ಕರ್ನಾಟಕ

karnataka

ETV Bharat / state

ದೇವರಾಣೆಗೂ ನಾನು ಯಾವ ಸಂತ್ರಸ್ತೆಯನ್ನೂ ಭೇಟಿ ಮಾಡಿಲ್ಲ: ಶ್ರೇಯಸ್​ ಪಟೇಲ್ - Shreyas Patel - SHREYAS PATEL

ಪ್ರಜ್ವಲ್​ ರೇವಣ್ಣ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್​ ಪಟೇಲ್ ಪ್ರತಿಕ್ರಿಯಿಸಿದ್ದಾರೆ.

ಶ್ರೇಯಸ್​ ಪಟೇಲ್
ಶ್ರೇಯಸ್​ ಪಟೇಲ್ (ETV Bharat)

By ETV Bharat Karnataka Team

Published : May 8, 2024, 8:47 AM IST

ಶ್ರೇಯಸ್​ ಪಟೇಲ್ (ETV Bharat)

ಹಾಸನ: ''ಭಗವಂತನ ಆಣೆ ಮಾಡಿ ಹೇಳುವೆ, ಯಾವ ಸಂತ್ರಸ್ತೆಯರನ್ನೂ ನಾನು ಭೇಟಿ ಮಾಡಿಲ್ಲ. ದೇವರಾಜೇಗೌಡ ಹೇಳುತ್ತಿರುವುದು ಹಸಿ ಸುಳ್ಳು'' ಎಂದು ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್​ ಪಟೇಲ್ ತಿಳಿಸಿದರು.

ಹೊಳೆನರಸೀಪುರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಬಿಜೆಪಿ ಮುಖಂಡ ದೇವರಾಜೇಗೌಡ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಸುಳ್ಳಿನ ಸುರಿಮಳೆಯನ್ನು ನಮ್ಮ ನಾಯಕರು, ನಮ್ಮ ಮೇಲೆ ಮಾಡಿದ್ದಾರೆ. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ'' ಎಂದರು.

''ಸ್ಕೈಬರ್ಡ್ ಹೋಟೆಲ್​ನಲ್ಲಿ ಸಿಸಿಟಿವಿ ವಿಡಿಯೋ ಇದೆ, ಪರಿಶೀಲನೆ ನಡೆಸಲಿ. ಹಾಸನ, ಹೊಳೆನರಸೀಪುರದಲ್ಲಿ ಬಹಿರಂಗವಾಗಿ ಚರ್ಚೆಗೆ ಬರಲಿ. ನನ್ನ ಪಾತ್ರ ಇದೆ ಎಂದು ಸಾಬೀತು ಮಾಡಿದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. ಜೂ.4ರಂದು ಜನರ ಆಶೀರ್ವಾದದಿಂದ ಗೆದ್ದರೆ ಅಂದೇ ರಾಜೀನಾಮೆ ಕೊಡುತ್ತೇನೆ'' ಎಂದು ಸವಾಲು ಹಾಕಿದರು.

''ಈ ಪ್ರಕರಣದ ತನಿಖೆ ಸರಿಯಾಗಿ ನಡೆಯಬೇಕು. ದೇವರಾಜೇಗೌಡರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ. ಈಗಾಗಲೇ ವಕೀಲರ ಜೊತೆಗೆ ಮಾತನಾಡಿದ್ದೇನೆ. ನನಗೆ ಕಳಂಕ ಬರುವ ಕೆಲಸ ಮಾಡುತ್ತಿರುವ ದೇವರಾಜೇಗೌಡ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ. ಇವರು ಎಸ್ಐಟಿ ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರೆ. ಎನ್.ಆರ್.ವೃತ್ತದಲ್ಲಿ ಎಲ್ಇಡಿ ಹಾಕಿಸಿ ವಿಡಿಯೋ ತೋರಿಸುತ್ತೇನೆ ಅಂತ ಹೇಳಿದವರು ನಾನಾ, ಅವರಾ, ಯಾರು?'' ಎಂದರು.

''ಪೆನ್​ಡ್ರೈವ್ ವಿಚಾರ ಮಾತನಾಡಲು ಅಸಹ್ಯ ಆಗುತ್ತೆ. ನಾನು ಸುಸಂಸ್ಕೃತ ಕುಟುಂಬದಿಂದ ಬಂದವನು. ಅಕ್ಕ-ತಂಗಿಯರ ಜೊತೆ ಬೆಳೆದವನು. ಈ ರೀತಿಯ ಕೆಟ್ಟ ರಾಜಕಾರಣಕ್ಕೆ ಕಾರಣ ದೇವರಾಜೇಗೌಡ. ಎಸ್ಐಟಿ ದಿಕ್ಕು ತಪ್ಪಿಸಲು ಈ ರೀತಿ ಮಾತನಾಡುತ್ತಿದ್ದಾರೆ. ತಾನು ತಿಂದು ಬೇರೆಯವರ ಬಾಯಿಗೆ ಒರೆಸುತ್ತಿದ್ದಾರೆ. ದೇವರಾಜೇಗೌಡ ಬದ್ಧತೆ ಇಲ್ಲದ ರಾಜಕಾರಣಿ'' ಎಂದು ವಾಗ್ದಾಳಿ ನಡೆಸಿದರು.

''ಇವರು ರಾಜಕಾರಣಿನೋ? ವಕೀಲನೋ? ಗೊತ್ತಿಲ್ಲ. ಇದೆಲ್ಲಾ ರಾಜಕೀಯ ಷಡ್ಯಂತ್ರ. ನಾನು ಯಾವ ತನಿಖೆಗಾದರೂ ಸಿದ್ಧ. ನನ್ನ ಹೆಸರು ಏಕೆ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ. ನಾನು ಚರ್ಚೆಗೆ ಸಿದ್ಧನಿದ್ದೇನೆ, ನನ್ನ ಮುಂದೆ ದಾಖಲೆ ತೋರಿಸಲಿ. ಆಡಿಯೋಗಳನ್ನು ಅವರೇ ಸೃಷ್ಟಿಸಿದ್ದಾರೆ'' ಎಂದು ದೂರಿದರು.

ಇದನ್ನೂ ಓದಿ:ನಾಮಪತ್ರ ತಿರಸ್ಕಾರ ಪ್ರಕರಣ: ತಕರಾರು ಅರ್ಜಿ ಮೂಲಕ ಪರಿಹಾರ ಸಾಧ್ಯ- ಹೈಕೋರ್ಟ್ - Rejection Of Nomination Paper

ABOUT THE AUTHOR

...view details