ಕರ್ನಾಟಕ

karnataka

ETV Bharat / state

4 ವರ್ಷಗಳಿಂದ ನಾನು ಊರಿಗೆ ಹೋಗಿಲ್ಲ, ಬಿಜೆಪಿ ದ್ವೇಷ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ: ವಿನಯ್ ಕುಲಕರ್ಣಿ - MLA Vinay Kulkarni

ಶಾಸಕ ಮುನಿರತ್ನ ಬಂಧನದ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಸರ್ಕಾರದ ವಿರುದ್ಧ ಬಿಜೆಪಿ ಮಾಡಿರುವ ದ್ವೇಷ ರಾಜಕಾರಣ ಆರೋಪ ಕುರಿತಂತೆ ಬೆಳಗಾವಿಯಲ್ಲಿ ಧಾರವಾಡ ವಿಧಾನಸಭಾ ಕ್ಷೇತ್ರದ ಶಾಸಕ ವಿನಯ್​ ಕುಲಕರ್ಣಿ ಪ್ರತಿಕ್ರಿಯಿಸಿದ್ದಾರೆ.

vinay kulkarni
ವಿನಯ್ ಕುಲಕರ್ಣಿ (ETV Bharat)

By ETV Bharat Karnataka Team

Published : Sep 20, 2024, 7:55 PM IST

ಬೆಳಗಾವಿ:''ಬಿಜೆಪಿಯವರು ಎಷ್ಟು ಜನರಿಗೆ ಯಾವ ರೀತಿ ಟಾರ್ಚರ್ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಬಿಜೆಪಿ ದ್ವೇಷದ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ. ನಾಲ್ಕು ವರ್ಷಗಳಿಂದ ನಾನು ಊರಿಗೆ, ಕ್ಷೇತ್ರಕ್ಕೆ ಹೋಗಿಲ್ಲ. ಜನ ಇಲ್ಲಿಗೆ ಬಂದು ನನ್ನ ಮುಂದೆ ನಿಲ್ಲುವ ಪರಿಸ್ಥಿತಿ ಬಂದಿದೆ'' ಎಂದು ಶಾಸಕ ವಿನಯ್ ಕುಲಕರ್ಣಿ ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡುತ್ತಿದೆ ಎಂಬ ಸಂಸದ ಜಗದೀಶ ಶೆಟ್ಟರ್‌ ಹೇಳಿಕೆ‌ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಅವರು, ''ಬಿಜೆಪಿಯವರು ಮಾಡಿದ ದ್ವೇಷದ ರಾಜಕಾರಣ ನಾವ್ಯಾರು ಮಾಡಿಲ್ಲ. ಕ್ಷೇತ್ರದಲ್ಲಿ ನಾನು ಶಾಸಕನಾಗಿ ಆಯ್ಕೆಯಾಗಿ ಬಂದಿದ್ದೇನೆ. ಬೆಳಗ್ಗೆಯಿಂದ ರಾತ್ರಿಯವರೆಗೂ ಜನರ ಭೇಟಿ ಮಾಡುತ್ತೇನೆ. ಮುನಿರತ್ನ ವಿಚಾರದಲ್ಲಿ ಏನು ದ್ವೇಷದ ರಾಜಕೀಯ ಆಗಿದೆ. ಅವರು ಮಾತನಾಡಿ ಇದನ್ನೆಲ್ಲ ಮಾಡಿಕೊಂಡಿದ್ದಾರೆ. ಯಾರೇ ಇರಲಿ ಅಷ್ಟು ಕೀಳಾಗಿ ಮಾತನಾಡಬಾರದು. ಅವರು ಮಾಡಿದ್ದು ತಪ್ಪು'' ಎಂದು ಕಿಡಿಕಾರಿದರು.

ಶಾಸಕ ವಿನಯ್ ಕುಲಕರ್ಣಿ (ETV Bharat)

