸ್ಥಳಗಳಿಗೆ ವಿಶೇಷ ಬಸ್ಗಳ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರಿಂದ ಮನವಿ ಬಂದಿದೆ ಎಂದು ಹೆಚ್.ರಾಮನಗೌಡರ ತಿಳಿಸಿದರು.
ಈ ಹಿನ್ನೆಲೆಯಲ್ಲಿ ಫೆಬ್ರವರಿ 27 ರಂದು ಗುರುವಾರ ಶ್ರೀಗಳ ರಥೋತ್ಸವದ ನಂತರ ಹುಬ್ಬಳ್ಳಿಯಿಂದ ಕೊಪ್ಪಳ, ಹೊಸಪೇಟೆ, ಕುಷ್ಟಗಿ, ಲಿಂಗಸುಗೂರು, ಗಂಗಾವತಿ, ರಾಯಚೂರು, ಸಿಂಧನೂರು, ಬಳ್ಳಾರಿ ಸೇರಿದಂತೆ ವಿಜಯಪುರ, ಬಾಗಲಕೋಟೆ, ಇಲಕಲ್ ಮತ್ತಿತರ ಮತ್ತಿತರ ಪ್ರಮುಖ ಸ್ಥಳಗಳಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಈ ವಿಶೇಷ ಬಸ್ಗಳು ಹೊಸೂರು ಬಸ್ ನಿಲ್ದಾಣದಿಂದ ಹೊರಡುತ್ತವೆ. ಹೆಚ್ಚಿನ ಮಾಹಿತಿಗಾಗಿ ಬಸ್ ನಿಲ್ದಾಣಾಧಿಕಾರಿಯನ್ನು (7760991685 / 7760991662) ಸಂಪರ್ಕಿಸಬಹುದಾಗಿದೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಶಿವರಾತ್ರಿ: ಗೋಕರ್ಣ, ಮುರುಡೇಶ್ವರಕ್ಕೆ ಹುಬ್ಬಳ್ಳಿಯಿಂದ ವಿಶೇಷ ಬಸ್ ವ್ಯವಸ್ಥೆ
ಇದನ್ನೂ ಓದಿ: ಹುಬ್ಬಳ್ಳಿ-ಗೋವಾ ರೈಲು ಸಂಪರ್ಕ ಕಡಿತ: NWKRTCಯಿಂದ ವಿಶೇಷ ಬಸ್ ವ್ಯವಸ್ಥೆ