ಬೆಳಗಾವಿ:''ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮೇಲಿನ ಪ್ರಕರಣದಲ್ಲಿ ನಾನೂ ಸಹ ಹೋರಾಟ ಮಾಡುತ್ತೇನೆ. ಸ್ವಯಂ ಪ್ರೇರಿತವಾಗಿ ದೂರು ನೀಡಿ ಎಂದರೂ ಸಹ ಅಲ್ಲಿ ಮಹಿಳೆಯರು ಹೆದರುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಅವರಿಗೆ ಯಾವ ಶಿಕ್ಷೆ ಕೊಟ್ಟರೂ ಸಹ ಕಡಿಮೆಯೇ'' ಎಂದು ಹುಬ್ಬಳ್ಳಿಯಲ್ಲಿ ಕೊಲೆಯಾದ ವಿದ್ಯಾರ್ಥಿನಿ ನೇಹಾ ತಂದೆ ನಿರಂಜನ ಹಿರೇಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರ ಜೊತೆಗೆ ಅವರು ಮಾತನಾಡಿದರು. ''ಕಳೆದ ತಿಂಗಳು 18 ರಂದು ನನ್ನ ಮಗಳ ಹತ್ಯೆಯಾಯ್ತು. ಆಗ ಹೆಬ್ಬಾಳ್ಕರ್ ಅವರು ಚುನಾವಣೆ ಪ್ರಚಾರ ಬಿಟ್ಟು ನಮ್ಮ ಮನೆಗೆ ಬಂದು ಧೈರ್ಯ ತುಂಬಿದರು. ನನ್ನ ಬೇಡಿಕೆಗಳನ್ನು ಸಿಎಂ, ಡಿಸಿಎಂ ಹಾಗೂ ಕಾನೂನು ಸಚಿವರ ಬಳಿ ಮಾತನಾಡಿದರು'' ಎಂದು ತಿಳಿಸಿದರು.
''ಸಿಬಿಐಗೆ ಕೊಡಬೇಕು ಎನ್ನುವ ಬೇಡಿಕೆ ನಾವು ಇಟ್ಟಿದ್ದೆವು. ಹತ್ಯೆಯಾದ ನಾಲ್ಕನೇ ದಿನಕ್ಕೆ ಸಿಐಡಿ ಆದೇಶ ಪ್ರತಿ ಬಂತು. ಸಿಎಂ ಸಹ ಮನೆಗೆ ಬಂದು ನಿಮ್ಮೊಂದಿಗೆ ನಾವು ಇದ್ದೇವೆ ಎಂದು ಧೈರ್ಯ ತುಂಬಿದರು. ನುಡಿದಂತೆ ನಡೆದ ಹೆಬ್ಬಾಳ್ಕರ್ ಅವರಿಗೆ ಕೃತಜ್ಞತೆ ಸಲ್ಲಿಸಲು ನಾನು ಬೆಳಗಾವಿಗೆ ಬಂದಿದ್ದೇನೆ. ಕುಟುಂಬದವರಂತೆ ನನ್ನ ಬೆನ್ನಿಗೆ ನಿಂತಿದ್ದಾರೆ. 14 ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ನಮ್ಮ ಮಗಳ ಕೊಲೆಯ ಸುದ್ದಿಯಾಗಿದೆ'' ಎಂದು ಹೇಳಿದರು.
ಮೃಣಾಲ್ ಬೆಂಬಲಕ್ಕೆ ಆಗ್ರಹ: ''ಹೆಬ್ಬಾಳ್ಕರ್ ನನ್ನ ಅಕ್ಕನ ರೀತಿ ನಿಂತು ನನಗೆ ಧೈರ್ಯ ತುಂಬಿದ್ದಾರೆ. ಅವರಿಗೆ ನಾನು ಆಭಾರಿಯಾಗಿದ್ದಾನೆ. ವಿಧಾನಸಭೆಯಲ್ಲಿ ನಾನು ಧ್ವನಿ ಎತ್ತುವೆ ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ. ನಮ್ಮ ವೀರಶೈವ ಲಿಂಗಾಯತ ಸಮಾಜದ ಮೃಣಾಲ್ ಹೆಬ್ಬಾಳ್ಕರ್ ಅಭ್ಯರ್ಥಿಯಾಗಿದ್ದಾರೆ. ಮೃಣಾಲ್ ಸಂಸತ್ತಿನಲ್ಲಿದ್ದರೆ ಅವರೂ ಸಹ ಅಲ್ಲಿದ್ದು, ನಮ್ಮ ಫೈಲ್ ಫುಟ್ ಅಪ್ ಮಾಡುತ್ತಾರೆ. ಹಾಗಾಗಿ, ಅವರಿಗೆ ಮತದಾರ ಬಾಂಧವರು ದಯಮಾಡಿ ಆಶೀರ್ವಾದ ಮಾಡಬೇಕು. ಈಗ ತಪ್ಪಿದರೆ ನಮ್ಮ ಪರವಾಗಿ ಧ್ವನಿ ಎತ್ತುವವರು ಯಾರೂ ಇರಲ್ಲ. ನನಗೆ ಧ್ವನಿಯಾಗಿ ಲಕ್ಷ್ಮೀ ಹೆಬ್ಬಾಳ್ಕರ್ ನಿಂತಿದ್ದರು. ಈಗ ಅವರ ಮಗನಿಗೆ ನಾವು ಧ್ವನಿಯಾಬೇಕಿದೆ'' ಎಂದು ಕೇಳಿಕೊಂಡರು.