ರಾಜಕೀಯ ಕಮರ್ಷಿಯಲ್ ಆಗಿದೆ:ಮುನಿರತ್ನ ವಿರುದ್ಧ ಹೆಚ್​​ಐವಿ ಇಂಜೆಕ್ಷನ್ ಮಾಡುವ ಆರೋಪ ವಿಚಾರ ಪ್ರತಿಕ್ರಿಯಿಸಿ, ''ರಾಜಕಾರಣಕ್ಕೆ ನಾವು ಯಾವ ಉದ್ದೇಶಕ್ಕೆ ಬಂದಿರುತ್ತೇವೆ ಎನ್ನುವುದು ನಮಗೆ ಗೊತ್ತಿರಬೇಕು. ರಾಜಕೀಯ ಸಂಪೂರ್ಣ ಕಮರ್ಷಿಯಲ್ ಆಗಿಬಿಟ್ಟಿದೆ. ರಾಜಕಾರಣಿಗಳ ಜೊತೆಗೆ ಜನರೂ ಸಹ ಕಮರ್ಷಿಯಲ್ ಆಗಿದ್ದಾರೆ.‌ ಹೀಗಾಗಿ, ಸಂಪೂರ್ಣ ವ್ಯವಸ್ಥೆ ಕೆಟ್ಟು ಹೋಗಿದೆ. ಉತ್ತರ ಕರ್ನಾಟಕದ ರಾಜಕಾರಣಿಗಳು ಮಾನ ಮರ್ಯಾದೆಗೆ ಅಂಜಿ ಬದುಕುತ್ತಾರೆ. ಆದರೆ, ಬೆಂಗಳೂರು ಸಿಟಿಯಂತಹ ವ್ಯವಸ್ಥೆಯಲ್ಲಿ ಯಾರು ಏನು ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗುವುದೇ ಇಲ್ಲ. ಒಳ್ಳೆಯವರು ಯಾರು? ಕೆಟ್ಟವರು ಯಾರು? ಎಂದು ನೋಡಿ ಜನ ಆಯ್ಕೆ ಮಾಡಬೇಕು'' ಎಂದು ಅಭಿಪ್ರಾಯಪಟ್ಟರು.

ಪಂಚಮಸಾಲಿ ಮೀಸಲಾತಿ ಬಗ್ಗೆ ಸಿಎಂ ಭೇಟಿ:ಪಂಚಮಸಾಲಿ ಹೋರಾಟದಲ್ಲಿ ಸಮುದಾಯದ ಶಾಸಕರು ಧ್ವನಿ ಎತ್ತುತ್ತಿಲ್ಲ ಎಂದು ಕೂಡಲಸಂಗಮ ಸ್ವಾಮೀಜಿ‌ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿನಯ್ ಕುಲಕರ್ಣಿ, ''ಸಿಎಂಗೆ ನಾವು ನಾಲ್ಕೈದು ಬಾರಿ ಕೇಳಿಕೊಂಡಿದ್ದೇವೆ. ಅವರೂ ಸಹ ನಮಗೆ ಟೈಂ ಕೊಡುತ್ತೇನೆ ಅಂತ ಹೇಳಿದ್ದರು. ಅಂದು ಹಲವಾರು ಗದ್ದಲಗಳು ನಡೆದಿದ್ದರಿಂದ ಸಿಎಂ‌ ನಮಗೆ ಸಮಯ ಕೊಡಲು ಆಗಿರಲಿಲ್ಲ‌. ಇನ್ನೊಂದು ವಾರ ಬಿಟ್ಟು ಸ್ವಾಮೀಜಿಯವರನ್ನು ಸಿಎಂಗೆ ಭೇಟಿ ಮಾಡಿಸುತ್ತೇವೆ. ಕಳೆದ ಬಾರಿ ನಮಗೆ 2ಡಿ ಮೀಸಲಾತಿ ಕೊಟ್ಟಿದ್ದಾರೆ. ಮುಸ್ಲಿಂ ಸಮುದಾಯದ ಮೀಸಲಾತಿ ಕಡಿಮೆ ಮಾಡಿ ನಮಗೆ ಕೊಟ್ಟಿದ್ದರು. ಹಾಗಾಗಿ, ಅದನ್ನು ನಾವು ತಿರಸ್ಕರಿಸಿದ್ದೆವು'' ಎಂದರು.

''ಸದನದಲ್ಲಿ ಈ ಬಗ್ಗೆ ಚರ್ಚೆಗೆ ಅನುಮತಿ ನೀಡುವಂತೆ ಕೇಳಿಕೊಂಡಿದ್ದೆವು. ಆದರೆ, ಕಳೆದ ಬಾರಿ ಸದನವೇ ನಡೆದಿಲ್ಲ. ನಿರಂತರವಾಗಿ ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣದಲ್ಲಿಯೇ ಸದನ ಮುಗಿಯಿತು'' ಎಂದು ವಿನಯ್ ಕುಲಕರ್ಣಿ ಸಮರ್ಥಿಸಿಕೊಂಡರು.

ಇದನ್ನೂ ಓದಿ:SIT ಸಿದ್ದರಾಮಯ್ಯ, ಶಿವಕುಮಾರ್ ತನಿಖಾ ಸಂಸ್ಥೆ ಇದ್ದಂತೆ: ಹೆಚ್.​ಡಿ. ಕುಮಾರಸ್ವಾಮಿ ಆರೋಪ - H D kumaraswamy

ABOUT THE AUTHOR

...view details